ಬೆಂಗಳೂರು: ಸೋಮೇಶ್ವರ ದೇಗುಲ ನಿರ್ಮಾಣವಾದಾಗ, ವಿರಕ್ತ ಪರಂಪರೆಯ ಮಠದ ಅಭ್ಯುದಯದ ಕಾಲದಲ್ಲಿ ಈ ದೇಶದಲ್ಲಿ "ಅಲ್ಲಾನು ಇರಲಿಲ್ಲ - ಮುಲ್ಲಾನೂ ಇರಲಿಲ್ಲ". ಅಂಥವರು ಇಂದು ಅದು ನಮ್ಮದು, ನಮಗೆ ಕೊಡಬೇಕು, ಎಂದು ಕೇಳುವ ದಾರ್ಷ್ಯ ಎಲ್ಲಿಂದ ಬಂತು? ಅದಕ್ಕೆ ಮೂಲ ಕಾರಣ ಕಾಂಗ್ರೆಸ್ಸಿನ ತುಷ್ಟಿಕರಣದ ನೀತಿ ಎಂದು ಬಿಜೆಪಿ ಮುಖಂಡ ಸಿ.ಟಿ ರವಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ವಕ್ಫ್ ವಿವಾದದ ಕುರಿತಾಗಿ ನಗರದ ಫ್ರೀಡಂ ಪಾರ್ಕ್ ನಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, "ವಕ್ಫ್ ಬೋರ್ಡ್‌ಗೆ ಕೊಟ್ಟ ಅಧಿಕಾರ ತೋಳದ ಬಳಿ ಕುರಿಮರಿ ನ್ಯಾಯ ಕೇಳುವಂತಾಗಿದೆ. ವಕ್ಫ್ ಬೋರ್ಡ್‌ಗೆ ಪರಮಾಧಿಕಾರ ಕೊಡಲಾಗಿದೆ. ಇದು ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟಂತಾಗಿದೆ. 1500 ವರ್ಷಗಳ ಹಿಂದೆ ಅಲ್ಲಾನು ಇರಲಿಲ್ಲ, ಮುಲ್ಲಾನೂ ಇರಲಿಲ್ಲ. ಅಲ್ಲಿದ್ದದ್ದು ಕೇವಲ ಪರಮೇಶ್ವರ. ಈಗ ವಿರಕ್ತ ಮಠದ ಜಮೀನು, ಅಲಂದ ವೀರಲಿಂಗೇಶ್ವರ ಗುಡಿ, ಹಿಂದೂಗಳ ಸ್ಮಶಾನ ನಮ್ಮದು ಎಂದು ಹೇಳಲಾಗುತ್ತಿದೆ" ಎಂದು ಕಿಡಿಕಾರಿದರು.
ಇವತ್ತಿನ ಕಾಲಘಟ್ಟದಲ್ಲಿ ಕಾಂಗ್ರೇಸ್ ತಾನು ಷರೀಯಾ ಪರವೇ? ಸಂವಿಧಾನದ ಪರವೇ? ಎಂಬ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಜಮೀರ್ ಅಹ್ಮದ್ ಖಾನ್ ಅವರನ್ನು ನಂಬಿದ್ದಾರೆ. ಆದರೆ ಅವರು ಯಾವಾಗ ಬತ್ತಿ ಇಡುತ್ತಾರೆ ಗೊತ್ತಿಲ್ಲ, ಗಿಲಾಳಿ ಬ್ರದರ್ಸ್ ಗಳನ್ನು ನಂಬಿದ್ದ ಅಳಿಯ ರಾಮರಾಯನ ತಲೆ ಕಡಿದರು. ಹೈದರಾಲಿಯನ್ನು ನಂಬಿದ್ದ ಮೈಸೂರು ರಾಣಿ ಲಕ್ಷಮ್ಮಣ್ಣಿ ಕೆಟ್ಟರು. ಅದೇ ಪರಿಸ್ಥಿತಿ ಸಿದ್ದರಾಮಯ್ಯ ಅವರದ್ದಾಗುತ್ತದೆ ಎಂದು ವಾಗ್ದಾಳಿ ನಡೆಸಿದರು. ಅಸ್ಸಾಂ ಸಂಸದ ಪಾರ್ಲಿಮೆಂಟ್ ನಮ್ಮದು ಎಂದು ಹೇಳುತ್ತಾನೆ. ಕೆಂಗಲ್ ಹನುಮಂತಯ್ಯ ಕಟ್ಟಿಸಿದ ವಿಧಾನಸೌಧ ನಮ್ಮದು ಎಂದು ಶಾಫಿ ಸಅದಿ ಹೇಳುತ್ತಾರೆ.ಕಾಂಗ್ರೆಸ್ ಕೊಟ್ಟ ಪರಮಾಧಿಕಾರದಿಂದ ಈ ಸೊಕ್ಕು ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಾಳೆ ವಿಧಾನಸೌಧ, ನಮ್ಮದು ಇಲ್ಲಿ ನಮಾಜ್ ಮಾಡಲು ಮಾತ್ರ ಅವಕಾಶ ಹೊರತು ಚರ್ಚೆ ಮಾಡುವ ಹಾಗಿಲ್ಲ ಎಂದರೆ ಸಿದ್ದರಾಮಯ್ಯ ಪಂಚೆ ಎತ್ತುಕೊಂಡು ಹೋಗಬೇಕಾಗುತ್ತದೆ ಎಂದು ವ್ಯಂಗ್ಯವಾಡಿದರು. ಈ ಹೋರಾಟ ಸಂವಿಧಾನ ಉಳಿಸುವ ಹೋರಾಟವಾಗಿದೆ. ಔರಂಗಜೇಬ್ ಕಾಲದ ಜಿಜಿಯಾಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಕಾಶ ಇರಬಾರದು ಎಂಬ ಕಾರಣಕ್ಕಾಗಿ ಹೋರಾಟವಾಗಿದೆ. ವಕ್ಫ್ ತಿದ್ದುಪಡಿ ಕಾಯ್ದೆಯ ಪ್ರಕಾರ ಯಾವುದೇ ಜಮೀನಿಗೆ ವಕ್ಪ್ ಬೋರ್ಡ್ ದಾಖಲೆ ಕೊಡಬೇಕಾಗಿಲ್ಲ. ಇಂತಹ ಸಂವಿಧಾನ ವಿರೋಧಿ ಕಾಯ್ದೆ ರದ್ದಾಗಬೇಕು ಎಂದು ಆಗ್ರಹಿಸಿದರು.
Advertisement