ಮಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿನ ಸೇವಾ ಶುಲ್ಕ ಹೆಚ್ಚಳ ಅತ್ಯಂತ ಕನಿಷ್ಠ, ಪ್ರಾಯೋಗಿಕ ಮತ್ತು ತಾರ್ಕಿಕ ಎಂದು ಸಮರ್ಥಿಸಿಕೊಂಡ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು, ಇದು ಸೇವೆಗಳ ಸುಧಾರಣೆಗೆ ಸಹಾಯ ಮಾಡುತ್ತದೆ ಎಂದು ಗುರುವಾರ ಹೇಳಿದ್ದಾರೆ.
ಸೇವಾ ಶುಲ್ಕ ಹೆಚ್ಚಳ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಬಹಳ ವರ್ಷಗಳ ನಂತರ ಸೇವಾ ಶುಲ್ಕವನ್ನು ಪರಿಷ್ಕರಿಸಲಾಗಿದೆ. ಸಂಗ್ರಹಿಸಿದ ಹೆಚ್ಚುವರಿ ಶುಲ್ಕವು ಆಸ್ಪತ್ರೆಗಳಲ್ಲಿ ಉಳಿಯುತ್ತದೆ ಮತ್ತು ಅದನ್ನು ಹೇಗೆ ಬಳಸಬೇಕೆಂದು ಸ್ಥಳೀಯ ಶಾಸಕರ ನೇತೃತ್ವದ ಸಮಿತಿ ನಿರ್ಧರಿಸುತ್ತದೆ ಎಂದು ಅವರು ಹೇಳಿದರು.
ಸೇವಾ ಶುಲ್ಕವು ಆಯಾ ಆಸ್ಪತ್ರೆಗಳಲ್ಲಿಯೇ ಇರುತ್ತದೆ ಮತ್ತು ಅದು ಸರ್ಕಾರಕ್ಕೆ ಬರುವುದಿಲ್ಲ. ಆಯಾ ಆಸ್ಪತ್ರೆಗಳ ಅಭಿವೃದ್ಧಿಗೆ ಬಳಕೆ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದರು.
ಮೂರು, ನಾಲ್ಕು ವರ್ಷಗಳಿಗೊಮ್ಮೆ ಸೇವಾ ಶುಲ್ಕ ಪರಿಷ್ಕರಣೆಯಾಗುವುದು ಸಹಜ ಪ್ರಕ್ರಿಯೆಯಾಗಿದೆ. ಇದನ್ನೇ ಮುಂದಿಟ್ಟುಕೊಂಡು ಗ್ಯಾರಂಟಿಗಳಿಗೆ ತಳುಕು ಹಾಕುವುದು ಸರಿಯಲ್ಲ. ಕೇಂದ್ರವು ರಾಜ್ಯಕ್ಕೆ ಅನುದಾನ ಕಡಿತಗೊಳಿಸುತ್ತಿರುವ ಬಗ್ಗೆ ವಿರೋಧ ಪಕ್ಷಗಳು ಏನನ್ನೂ ಮಾತನಾಡುತ್ತಿಲ್ಲ ಎಂದು ತಿರುಗೇಟು ನೀಡಿದರು.
ಇದೇ ವೇಳೆ ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಯ ಎಕ್ಸಿಟ್ ಪೋಲ್ ಬಗ್ಗೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವರು, “ನಾನು ಈ ಸಮೀಕ್ಷೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದಿಲ್ಲ. ಎಲ್ಲಾ ಮೂರು ಕ್ಷೇತ್ರಗಳಲ್ಲಿ ಪಕ್ಷಕ್ಕೆ ಅನುಕೂಲಕರ ಫಲಿತಾಂಶ ಬರುವ ಭರವಸೆ ನನಗಿದೆ ಮತ್ತು ಕನಿಷ್ಠ ಎರಡರಲ್ಲಿ ಗೆಲ್ಲುವುದು ಖಚಿತ ಎಂದು ಹೇಳಿದರು.
ಇನ್ನು ರಾಜ್ಯಕ್ಕೆ ನಬಾರ್ಡ್ ಸಾಲ ಕಡಿತಗೊಳಿಸಿರುವ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ಸಚಿವರು, ಕೇಂದ್ರ ಸಚಿವರು ಮತ್ತು ರಾಜ್ಯದ ಬಿಜೆಪಿ ನಾಯಕರು ಈ ಬಗ್ಗೆ ಮೌನವ ವಹಿಸಿರುವುದನ್ನು ಪ್ರಶ್ನಿಸಿದರು. ಬಿಜೆಪಿ ರಾಜ್ಯ ನಾಯಕರು ಕೇಂದ್ರದ ಗುಲಾಮರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
Advertisement