ಬೆಂಗಳೂರು: ಏರ್ಪೋರ್ಟ್ ಮಾದರಿಯಲ್ಲಿ ಮೆಜೆಸ್ಟಿಕ್ ರೈಲು ನಿಲ್ದಾಣ ಅಭಿವೃದ್ಧಿ ಮಾಡುತ್ತೇವೆ ಎಂದು ರೈಲ್ವೆ ಇಲಾಖೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಸೋಮವಾರ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಅಭಿವೃದ್ಧಿಗೆ ಡಿಪಿಆರ್ ಸಿದ್ಧವಾಗಿದೆ. ರೈಲು ನಿಲ್ದಾಣ ಅಭಿವೃದ್ಧಿ ಬಗ್ಗೆ ರೈಲ್ವೆ ಮಂಡಳಿ ಕೆಲ ಸ್ಪಷ್ಟನೆ ಕೇಳಿದೆ. ಮುಂದಿನ ದಿನಗಳಲ್ಲಿ ರೈಲ್ವೆ ಮಂಡಳಿಗೆ ಮಾಹಿತಿ ನೀಡಲಾಗುವುದು. ಒಳ್ಳೆಯ ಕೆಲಸಗಳಿಗೆ ಪ್ರಧಾನಿ ಮೋದಿ ಬೇಡ ಎನ್ನುವುದಿಲ್ಲ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಜೊತೆ ಚರ್ಚಿಸಿ ಕೆಲಸ ಆರಂಭಿಸುತ್ತೇವೆ ಎಂದು ಹೇಳಿದರು.
ಸುಮಾರು 1500 ಕೋಟಿ ರೂ. ವೆಚ್ಚದಲ್ಲಿ ಏರ್ಪೋರ್ಟ್ಗಿಂತ ವಿಭಿನ್ನವಾಗಿ ಮೆಜೆಸ್ಟಿಕ್ ರೈಲು ನಿಲ್ದಾಣ ಅಭಿವೃದ್ಧಿ ಮಾಡುತ್ತೇವೆ. ಏರ್ಪೋರ್ಟ್ನಲ್ಲಿ ಸಿಗುವ ಎಲ್ಲಾ ಸವಲತ್ತುಗಳೂ ಇಲ್ಲಿ ಸಿಗಲಿದೆ. 160 ಎಕರೆ ಜಾಗ ಇದೆ. ನಿರೋದ್ಯೋಗಿಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಇದೇ ವೇಳೆ ಪ್ರಧಾನಿ ಮೋದಿ ಅವರನ್ನು ಶ್ಲಾಘಿಸಿದ ಸಚಿವರು, ವಿನೂತನ ಯೋಜನೆಗಳಿಗೆ ಅವರ ನಿರಂತರ ಪ್ರೋತ್ಸಾಹದಿಂದಾಗಿ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿವೆ ಎಂದು ಹೇಳಿದರು.
ಬಳಿಕ ಬಿಜೆಪಿಯಿಂದ ಕಾಂಗ್ರೆಸ್ ಶಾಸಕರಿಗೆ 100 ಕೋಟಿ ರೂ. ಆಫರ್ ನೀಡಲಾಗಿದೆ ಎಂಬ ಶಾಸಕ ರವಿ ಗಣಿಗ ಆರೋಪ ವಿಚಾರವಾಗಿ ಮಾತನಾಡಿದ ಅವರು, ರವಿ ಗಣಿಗ ಶಾಸಕರಾಗಿ ಉತ್ತಮ ಕೆಲಸ ಮಾಡಲಿ. ಹೀಗೆ ಆರೋಪ ಮಾಡೋದು ಅವರ ಗೌರವಕ್ಕೆ ತಕ್ಕುದಾದುದಲ್ಲ. ಶೇ.40 ಕಮಿಷನ್ ಆರೋಪ ಮಾಡಿದ್ರಲ್ವಾ, ಅದೇ ರೀತಿಯ ಆರೋಪ ಇದು ಎಂದರು.
ಬಿಪಿಎಲ್ ಕಾರ್ಡ್ ರದ್ದು ಮಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಈ ನಿರ್ಧಾರವನ್ನು ಸಿಎಂ ಸಿದ್ದರಾಮಯ್ಯ ಮಾಡಬಾರದು ಎಂದರು.
ಕೋವಿಡ್ ಹಗರಣ ತನಿಖೆ ವಿಚಾರವಾಗಿ ಮಾತನಾಡಿ, ಉಪ್ಪು ತಿಂದವರು ನೀರು ಕುಡಿಯುತ್ತಾರೆ. ತನಿಖೆ ಮಾಡಲಿ ಬಿಡಿ ಎಂದು ಹೇಳಿದರು.
Advertisement