ಮಂಗಳೂರು: ನಾನು ಮಠದ ಹುಡುಗ, ಆದಿಚುಂಚನಗಿರಿ ಮಠದಲ್ಲಿ ಬೆಳೆದಿದ್ದು. ನಾನು ಜೆಡಿಎಸ್‌ಗೆ ಬರಲು ಆದಿಚುಂಚನಗಿರಿಯ ಹಿರಿಯ ಸ್ವಾಮೀಜಿಗಳು ಕಾರಣ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಅವರು ಶನಿವಾರ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಕ್ರಮ ಆಸ್ತಿ ಸಂಪಾದನೆ ಪ್ರಕರಣ ಸಂಬಂಧ ಲೋಕಾಯುಕ್ತ ನೋಟಿಎಸ್ ಬಂದದ್ದು ನನಗೆ ಗೊತ್ತಿಲ್ಲ. ಆದರೆ, ನೋಟಿಸ್ ಕೊಡೋದು ಸಾಮಾನ್ಯ. ಇಡಿಯವರು ಎಸಿಬಿಗೆ ಫಾರ್ವರ್ಡ್ ಮಾಡಿದ್ದಾರೆ, ಕೇಸ್ ಅಲ್ಲಿಂದ ಲೋಕಾಯುಕ್ತಗೆ ಬಂದಿದೆ. ನೋಟಿಸ್ ಬಂದ ಮೇಲೆ ವಿಚಾರಣೆ ಹೋಗಲೇಬೇಕು ಎಂದು ಹೇಳಿದರು.
ಕರಿಯಾ ನಿಂದನೆ ವಿಚಾರ ಕುರಿತ ಪ್ರಶ್ನೆಗೆ ಉತ್ತರಿಸಿ, ನಾನು ದೇವೇಗೌಡ ಕುಟುಂಬ ಖರೀದಿ ಮಾಡುತ್ತೇನೆ ಎಂದು ಹೇಳಿಲ್ಲ, ಕುಮಾರಸ್ವಾಮಿ ಮುಸ್ಲಿಮರು ನನಗೆ ಬೇಕಾಗಿಲ್ಲ ಅಂತ ಹೇಳಿದ್ದರು. ಈ ಹಿನ್ನೆಲೆಯಲ್ಲಿ ನಾನು ಹೇಳಿಕೆ ನೀಡಿದ್ದು. ಮುಸ್ಲಿಂ ಓಟ್ ಬೇಡ ಎಂದು ದುಡ್ಡು ಕೊಟ್ಟು ಖರೀದಿ ಮಾಡುತ್ತಿದ್ದೀರಿ ಅಲ್ವಾ? ಇದು ಎಷ್ಟು ಸರಿ ಎಂದು ಕೇಳಿದ್ದೆ ಎಂದು ತಿಳಿಸಿದರು.
ಮುಸ್ಲಿಮರು ಪಂಚರ್ ಹಾಕುವವರು, ವೆಲ್ಡಿಂಗ್ ಮಾಡುವರು ಅಂತಾ ಲಘುವಾಗಿ ಮಾತಾಡಿದ್ದಾರೆ. ಹೀಗಾಗಿ ಯಾಕೆ ಅವರ ಬಳಿ ಬಂದು ಓಟ್ ಕೇಳುತ್ತೀರಿ? ಹೌದು ಸ್ವಾಮಿ ನಾವು ಬಡವರು ಅವರ ಬಳಿ ಯಾಕೆ ಓಟ್ ಕೇಳುತ್ತೀರಿ. ಕುಮಾರಸ್ವಾಮಿಗೆ ಅದೇ ಪ್ರಶ್ನೆ ನಂದು, ಕುಮಾರಸ್ವಾಮಿ ಯಾವಾಗ ಸತ್ಯ ಹೇಳಿದ್ದಾರೆ? ಯೂ ಟರ್ನ್ ಕುಮಾರಸ್ವಾಮಿ ಅಂತ ಅವರ ಹೆಸರಿದೆ. ಯಾವಾಗ ಬೇಕಾದರೂ ಹೇಗೆ ಬೇಕಾದರೂ ಟರ್ನ್ ಮಾಡುತ್ತಾರೆ ಎಂದರು.
ಇದೇ ವೇಳೆ ನಾನು ಜನತಾದಳಕ್ಕೆ ಬರಲು ಕಾರಣ ಆದಿಚುಂಚನಗಿರಿ ಸ್ವಾಮೀಜಿ ಎಂದ ಜಮೀರ್ ಅಹ್ಮದ್ ಖಾನ್ ಅವರು, ನಾನು ಮಠದ ಹುಡುಗ, ಆದಿ ಚುಂಚನಗಿರಿ ಮಠದಲ್ಲಿ ಬೆಳೆದಿದ್ದು ನಾನು. ಶೇಖರ್ ಸ್ವಾಮೀಜಿ ಬಳಿ ಕೇಳಲು ಹೇಳಿ, ಪ್ರತಿ ಶನಿವಾರ ನಾನು ಬೆಳಗ್ಗಿನಿಂದ ಸಂಜೆವರೆಗೂ ಮಠದಲ್ಲಿ ಇರುತ್ತಿದ್ದೆ. ನಾನು ಸ್ವಾಮೀಜಿ ಮಡಿಲಲ್ಲಿ ಬೆಳೆದವನು. ಇದನ್ನು ಕುಮಾರಸ್ವಾಮಿ ಅವರಲ್ಲಿಯೇ ಕೇಳಿ ಎಂದು ಹೇಳಿದರು.
Advertisement