ಬೆಂಗಳೂರು: ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು ಎಂಬ ಗಾದೆ ಮಾತಿನಂತೆ ಈ ಎಡಬಿಡಂಗಿ ಕಾಂಗ್ರೆಸ್ ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಎನ್ನುತ್ತಾರೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ಲೇವಡಿ ಮಾಡಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಬಂಡೀಪುರ ಅಭಯಾರಣ್ಯದಲ್ಲಿ ರಾತ್ರಿ ಸಂಚಾರ ನಿಷೇಧ ತೆರವು ಮಾಡುವ ಬಗ್ಗೆ ಇತ್ತೀಚೆಗಷ್ಟೇ ಒಬ್ಬೊಬ್ಬ ಸಚಿವರು ಒಂದೊಂದು ಹೇಳಿಕೆ ಕೊಟ್ಟು, ನಂತರ ಮುಖ್ಯಮಂತ್ರಿಗಳು ಉಲ್ಟಾ ಹೊಡೆದ ಮೇಲೆ ಇಡೀ ಸರ್ಕಾರವೇ ನಗೆಪಾಟಲಿಗೀಡಾಗಿತ್ತು. ಈಗ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ನೀರಿನ ಬಿಲ್ ಮೇಲೆ ಹಸಿರು ಸೆಸ್ ಹಾಕುವ ಪ್ರಸ್ತಾಪ ಮಾಡುತ್ತಿದ್ದಂತೆ ಅಂತಹ ಪ್ರಸ್ತಾವನೆಯೇ ಇಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಉಲ್ಟಾ ಹೊಡೆದಿದ್ದಾರೆ ಎಂದು ಅಶೋಕ್ ಲೇವಡಿ ಮಾಡಿದ್ದಾರೆ.
ಒಟ್ಟಿನಲ್ಲಿ ಈ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಎಡವಟ್ಟೆ, ಎಲ್ಲವೂ ಅಯೋಮಯವೇ. ಯಾವುದೇ ರೀತಿಯ ಪೂರ್ವ ಸಿದ್ಧತೆ ಇಲ್ಲದೆ, ಇಲಾಖೆಗಳ ನಡುವೆ ಸಮನ್ವಯ ಇಲ್ಲದೆ ತರಾತುರಿಯಲ್ಲಿ ಜಾರಿ ಮಾಡಿರುವ ಇ-ಖಾತಾ ಹಂಚಿಕೆ ಕಾರ್ಯಕ್ರಮ, ಸಾರ್ವಜನಿಕರಲ್ಲಿ ತೀವ್ರ ಗೊಂದಲ ಮೂಡಿಸಿದ್ದು, ಸರ್ಕಾರದ ಬೊಕ್ಕಸಕ್ಕೂ ನಷ್ಟವಾಗಿದೆ. ಭ್ರಷ್ಟಾಚಾರ, ಚುನಾವಣಾ ಪ್ರಚಾರ, ಹೈಕಮಾಂಡ್ ನಾಯಕರಿಗೆ ಸಂಪನ್ಮೂಲ ಕ್ರೂಢೀಕರಣ, ಬಣ ರಾಜಕೀಯ ಇವುಗಳಲ್ಲೇ ಮುಳುಗಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಸಚಿವರಿಗೆ ಆಡಳಿತ ಮೇಲೆ ಆಸಕ್ತಿಯೂ ಇಲ್ಲ, ಅಧಿಕಾರಿಗಳ ಮೇಲೆ ಹಿಡಿತವೂ ಇಲ್ಲ. ಹೀಗಿರುವಾಗ ಇನ್ನು ಅಧಿಕಾರಿಗಳು ನಡೆಸುವ ಸಭೆಗಳು ಕೇವಲ ಕಾಟಾಚಾರವಲ್ಲದೆ ಮತ್ತೇನಾಗಲು ಸಾಧ್ಯ? ಎಂದು ಪ್ರಶ್ನಸಿದ್ದಾರೆ.
Advertisement