ವಿಜಯನಗರ: ವಿಂಟೇಜ್ ಕಾರುಗಳ ಪ್ರವಾಸದಲ್ಲಿ ಹೊರಟಿದ್ದ ಕಾರಿಗೆ ಹೊಸಪೇಟೆಯ ಹಂಪಿ ಸಮೀಪ ರಾಯರಕೆರೆ ಎಂಬಲ್ಲಿ ಭಾನುವಾರ ಬೆಳಗ್ಗೆ ಬೆಂಕಿ ಹತ್ತಿಕೊಂಡು ಕಾರು ಸಂಪೂರ್ಣವಾಗಿ ಭಸ್ಮವಾಗಿದೆ.
ನಿನ್ನೆ ಹಂಪಿ, ಅಂಜನಾದ್ರಿ, ತುಂಗಭದ್ರಾ ಅಣೆಕಟ್ಟು ಪ್ರದೇಶಗಳಿಗೆ ತೆರಳಿದ್ದ ಭಾರತದ 20 ಕಾರುಗಳಲ್ಲಿ ಈ ಕಾರು ಸಹ ಸೇರಿತ್ತು. ಎಕ್ಸ್ ಪ್ಲೋರ್ ಕರ್ನಾಟಕ ಹಿಸ್ಟೋರಿಕ್ ಡ್ರೈವ್ 2024 ಹೆಸರಿನಲ್ಲಿ ವಿಂಟೇಜ್ ಕಾರುಗಳ ಪ್ರವಾಸವಾಗಿದ್ದು, ಕಮಲಾಪುರದ ಇವಾಲ್ವ್ ಬ್ಯಾಕ್ ರೆಸಾರ್ಟ್ ನಲ್ಲಿ ತಂಗಿದ್ದ ಈ ಕಾರುಗಳು ವಿದೇಶದ 20 ಕಾರುಗಳ ಜತೆ ಚಿಕ್ಕಮಗಳೂರಿನತ್ತ ತೆರಳುತ್ತಿದ್ದಾಗ ದುರಂತ ಸಂಭವಿಸಿದೆ.
ಬೆಂಕಿಗೆ ಆಹುತಿಯಾದ ಕಾರು ಹಿಂದೆ ಇತ್ತು. ರಾಯರಕೆರೆ ಸಮೀಪಕ್ಕೆ ಬಂದಾಗ ಬೆಳಗ್ಗೆ 9 ಗಂಟೆ ವೇಳೆಗೆ ಕಾರಿಗೆ ಒಮ್ಮಿಂದೊಮ್ಮೆಲೆ ಬೆಂಕಿ ಹತ್ತಿಕೊಂಡಿತು. ಕಾರಲ್ಲಿದ್ದವರು ತಕ್ಷಣ ಕಾರು ನಿಲ್ಲಿಸಿ ಇಳಿದ ಕಾರಣ ಏನೂ ಅಪಾಯವಾಗಿಲ್ಲ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರು. ಅಷ್ಟರಲ್ಲಿ ಕಾರು ಬಹುತೇಕ ಭಸ್ಮವಾಗಿತ್ತು.
ಸ್ಥಳಕ್ಕೆ ಶಾಸಕ ಹೆಚ್ ಆರ್ ಗವಿಯಪ್ಪ ಭೇಟಿ ನೀಡಿ ಪರಿಶೀಲಿಸಿದ್ದು ಕಾರಿನ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.
Advertisement