ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ವಿಚಾರಣೆಗೆ ಡಿಸೆಂಬರ್ 3 ರಂದು ಖುದ್ದು ಹಾಜರಾಗುವಂತೆ ಲೋಕಾಯುಕ್ತ ಪೊಲೀಸರು ನೊಟೀಸ್ ನೀಡಿದ್ದಾರೆ.
ಬೆಂಗಳೂರಿನ ಚಾಮರಾಜಪೇಟೆ ಬಳಿ ಇರುವ ತಮ್ಮ ಮನೆಗೆ ಬಂದು ಲೋಕಾಯುಕ್ತ ಇನ್‌ಪೆಕ್ಟರ್ ಸಚಿವರಿಗೆ ನೊಟೀಸ್ ನೀಡಿದ್ದು, ಸೂಕ್ತ ದಾಖಲೆಗಳೊಂದಿಗೆ ಖುದ್ದು ಹಾಜರಾಗುವಂತೆ ಸೂಚಿಸಿದ್ದಾರೆ. ಮೂರು ವರ್ಷಗಳ ಹಿಂದೆ ಜಮೀರ್ ವಿರುದ್ಧ ಎಸಿಬಿಯಲ್ಲಿ ಜಾರಿ ನಿರ್ದೇಶನಾಲಯದ ವರದಿ ಆಧರಿಸಿ ಅಕ್ರಮ ಆಸ್ತಿ ಸಂಪಾದನೆ ಪ್ರಕರಣ ದಾಖಲಾಗಿತ್ತು.
ತರುವಾಯ ಎಸಿಬಿ ರದ್ದುಗೊಂಡ ನಂತರ ಆ ಪ್ರಕರಣದ ಮುಂದುವರೆದ ತನಿಖೆಯನ್ನು ಲೋಕಾಯುಕ್ತ ಪೊಲೀಸರು ಕೈಗೆತ್ತಿಕೊಂಡಿದ್ದರು. ಪ್ರಾಥಮಿಕ ಹಂತದ ತನಿಖೆ ಮುಗಿಸಿದ ಪೊಲೀಸರು, ಈಗ ಅಕ್ರಮ ಆಸ್ತಿ ಸಂಪಾದನೆ ಸಂಬಂಧ ವಿಚಾರಣೆಗೆ ಹಾಜರಾಗಲು ಸಚಿವರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.
ಇದರೊಂದಿಗೆ ಅಕ್ರಮ ಆಸ್ತಿ ಸಂಪಾದನೆ ವಿಚಾರದಲ್ಲಿ ಜಮೀರ್ ಅವರಿಗೆ ಮತ್ತೆ ಪೊಲೀಸರ ತನಿಖೆ ಸಂಕಷ್ಟ ಮುಂದುವರಿದಿದ್ದು, ತಮ್ಮ ಹಣಕಾಸು ವ್ಯವಹಾರದ ಕುರಿತು ಲೆಕ್ಕವನ್ನು ಲೋಕಾಯುಕ್ತಕ್ಕೆ ಸಚಿವರು ಸಲ್ಲಿಸಬೇಕಿದೆ. ತಮ್ಮ ಮೇಲಿನ ಆದಾಯಕ್ಕೂ ಮೀರಿ ಆಸ್ತಿ ಗಳಿಸಿದ ಆರೋಪದ ವಿಚಾರಣೆಗೆ ಪೂರಕ ದಾಖಲೆ ಸಮೇತ ಬರಲು ಸಚಿವರಿಗೆ ಕಾಲಾವಕಾಶ ನೀಡಲಾಗಿದೆ.
ಎಸಿಬಿ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಲೋಕಾಯುಕ್ತಕ್ಕೆ ಹಸ್ತಾಂತರಿಸಿದೆ, ಅದು ಈಗ ನನಗೆ ನೋಟಿಸ್ ನೀಡಿದೆ. ಇದು ಸಾಮಾನ್ಯ ನೋಟಿಸ್. ಇದರಲ್ಲಿ ಹೊಸದೇನೂ ಇಲ್ಲ ಎಂದು ಜಮೀರ್ ಖಾನ್ ಪ್ರತಿಕ್ರಿಯಿಸಿದ್ದಾರೆ.
ಮೂಲಗಳ ಪ್ರಕಾರ, ಐಎಂಎ ಪೊಂಜಿ ಹಗರಣದ ತನಿಖೆ ನಡೆಸುತ್ತಿರುವಾಗ, ಜಾರಿ ನಿರ್ದೇಶನಾಲಯ ಆಗಸ್ಟ್ 2021 ರಲ್ಲಿ ಜಮೀರ್ ಖಾನ್ ಮೇಲೆ ದಾಳಿ ನಡೆಸಿತ್ತು. ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಅಂಶಗಳನ್ನು ಇಡಿ ನಂತರ ಎಸಿಬಿಯೊಂದಿಗೆ ಹಂಚಿಕೊಂಡಿದೆ.
ಎಸಿಬಿ ನಿಷ್ಕ್ರಿಯಗೊಂಡ ನಂತರ, ಮುಂದಿನ ತನಿಖೆಗಾಗಿ ಪ್ರಕರಣವನ್ನು ಲೋಕಾಯುಕ್ತಕ್ಕೆ ವರ್ಗಾಯಿಸಲಾಯಿತು ಎಂದು ಅವರು ಹೇಳಿದರು.
Advertisement