ಬೆಳಗಾವಿ: ಎಸ್‌ಡಿಎ ರುದ್ರಣ್ಣ ಯಡವಣ್ಣವರ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ ತಹಶೀಲ್ದಾರ್ ಬಸವರಾಜ ನಾಗರಾಳ ಶುಕ್ರವಾರ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಘಟನೆ ಬಳಿಕ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳಾದ ತಹಶೀಲ್ದಾರ್ ಬಸವರಾಜ ನಾಗರಾಳ, ಅಶೋಕ ಕಬ್ಬಲಿಗೇರ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಪ್ತ ಸಹಾಯಕ ಸೋಮು ದೊಡವಾಡಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಜಿಲ್ಲಾ ನ್ಯಾಯಾಧೀಶ ಶಿರೋಳ ಅವರು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದರು.
ನಿರೀಕ್ಷಣಾ ಜಾಮೀನು ಮಂಜೂರಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಪ್ರಕರಣದ ಪ್ರಮುಖ ಮತ್ತು ಎ1 ಆರೋಪಿ ತಹಶೀಲ್ದಾರ್ ಬಸವರಾಜ ನಾಗರಾಳ ಶುಕ್ರವಾರ ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಎಸ್‌ಡಿಎ ಸಿಬ್ಬಂದಿ ರುದ್ರಣ್ಣ ಯಡವಣ್ಣವರ ಆತ್ಮಹತ್ಯೆ ಮಾಡಿಕೊಂಡ ಛೇಂಬರಿನಲ್ಲಿಯೇ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ ಎಸ್‌ಡಿಎ ಆಗಿದ್ದ ರುದ್ರಣ್ಣ ಯಡವನ್ನವರ ನವೆಂಬರ್ 5ರಂದು ತಹಶೀಲ್ದಾರ್ ಕೊಠಡಿಯಲ್ಲೇ ನೇಣಿಗೆ ಶರಣಾಗಿದ್ದರು.
ಆತ್ಮಹತ್ಯೆಗೂ ಮುನ್ನ, ತಮ್ಮ ಸಾವಿಗೆ ತಹಶೀಲ್ದಾರ್ ಬಸವರಾಜ ನಾಗರಾಳ, ಅಶೋಕ ಕಬ್ಬಲಿಗೇರ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಪ್ತ ಸಹಾಯಕ ಸೋಮು ದೊಡವಾಡಿ ಕಾರಣ ಎಂದು ಅವರ ಹೆಸರನ್ನು ವಾಟ್ಸ್‌ಆ್ಯಪ್ ಗ್ರೂಪಿನಲ್ಲಿ ಹಂಚಿಕೊಂಡಿದ್ದರು. ತದನಂತರ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆಯೇ ತಲೆಮರೆಸಿಕೊಂಡಿದ್ದರು.
ಘಟನೆ ನಡೆದು 10 ದಿನಗಳಾದರೂ ಮೂವರು ಪತ್ತೆಯಾಗಿರಲಿಲ್ಲ. ಆರೋಪಿಗಳ ಪತ್ತೆಗೆ ಬೆಳಗಾವಿ ಪೊಲೀಸರು ಗಂಭೀರ ಪ್ರಯತ್ನಗಳನ್ನು ಮಾಡಿರಲಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.
ಅಧಿಕಾರಿಗಳ ಅನುಪಸ್ಥಿತಿ ಹಾಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ಕಚೇರಿಯ ಬಹುತೇಕ ನೌಕರರನ್ನು ತನಿಖಾಧಿಕಾರಿಗಳು ವಿಚಾರಣೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿದ ಅನೇಕರು ಯಾವುದೇ ಕೆಲಸ ಮಾಡಲು ಸಾಧ್ಯವಾಗದೆ ವಾಪಸ್ಸಾಗುವಂತಾಗಿತ್ತು.
ಡಿಸಿಪಿ ರೋಷನ್ ಜಗದೀಶ್ ಅವರ ಮಾತನಾಡಿ, ಕಳೆದ 10 ದಿನಗಳಿಂದ ಆರೋಪಿಗಳ ಪತ್ತೆಗೆ ಸತತ ಪ್ರಯತ್ನ ನಡೆಸಲಾಗಿತ್ತು. ಆದರೆ, ಸಾಧ್ಯವಾಗಿರಲಿಲ್ಲ. ಇದೀಗ ಆರೋಪಿಗಳು ನಿರೀಕ್ಷಣಾ ಜಾಮೀನು ಪಡೆದದ್ದರೂ, ತನಿಖಾಧಿಕಾರಿಗಳು ಅವರನ್ನು ವಿಚಾರಣೆಗೊಳಪಡಿಸಬಹುದು ಎಂದು ಹೇಳಿದ್ದಾರೆ.
Advertisement