ಕೋಆಪರೇಟೀವ್ ಮ್ಯಾನೇಜ್ ಮೆಂಟ್ ಪದವೀಧರರಿಗೆ ಉದ್ಯೋಗದಲ್ಲಿ ಮೀಸಲಾತಿ; ಪರಿಶೀಲಿಸಿ ಕ್ರಮ- ಸಿಎಂ ಸಿದ್ದರಾಮಯ್ಯ

ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರು ಹೆಚ್ಚೆಚ್ಚು ಸಹಕಾರಿ ಚಳವಳಿಯಲ್ಲಿ ತೊಡಗಿಸಿಕೊಳ್ಳಬೇಕು. ಹಾಲು ಉತ್ಪಾದಕ ಸಹಕಾರ ಸಂಘಗಳಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು
CM Siddaramaiah and others
ಸಿಎಂ ಸಿದ್ದರಾಮಯ್ಯ ಮತ್ತಿತರರು
Updated on

ಬಾಗಲಕೋಟೆ: ಸಹಕಾರ ನಿರ್ವಹಣೆ ಪದವೀಧರರಿಗೆ ಉದ್ಯೋಗದಲ್ಲಿ ಮೀಸಲಾತಿ ತರುವ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಭರವಸೆ ನೀಡಿದ್ದಾರೆ.

ರಾಜ್ಯ ಸಹಕಾರ ಮಹಾಮಂಡಳ, ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ ಆಯೋಜಿಸಿದ್ದ 71ನೇ ಅಖಿಲ‌ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ. ನಾನು ಯಾವತ್ತೂ ಸಹಕಾರಿ ಚಳವಳಿ ಮತ್ತು ಸಹಕಾರಿ ತತ್ವದ ಪರವಾಗಿ ಇರುವವನು. ಈ ಕಾರಣಕ್ಕೆ ಸಹಕಾರ ಇಲಾಖೆಯ ನೇಮಕಾತಿಗಳಲ್ಲಿ ಕೋಆಪರೇಟೀವ್ ಮ್ಯಾನೇಜ್ ಮೆಂಟ್ ಪದವಿ, ಡಿಪ್ಲೊಮೋ ಪಡೆದವರಿಗೆ ಮೀಸಲಾತಿ ನೀಡುವ ಪರವಾಗಿದ್ದೀನಿ ಎಂದರು.

ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರು ಹೆಚ್ಚೆಚ್ಚು ಸಹಕಾರಿ ಚಳವಳಿಯಲ್ಲಿ ತೊಡಗಿಸಿಕೊಳ್ಳಬೇಕು. ಹಾಲು ಉತ್ಪಾದಕ ಸಹಕಾರ ಸಂಘಗಳಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು ಮತ್ತು ಇವರಿಂದ ಹೆಚ್ಚೆಚ್ಚು ಹಾಲನ್ನು ಖರೀದಿಸಬೇಕು. ಸಹಕಾರ ಸಂಘಗಳ ಹಾಲಿಗೆ ಮಾರುಕಟ್ಟೆ ವಿಸ್ತರಿಸಬೇಕು. ಚನ್ನಪಟ್ಟಣ ತಾಲ್ಲೂಕೊಂದರಲ್ಲೇ 3 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ಲೀ ಹಾಲಿಗೆ 31 ರೂ ಅಂದರೆ 3 ಲಕ್ಷ ಲೀಟರ್ ಗೆ ಕೋಟಿ ರೂಪಾಯಿ ಆಗ್ತದೆ. ಇದು ಆರ್ಥಿಕತೆಗೂ ಹೆಚ್ಚಿನ ಕೊಡುಗೆ ನೀಡಿದಂತಾಗುತ್ತದೆ ಎಂದು ಹೇಳಿದರು.

ಹಾಲು ಉತ್ಪಾದಕರಿಗೆ ಅನುಕೂಲ ಮಾಡುವ ಉದ್ದೇಶದಿಂದಲೇ ನಮ್ಮ ಸರ್ಕಾರ ಕ್ಷೀರಭಾಗ್ಯ ಆರಂಭಿಸಿತು. ಲೀಟರ್ ಹಾಲಿಗೆ 5 ರೂ ಪ್ರೋತ್ಸಾಹಧನ ನೀಡುವುದನ್ನು ನಮ್ಮ ಅವಧಿಯಲ್ಲಿ ಆರಂಭಿಸಲಾಯಿತು. ರೈತರ ಕೈಯಲ್ಲೇ ಹಾಲು ಉತ್ಪಾದಕ ಸಂಘಗಳು ಇರಬೇಕು ಎನ್ನುವ ಉದ್ದೇಶದಿಂದ ಡೈರಿಗಳನ್ನು ರೈತರಿಗೇ ನೀಡುವ ತೀರ್ಮಾನ ಮಾಡಿದೆವು. ಈ ಅಧಿಕಾರ ವಿಕೇಂದ್ರೀಕರಣದಿಂದ ಗ್ರಾಮೀಣ ಆರ್ಥಿಕತೆ ಗಟ್ಟಿಯಾಯಿತು. ಇದೇ ಮಹಾತ್ಮಗಾಂಧಿಯವರ ಗ್ರಾಮ ಸ್ವರಾಜ್ಯದ ಆಶಯವೂ ಆಗಿದೆ. ಸಮಾನತೆಯ ಸಮಾಜ ನಿರ್ಮಾಣ ಆಗಬೇಕು ಎನ್ನುವ ಆಶಯದಿಂದ ಸಮಾಜದ ಎಲ್ಲಾ ವರ್ಗದವರಿಗೆ ಆರ್ಥಿಕ ಶಕ್ತಿ ನೀಡುವ ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸಿ ಜಾರಿ ಮಾಡಿದೆ ಎಂದರು.

ಸಹಕಾರ ಕ್ಷೇತ್ರ ರಾಜ್ಯ ವ್ಯಾಪ್ತಿಗೆ ಸೇರಿದ್ದು. ಆದರೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರದಲ್ಲಿ ಸಹಕಾರ ಇಲಾಖೆ ಆರಂಭಿಸಿದರು. ಇದಕ್ಕೆ ಅಮಿತ್ ಶಾ ಅವರೇ ಸಚಿವರು‌. ಇದು ಕೇಂದ್ರದ ವ್ಯಾಪ್ತಿಗೆ ಬರುವ ವಿಷಯ ಅಲ್ಲ. ಇದರಿಂದಾಗಿ ನಮಗೆ ನಬಾರ್ಡ್ ನಿಂದ ಬರುವ ರೈತರ ಪಾಲಿನ ನೆರವು ಕಡಿತಗೊಂಡಿದೆ. ಒಮ್ಮೆಲೇ ಶೇ.58 ರಷ್ಟು ನಬಾರ್ಡ್ ನೆರವು ಕಡಿತಗೊಂಡಿದೆ. ಇದು ನಮ್ಮ ರೈತರಿಗೆ ಆದ ಬಹಳ ದೊಡ್ಡ ಅನ್ಯಾಯ. ರೈತರ ಬಗ್ಗೆ ಬಿಜೆಪಿ ಭಾಷಣ ಮಾತ್ರ ಚೆನ್ನಾಗಿ ಮಾಡುತ್ತದೆ. ಬರೀ ಭಾಷಣದಿಂದ ರೈತರ ಬದುಕನ್ನು ಉದ್ಧಾರ ಮಾಡಲು ಸಾಧ್ಯವಿಲ್ಲ. ಆದ್ದರಿಂದ ನಬಾರ್ಡ್ ನಿಂದ ನಮಗೆ ಆದ ಅನ್ಯಾಯವನ್ನು ಪ್ರತಿಯೊಬ್ಬರು ಪ್ರತಿಭಟಿಸಬೇಕು ಎಂದು ಕರೆ ನೀಡಿದರು.

2013 ರಲ್ಲಿ ರೂ. 8,165 ಕೋಟಿ ರೈತರ ಸಾಲವನ್ನು ಮೊದಲ ಬಾರಿ ಮುಖ್ಯಮಂತ್ರಿಯಾಗಿ ಮನ್ನಾ ಮಾಡಿದ್ದೆ. ಇದರಿಂದ ಸಹಸ್ರಾರು ರೈತರ ಬದುಕಿಗೆ ನೆರವಾಯಿತು. ಸಹಕಾರ ಮಹಾಮಂಡಳದ ಕಟ್ಟಡಗಳ ನಿರ್ಮಾಣಕ್ಕೆ ಸರ್ಕಾರದ ನೆರವು ನೀಡಬೇಕು ಎನ್ನುವ ಬೇಡಿಕೆ ಇದೆ. ಈ ಬೇಡಿಕೆಯನ್ನೂ ಈಡೇರಿಸಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com