ಅದಾನಿಯನ್ನು ರಕ್ಷಿಸುತ್ತಿರುವವರು ಯಾರು? ನಬಾರ್ಡ್ ವಿಚಾರದಲ್ಲಿ ಸೋ ಕಾಲ್ಡ್ ಮಣ್ಣಿನ ಮಗ HDK ಉಸಿರೇ ಬಿಡ್ತಿಲ್ಲ ಏಕೆ? ಸಿದ್ದರಾಮಯ್ಯ

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಈ ಅನ್ಯಾಯದ ಸಮರ್ಥನೆಗೆ ಇಳಿದಿರುವುದು ನಾಚಿಕೆಗೇಡು. ಪ್ರಹ್ಲಾದ್ ಜೋಶಿ ಹೇಳಿಕೆಗೆ ಸೋ ಕಾಲ್ಡ್ ಮಣ್ಣಿನ ಮಗ, ರೈತರ ಮಗ ಅಂದುಕೊಂಡಿರುವ ಹೆಚ್.ಡಿ.ಕುಮಾರಸ್ವಾಮಿ ಅವರು ಉಸಿರೇ ಬಿಡ್ತಿಲ್ಲವಲ್ಲ ಏಕೆ?
CM Siddaramaiah
ಸಿಎಂ ಸಿದ್ದರಾಮಯ್ಯ
Updated on

ಬೆಂಗಳೂರು: ಅರೆಸ್ಟ್ ವಾರೆಂಟ್ ಬಂದಿದ್ದರೂ ಕೇಂದ್ರ ತನಿಖಾ ಸಂಸ್ಥೆಗಳು ಅದಾನಿಯನ್ನು ಏಕೆ ಬಂಧಿಸುತ್ತಿಲ್ಲ? ಅವರನ್ನು ರಕ್ಷಿಸುತ್ತಿರುವವರು ಯಾರು? ತಕ್ಷಣ ಅದಾನಿಯನ್ನು ಬಂಧಿಸಬೇಕು, ಇಲ್ಲದಿದ್ದರೆ ಅವರು ತಪ್ಪಿಸಿಕೊಳ್ಳುವ ಸಾಧ್ಯತೆಯೂ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಇಂದು ಮೈಸೂರಿನಲ್ಲಿ ಮಾತನಾಡಿದ ಅವರು, ಅದಾನಿಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆ ಪದೇ ಪದೇ ಹಾಳಾಗುತ್ತಿದೆ. ಅದಾನಿಗೆ ರಕ್ಷಣೆ ಕೊಡುತ್ತಿರುವವರು ಯಾರು ಎನ್ನುವುದು ದೇಶಕ್ಕೇ ಗೊತ್ತಿದೆ. ಆದರೆ ಮಾಧ್ಯಮಗಳು ಈ ಬಗ್ಗೆ ಮಾತನಾಡುತ್ತಿಲ್ಲ. ಈ ಸತ್ಯವನ್ನು ಮಾಧ್ಯಮಗಳು ದೇಶದ ಜನರಿಗೆ ತೋರಿಸಬೇಕು. ರೈತರಿಗೆ ರಿಯಾಯಿತಿ ಬಡ್ಡಿ ದರದಲ್ಲಿ ಕೊಡುವ ಸಾಲದ ಮೊತ್ತವನ್ನು ನಬಾರ್ಡ್ ಈ ಬಾರಿ ಶೇ 58 ರಷ್ಟು ರಾಜ್ಯಕ್ಕೆ ಕಡಿತಗೊಳಿಸಿದೆ. ಇದು ರಾಜ್ಯದ ರೈತರಿಗೆ ಮಾಡಿದ ಪರಮ ಅನ್ಯಾಯ. ಆದರೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಈ ಅನ್ಯಾಯದ ಸಮರ್ಥನೆಗೆ ಇಳಿದಿರುವುದು ನಾಚಿಕೆಗೇಡು. ಪ್ರಹ್ಲಾದ್ ಜೋಶಿ ಹೇಳಿಕೆಗೆ ಸೋ ಕಾಲ್ಡ್ ಮಣ್ಣಿನ ಮಗ, ರೈತರ ಮಗ ಅಂದುಕೊಂಡಿರುವ ಹೆಚ್.ಡಿ.ಕುಮಾರಸ್ವಾಮಿ ಅವರು ಉಸಿರೇ ಬಿಡ್ತಿಲ್ಲವಲ್ಲ ಏಕೆ? ಎಂದು ಪ್ರಶ್ನಿಸಿದ್ದಾರೆ.

ವರ್ಷದಿಂದ ವರ್ಷಕ್ಕೆ ನಬಾರ್ಡ್ ನಿಂದ ರಾಜ್ಯದ ರೈತರಿಗೆ ಕೊಡುವ ಸಾಲದ ಪ್ರಮಾಣ ಹೆಚ್ಚಾಗಬೇಕು. ಆದರೆ ಈ ಬಾರಿ ಕಡಿತಗೊಳಿಸಿದೆ. ರೈತರಿಗೆ ಶೇ4.5 ಬಡ್ಡಿದರದಲ್ಲಿ ನಬಾರ್ಡ್ ರಾಜ್ಯದ ರೈತರಿಗೆ ಸಾಲ ಕೊಡುತ್ತದೆ. ಈ ಬಡ್ಡಿಯನ್ನು ರಾಜ್ಯ ಸರ್ಕಾರವೇ ಭರಿಸುತ್ತದೆ. ಆದರೆ ಈಗ ನಬಾರ್ಡ್ ಸಾಲದ ಪ್ರಮಾಣ ಕಡಿತಗೊಳಿಸಿರುವುದರಿಂದ ನಾವು ವಾಣಿಜ್ಯ ಬ್ಯಾಂಕ್ ಗಳ ಬಳಿ ಸಾಲಕ್ಕೆ ಹೋಗಿ ಶೇ10 ರಷ್ಟು ಬಡ್ಡಿ ಕಟ್ಟಬೇಕು. ಇದು ರಾಜ್ಯಕ್ಕೆ ಆಗುವ ನಷ್ಟ. ಇಷ್ಟು ದೊಡ್ಡ ಪ್ರಮಾಣದ ಅನ್ಯಾಯವನ್ನು ಜೋಶಿ ಸಮರ್ಥಿಸಿಕೊಂಡಿದ್ದಾರೆ. ರಾಜ್ಯದಿಂದಲೇ ಆಯ್ಕೆ ಆಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಈ ಅನ್ಯಾಯ ಸರಿ ಪಡಿಸಿ ಎಂದು ಮನವಿ ಕೊಟ್ಟಿದ್ದೇನೆ. ರಾಜ್ಯದ ರೈತರ ಬಗ್ಗೆ ಕಾಳಜಿ ಇದ್ದರೆ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಅನ್ಯಾಯ ಸರಿಪಡಿಸಲಿ ಎಂದಿದ್ದಾರೆ. ಕೇಂದ್ರ ಸರ್ಕಾರವೇ ಬಿಪಿಎಲ್ ಕಾರ್ಡ್ ಗಳನ್ನು ರದ್ದುಗೊಳಿಸಿದೆ. ಈಗ ಅವರೇ ರಾಜ್ಯದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ, ಇದೆಂಥಾ ದ್ವಂದ್ವ. ಆಹಾರ ಭದ್ರತಾ ಕಾಯ್ದೆಯನ್ನು ಜಾರಿ ಮಾಡಿದ್ದು ಪ್ರಧಾನಿ ಮನಮೋಹನ್ ಸಿಂಗ್ ಅವರು. ಇದನ್ನು ಬಿಜೆಪಿ ವಿರೋಧಿಸಿತ್ತು. ಹಿಂದಿನ‌ ಕೇಂದ್ರ ಸಚಿವರಾಗಿದ್ದ ಮುರಳಿ ಮನೋಹರ ಜೋಶಿಯವರು ಆಹಾರ ಭದ್ರತೆ ಕಾಯ್ದೆಯನ್ನು ವಿರೋಧಿಸಿದ್ದರು. ಈಗ ಬಿಜೆಪಿಯವರು ಅನ್ಯಾಯ - ಅನ್ಯಾಯ ಎಂದು ನಾಟಕವಾಡುತ್ತಾ ರಾಜ್ಯದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

CM Siddaramaiah
ಕರ್ನಾಟಕ, ದೇಶದ ಎರಡನೇ ಅತಿಹೆಚ್ಚು ಹಾಲು ಉತ್ಪಾದಕ ರಾಜ್ಯ: ಸಿಎಂ ಸಿದ್ದರಾಮಯ್ಯ

ಮೊದಲಿಗೆ ರಾಜ್ಯದ ಜನರಿಗೆ ಏಳು ಕೆ.ಜಿ ಅಕ್ಕಿ ಕೊಟ್ಟವರು ನಾವು. ಇದನ್ನು ಐದು ಕೆ.ಜಿ ಗೆ ಇಳಿಸಿದ್ದು ಯಡಿಯೂರಪ್ಪ. ಈಗ ಯಡಿಯೂರಪ್ಪ ಅವರ ಮಗ ವಿಜಯೇಂದ್ರನಿಗೆ ಈ ಬಗ್ಗೆ ಮಾತಾಡಲು ಯಾವ ನೈತಿಕತೆ ಇದೆ? ಯಡಿಯೂರಪ್ಪ ಅಕ್ಕಿ ಪ್ರಮಾಣವನ್ನು ಐದು ಕೆಜಿಗೆ ಇಳಿಸಿದ್ದನ್ನು ಹತ್ತು ಕೆಜಿಗೆ ಏರಿಸಿದ್ದು ನಾವು. ಈ ಸತ್ಯ ರಾಜ್ಯದ ಜನರಿಗೆ ಗೊತ್ತಿದೆ. ಸರ್ಕಾರಿ ನೌಕರರಿಗೂ ಬಿಪಿಎಲ್ ಕಾರ್ಡ್ ಕೊಡಬೇಕಾ? ಆದಾಯ ತೆರಿಗೆ ಪಾವತಿಸುವವರಿಗೂ ಬಿಪಿಎಲ್ ಕಾರ್ಡ್ ಕೊಡಬೇಕಾ? ಏನ್ ಆರ್.ಅಶೋಕಾ ಫೋಟೋ ತೆಗೆಸಿಕೊಂಡಿದ್ದೇ ತೆಗೆಸಿಕೊಂಡಿದ್ದು. ಅಶೋಕ್ ಅವರ ಪ್ರತಿಭಟನೆ ಫೋಟೊ ಶೂಟ್ ನಂತೆ ಕಾಣುತ್ತಿದೆ. ಸರ್ಕಾರಿ ನೌಕರರಿಗೆ, ಆದಾಯ ತೆರಿಗೆ ಪಾವತಿಸುವವರಿಗೆ ಬಿಪಿಎಲ್ ಕಾರ್ಡ್ ಕೊಡಬಾರದು ಅಂತ ನಿಯಮಾವಳಿ, ಗೈಡ್ ಲೈನ್ ರಚಿಸಿದ್ದೇ ಬಿಜೆಪಿ‌. ಈಗ ಇವರೇ ಪ್ರತಿಭಟನೆ ಎಂದು ಫೋಟೋ ತೆಗೆಸಿಕೊಳ್ಳುತ್ತಾ ಇದ್ದಾರೆ ಎಂದ ಲೇವಡಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com