ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿನ 100 ವರ್ಷ ಹಳೆಯದಾದ ಶಾಲೆಯನ್ನು ವಕ್ಫ್ ಆಸ್ತಿಯನ್ನಾಗಿ ಘೋಷಣೆ ಮಾಡಲಾಗಿದೆ ಎಂದು ರಾಜ್ಯ ಬಿಜೆಪಿ ಮಂಗಳವಾರ ಆರೋಪಿಸಿದೆ. ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದ ಬಿಜೆಪಿ ನಿಯೋಗ ಇಂದು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ವೇಳೆ ಶಾಲಾ ಆವರಣದಲ್ಲೇ ದರ್ಗಾ ಇರುವುದು, ರಾಷ್ಟ್ರ ಧ್ವಜದ ಬದಲು ಹಸಿರು ಭಾವುಟ ಹಾರುತ್ತಿರುವುದನ್ನು ಕಂಡು ಅಧಿಕಾರಿಗಳ ವಿರುದ್ಧ ಅಶೋಕ್ ಕೆಂಡಾಮಂಡಲರಾದರು.
ಸರ್.ಎಂ. ವಿಶ್ವೇಶ್ವರಯ್ಯ ಗ್ರೇಡ್ 1ರಿಂದ 4ರವರೆಗೆ ವ್ಯಾಸಂಗ ಮಾಡಿದ್ದ ಶಾಲೆ ಇದಾಗಿದ್ದು, ಇದರ ಅಭಿವೃದ್ಧಿಗಾಗಿ ಅನೇಕ ಕಂಪನಿಗಳು ದೇಣಿಗೆ ನೀಡಿದ್ದು, ಸೂಕ್ತವಾದ ಕಾಂಪೌಂಡ್ ಕೂಡಾ ನಿರ್ಮಾಣ ಮಾಡಲಾಗಿದೆ. ಆದಾಗ್ಯೂ, ಶಾಲಾ ಆವರಣದಲ್ಲಿಯೇ ದರ್ಗಾ ನಿರ್ಮಾಣ ಮಾಡಲಾಗಿದೆ.100 ವರ್ಷ ಇತಿಹಾಸವಿರುವ ಶಾಲೆ ಆವರಣದೊಳಗೆ ಹೇಗೆ ದರ್ಗಾ ಬಂತು ಎಂದು ಪ್ರಶ್ನಿಸಿದ ಅಶೋಕ್, ರಾಜ್ಯ ಸರ್ಕಾರ ಶಾಲೆಯ ಮಕ್ಕಳನ್ನು ಮತಾಂತರಗೊಳ್ಳಲು ಪ್ರೋತ್ಸಾಹಿಸುತ್ತಿದೆ ಎಂದು ಆರೋಪಿಸಿದರು.
ಶಾಲೆಯನ್ನು ವಕ್ಫ್ ಆಸ್ತಿಯನ್ನಾಗಿ ಘೋಷಣೆ ಮಾಡಿರುವುದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇಡೀ ವರ್ಷ ಇಲ್ಲಿ ಹಸಿರು ಭಾವುಟ ಹಾರಾಡುತ್ತಿರುತ್ತದೆ. ತ್ರಿವರ್ಣ ಧ್ವಜದ ಬಗ್ಗೆ ಮಾತನಾಡುವ ಕಾಂಗ್ರೆಸ್, ಇಲ್ಲಿ ಹಸಿರು ಭಾವುಟ ಹಾರಾಟಕ್ಕೆ ಅವಕಾಶ ನೀಡಿದೆ. ಪ್ರತಿನಿತ್ಯ ಮಸೀದಿಯಿಂದ ಬರುವ ಜೋರಾದ ಶಬ್ದದೊಂದಿಗೆ ಹೇಗೆ ಮಕ್ಕಳು ಕಲಿಯಲು ಸಾಧ್ಯ? ಇಂತಹ ಭಾವುಟಗಳು ಇತರ ಯಾವುದೇ ಶಾಲೆಗಳಲ್ಲಿ ಇಲ್ಲ. ಆದರೆ ಇಲ್ಲಿನ ಮಕ್ಕಳಿಗೆ ಯಾವ ರೀತಿಯ ಸಂದೇಶ ಕಳುಹಿಸಲಾಗುತ್ತಿದೆ ಎಂದು ಪ್ರಶ್ನಿಸಿದರು.
ತಾವು ಇಲ್ಲಿಗೆ ಭೇಟಿ ನೀಡುತ್ತಿದ್ದಂತೆಯೇ ಶಾಲೆಯ ದಾಖಲಾತಿಯನ್ನು ಬದಲಾಯಿಸುವ ಪ್ರಯತ್ನ ನಡೆದಿದೆ. ಇದು ವಿಪಕ್ಷಗಳ ಬಲವಾಗಿದೆ. ವಿಶ್ವೇಶ್ವರಯ್ಯ ವ್ಯಾಸಂಗ ಮಾಡಿದ್ದ ಶಾಲೆಯನ್ನು ವಶಪಡಿಸಿಕೊಳ್ಳಲು ವಕ್ಫ್ ಬೋರ್ಡ್ ಪ್ರಯತ್ನ ನಡೆಸಿದೆ. ಇದನ್ನು ಸ್ವೀಕರಿಸಲು ಅಸಾಧ್ಯವಾಗಿದೆ ಎಂದು ಆಗಿದೆ ಎಂದು ಹೇಳಿದ ಅಶೋಕ್, ರೈತರ ದಾಖಲೆಯನ್ನು ಬದಲಾಯಿಸಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಟೀಕಿಸಿದರು.
ಇಲ್ಲಿನ ರೈತರು ಮೂರು ತಲೆ ಮಾರಿನಿಂದಲೂ ಜಮೀನು ಹೊಂದಿದ್ದಾರೆ. ಆದರೆ, ಈಗಿನ ದಾಖಲೆಗಳು ವಕ್ಫ್ ಆಸ್ತಿ ಎಂದು ತೋರಿಸುತ್ತಿವೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಚಿಕ್ಕಮ್ಮ ದೇವಾಲಯಕ್ಕೆ ಭೇಟಿ ವೇಳೆಯಲ್ಲೂ ಇದೇ ರೀತಿಯಲ್ಲಿ ಕಂಡುಬಂದಿತ್ತು. ನಂತರ ಜಮೀನು ದಾಖಲೆಗಳಲ್ಲಿ ವಕ್ಫ್ ನಮೂದನ್ನು ತೆಗೆದುಹಾಕಲಾಗಿದೆ. ಇಂತಹ ಬದಲಾವಣೆಯನ್ನು ಎಲ್ಲಾ ಕಡೆಗಳಲ್ಲಿ ಮಾಡಬೇಕಾಗಿದೆ. ವಕ್ಫ್ ಮಂಡಳಿ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.
Advertisement