ಉಡುಪಿಯಲ್ಲಿ ಎನ್ ಕೌಂಟರ್: ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಮ್ ಗೌಡ ಸಾವು

ಕಳೆದ ಕೆಲವು ದಿನಗಳಿಂದ ಹೆಬ್ರಿ-ಕಾರ್ಕಳ ಪ್ರದೇಶದಲ್ಲಿ ನಕ್ಸಲರ ಓಡಾಟ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕದ ಎಎನ್​ಎಫ್ ಕಾರ್ಯಾಚರಣೆಗೆ ಮುಂದಾಗಿತ್ತು.
Naxal commander Vikram Gowda
ನಕ್ಸಲ್ ನಾಯಕ ವಿಕ್ರಮ್ ಗೌಡ
Updated on

ಉಡುಪಿ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹೆಬ್ರಿ ಕಬ್ವಿನಾಲೆಯ ಪೀತಬೈಲುವಿನಲ್ಲಿ ಪೊಲೀಸರು ಮತ್ತು ನಕ್ಸಲರ ನಡುವೆ ಗುಂಡಿನ ಕಾಳಗ ನಡೆದಿದ್ದು, ಈ ವೇಳೆ ಮೋಸ್ಟ್ ವಾಂಟೆಡ್ ನಕ್ಸಲ್ ಮುಖಂಡ ವಿಕ್ರಂ ಗೌಡ ಬಲಿಯಾಗಿದ್ದಾನೆಂದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಳೆದ ಕೆಲವು ದಿನಗಳಿಂದ ಹೆಬ್ರಿ-ಕಾರ್ಕಳ ಪ್ರದೇಶದಲ್ಲಿ ನಕ್ಸಲರ ಓಡಾಟ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕದ ಎಎನ್​ಎಫ್ ಕಾರ್ಯಾಚರಣೆಗೆ ಮುಂದಾಗಿತ್ತು.

ನಿನ್ನೆ ಮಧ್ಯರಾತ್ರಿ 5 ಮಂದಿ ನಕ್ಸಲರ ತಂಡ ಸೀತಂಬೈಲು ಸಮೀಪ ರೇಷನ್ ಸಂಗ್ರಹಕ್ಕೆ ಬಂದಾಗ ಕೂಂಬಿಂಗ್ ಶುರುವಾಗಿದೆ.

ಈ ಕೂಂಬಿಂಗ್​​ನಲ್ಲಿ ಕಬ್ಬಿನಾಲೆ ಮೂಲದ ವಿಕ್ರಂ ಗೌಡ ಇದ್ದ ಎನ್ನಲಾಗಿದ್ದು, ಗುಂಡಿನ ದಾಳಿಗೆ ಈತ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಇನ್ನುಳಿದ ನಕ್ಸಲರಿಗಾಗಿ ತೀವ್ರ ಶೋಧಕಾರ್ಯ ಮುಂದುವರೆದಿದೆ ಎಂದು ವರದಿಗಳು ತಿಳಿಸಿವೆ. ಹತನಾಗಿದರುವ ವಿಕ್ರಮ್ ಗೌಡ ನಕ್ಸಲರ ನೇತ್ರಾವತಿ ದಳದ ನಾಯಕನಾಗಿದ್ದ.

ಇತ್ತೀಚೆಗೆ ಕೆಲವು ದಿನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ, ಸುಳ್ಯ ಭಾಗದಲ್ಲಿ ಕೆಲವು ಗ್ರಾಮಗಳಿಗೆ ನಕ್ಸಲರು ಭೇಟಿ ನೀಡಿದ ಬಗ್ಗೆ ವರದಿಯಾಗಿತ್ತು. ಅದೇ ರೀತಿ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕೆಲವೆಡೆ ನಕ್ಸಲರು ಭೇಟಿ ನೀಡಿದ ಸುಳಿವು ದೊರೆತಿತ್ತು. ಕೊಪ್ಪ ತಾಲೂಕಿನ ಕಡೆಗುಂಡಿ ಗ್ರಾಮದ ಸುಬ್ಬೆಗೌಡ ಎಂಬವರ ಮನೆಯಲ್ಲಿ 3 ಬಂದೂಕುಗಳು ಪತ್ತೆಯಾಗಿದ್ದವು. ಆ ಮನೆಗೆ ನಕ್ಸಲ್ ನಾಯಕಿ ಮುಂಡಗಾರು ಲತಾ ಮತ್ತು ಆಕೆಯ ತಂಡ ಭೇಟಿ ನೀಡಿರುವ ಸುಳಿವು ಸಿಕ್ಕಿತ್ತು.

ನಂತರ ನಕ್ಸಲರ್ ನಿಗ್ರಹ ಪಡೆ ಕಾರ್ಯಾಚರಣೆ ತೀವ್ರಗೊಳಿಸಿದೆ. ಅರಣ್ಯ ಒತ್ತುವರಿ ತೆರವು, ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ನಕ್ಸಲರು ಕೊಪ್ಪ, ಶೃಂಗೇರಿ ತಾಲೂಕಿನಲ್ಲಿ ಸಭೆಗಳನ್ನು ನಡೆಸಿರುವ ಶಂಕೆ ವ್ಯಕ್ತವಾಗಿತ್ತು. ಇದೇ ಕಾರಣದಿಂದ ಮಲೆನಾಡು ಹಾಗೂ ಕರವಾಳಿ ಭಾಗದ ಪಶ್ಚಿಮ ಘಟ್ಟದ ಅಂಚಿನ ಗ್ರಾಮಗಳಲ್ಲಿ ನಕ್ಸಲ್ ಚಟುವಟಿಕೆ ಮತ್ತೆ ಹೆಚ್ಚಾಗುತ್ತಿರುವ ಅನುಮಾನಗಳು ವ್ಯಕ್ತವಾಗಿವೆ.

ಕರ್ನಾಟಕದ ಮೋಸ್ಟ್ ವಾಂಟೆಡ್ ನಕ್ಸಲ್ ಆಗಿರುವ ವಿಕ್ರಮ್ ಗೌಡನ ಮೂಲ ಉಡುಪಿ ಹೆಬ್ರಿ ತಾಲೂಕಿನ ಕೂಡ್ಲು ನಾಡ್ವಾಲು ಗ್ರಾಮ. ದಕ್ಷಿಣ ಭಾರತದಲ್ಲಿ ನಕ್ಸಲ್ ಸಂಘಟನೆಯ ನಾಯಕತ್ವ ತಮಿಳುನಾಡು ಮೂಲದ ಕುಪ್ಪುಸ್ವಾಮಿ ವಹಿಸಿಕೊಂಡಿದ್ದರೆ, ರಾಜ್ಯದಲ್ಲಿನ ಜವಾಬ್ದಾರಿ ವಿಕ್ರಮ್ ಗೌಡ ಹೆಗಲಿಗೆ ಬಿದ್ದಿತ್ತು.

20ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿರುವ ವಿಕ್ರಮ್ ಗೌಡ ಕಳೆದ 20 ವರ್ಷಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದ. ಕಾರ್ಮಿಕ ಸಂಘಟನೆಯಿಂದ ಬಂದಿದ್ದ ವಿಕ್ರಮ್ ಗೌಡ 3 ಬಾರಿ ಕರ್ನಾಟಕ ಪೊಲೀಸರ ಕೈಯಿಂದ ಪರಾರಿಯಾಗಿದ್ದ. 2016ರಲ್ಲಿ ಕೇರಳ ಪೊಲೀಸರಿಗೂ ಚಳ್ಳೆಹಣ್ಣು ತಿನ್ನಿಸಿದ್ದ.

2001ರಲ್ಲಿ ರಾಜ್ಯದಲ್ಲಿ ನಕ್ಸಲ್ ನೇತೃತ್ವವನ್ನು ಸಾಕೇತ್ ರಾಜನ್ ನಿರ್ವಹಿಸುತ್ತಿದ್ದ. ಫೆಬ್ರವರಿ 6, 2005 ರಂದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಸಮೀಪದ ಮೆಣಸಿನಹಾಡ್ಯ ಎಂಬ ಸ್ಥಳದಲ್ಲಿ ಪೊಲೀಸರು ಈತನನ್ನು ಎನ್ಕೌಂಟರ್ ಮಾಡಿದ್ದರು. ನಂತರ ನೆಲಗುಳಿ ಪದ್ಮನಾಭ ನೇತೃತ್ವ ವಹಿಸಿದ್ದ. ಬರ್ಕಾನ ಬಳಿ ಪೊಲೀಸ್ ಗುಂಡೇಟಿಗೆ ಈತ ತನ್ನ ಕಾಲುಗಳನ್ನು ಕಳೆದುಕೊಂಡಿದ್ದ. ನಂತರ 2006 ರಿಂದ 2011 ರವರೆಗೆ ಬಿ ಜಿ ಕೃಷ್ಣಮೂರ್ತಿ ರಾಜ್ಯದಲ್ಲಿ ನಕ್ಸಲೀಯರನ್ನು ಮುನ್ನಡೆಸುತ್ತಿದ್ದ. ಈ ನಡುವೆ ಈತನ ಪತ್ನಿಯ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಈತನ ಗಮನ ಪತ್ನಿಯತ್ತ ಹೊರಳಲು ಆರಂಭವಾಗಿತ್ತು. ನಂತರ 2011ರಲ್ಲಿ ವಿಕ್ರಮ್ ಗೌಡ ಇದರ ಜವಾಬ್ದಾರಿ ವಹಿಸಿಕೊಂಡಿದ್ದ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com