ಬೆಂಗಳೂರು: ಗುಜರಾತ್ ನಂತರ ಕರ್ನಾಟಕವು ಭಾರತದಲ್ಲಿ ಎರಡನೇ ಅತಿಹೆಚ್ಚು ಹಾಲು ಉತ್ಪಾದಕ ರಾಜ್ಯವಾಗಿ ಹೊರಹೊಮ್ಮಿದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದರು.
ರಾಜ್ಯದ 16 ಹಾಲು ಒಕ್ಕೂಟಗಳು ಪ್ರತಿದಿನ ಸುಮಾರು 1 ಕೋಟಿ ಲೀಟರ್ ಹಾಲು ಉತ್ಪಾದಿಸುತ್ತವೆ. ಕರ್ನಾಟಕದಿಂದ ದೆಹಲಿಗೆ ಪ್ರತಿದಿನ 2.5 ಲಕ್ಷ ಲೀಟರ್ ಹಾಲು ಪೂರೈಕೆಯಾಗುತ್ತಿದ್ದು, ಆರು ತಿಂಗಳಲ್ಲಿ ಇದನ್ನು 5 ಲಕ್ಷ ಲೀಟರ್‌ಗೆ ಹೆಚ್ಚಿಸುವ ಯೋಜನೆ ಹೊಂದಲಾಗಿದೆ. ಹಾಲಿನ ಉತ್ಪನ್ನಗಳಿಗೆ ಬಲವಾದ ಮಾರುಕಟ್ಟೆಯನ್ನು ಸೃಷ್ಟಿಸುವುದು ಡೈರಿ ಉದ್ಯಮದ ಬೆಳವಣಿಗೆ ಮತ್ತು ರೈತರ ಯೋಗಕ್ಷೇಮಕ್ಕೆ ನಿರ್ಣಾಯಕವಾಗಿದೆ ಎಂದರು.
ನಿನ್ನೆ ದೆಹಲಿಯಲ್ಲಿ ಮುಖ್ಯಮಂತ್ರಿಗಳು ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳ (KMF) ಮತ್ತು ಮಂಡ್ಯ ಜಿಲ್ಲಾ ಸಹಕಾರಿ ಹಾಲು ಒಕ್ಕೂಟ ಆಯೋಜಿಸಿದ್ದ ನಂದಿನಿ ಹಾಲಿನ ರೂಪಾಂತರಗಳಿಗೆ ಚಾಲನೆ ನೀಡಿ ಮಾತನಾಡಿ, ಹೈನುಗಾರಿಕೆ ಕ್ಷೇತ್ರಕ್ಕೆ ನೀಡಿದ ಬಲವಾದ ಬೆಂಬಲವೇ ರಾಜ್ಯದ ಯಶಸ್ಸಿಗೆ ಕಾರಣವಾಗಿದೆ ಎಂದರು.
ರೈತರಿಗೆ ನ್ಯಾಯಯುತ ಬೆಲೆ ಮತ್ತು ಅವರ ಉತ್ಪನ್ನಗಳಿಗೆ ಶಾಶ್ವತ ಮಾರುಕಟ್ಟೆಯನ್ನು ಒದಗಿಸಲು ನಾವು ಹಾಲು ಉತ್ಪಾದಕರ ಸಂಘಗಳನ್ನು ರಚಿಸಿದ್ದೇವೆ. ರಾಜ್ಯವು ಪ್ರತಿನಿತ್ಯ 92-93 ಲಕ್ಷ ಲೀಟರ್ ಹಾಲನ್ನು ಉತ್ಪಾದಿಸುತ್ತಿದ್ದು, ಅದರಲ್ಲಿ 2.5 ಲಕ್ಷ ಲೀಟರ್ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಕ್ಕೆ ಕಳುಹಿಸಲಾಗುತ್ತಿದೆ ಎಂದರು.
ಕ್ಷೀರಧಾರೆ ಯೋಜನೆಯ ಮೂಲಕ ಪ್ರತಿ ಲೀಟರ್ ಹಾಲನ್ನು 32 ರೂಪಾಯಿಗೆ ರೈತರಿಂದ ಖರೀದಿಸಲಾಗುತ್ತಿದ್ದು, ಸರಕಾರದಿಂದ ಪ್ರತಿ ಲೀಟರ್‌ಗೆ ಹೆಚ್ಚುವರಿಯಾಗಿ 5 ರೂಪಾಯಿ ಪ್ರೋತ್ಸಾಹಧನ ನೀಡಲಾಗುತ್ತದೆ ಎಂದು ಹೇಳಿದರು. ನಾನು ಮುಖ್ಯಮಂತ್ರಿಯಾದ ಮೇಲೆ ಈ ಪ್ರೋತ್ಸಾಹಧನವನ್ನು ಲೀಟರ್‌ಗೆ 5 ರೂಪಾಯಿ ಹೆಚ್ಚಿಸಿದೆನು, ಸರ್ಕಾರದಿಂದ ನೀಡಿದ ಪ್ರೋತ್ಸಾಹಧನದಲ್ಲಿ ಇದುವೇ ಹೆಚ್ಚಾಗಿದೆ. ಈ ಪ್ರೋತ್ಸಾಹಧನಕ್ಕಾಗಿ ರಾಜ್ಯವು ಪ್ರತಿದಿನ 5 ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ ಎಂದರು.
Advertisement