10 ಲಕ್ಷ ರೂ ಲಂಚ ಪಡೆಯುತ್ತಿದ್ದ ವೇಳೆ ಬುಡಾ ಆಯುಕ್ತ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ!
ಬೀದರ್: 10 ಲಕ್ಷ ರೂ. ಲಂಚ ಪಡೆಯುತ್ತಿದ್ದ ವೇಳೆ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ(ಬುಡಾ)ದ ಆಯುಕ್ತ ಸೇರಿದಂತೆ ಮೂವರು ಶುಕ್ರವಾರ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಕೃಷಿಯೇತರ ಜಮೀನಿನ(ಎನ್.ಎ) ನಿವೇಶನಗಳ ಮಾರಾಟದ ಅನುಮತಿಗಾಗಿ 10 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಶ್ರೀಕಾಂತ್ ಚಿಮಕೋಡೆ, ಬುಡಾ ಸದಸ್ಯ ಚಂದ್ರಕಾಂತ್ ರೆಡ್ಡಿ ಹಾಗೂ ಅವರ ಆಪ್ತ ಸಿದ್ದು ಹೂಗಾರ ಅವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೀದರ್ ನಗರದ ಚಿಕ್ಕಪೇಟೆಯಲ್ಲಿರುವ ಸರ್ವೇ ನಂಬರ್ 26ರಲ್ಲಿ ಕೃಷಿಯೇತರ ಜಮೀನಿನ ಶೇ. 60 ರಷ್ಟು ನಿವೇಶನಗಳನ್ನು ಬಿಡುಗಡೆ ಮಾಡಲು ಮತ್ತು ಮಾರಾಟಕ್ಕೆ ಅನುಮತಿ ನೀಡಲು ಬುಡಾ ಆಯುಕ್ತ ಶ್ರೀಕಾಂತ್ ಹಾಗೂ ಚಂದ್ರಕಾಂತ್ ಅವರು 50 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ ಇಂದು 10 ಲಕ್ಷ ರೂಪಾಯಿ ಮುಂಗಡ ಕೊಡುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಈ ಸಂಬಂಧ ರಿಯಲ್ ಎಸ್ಟೇಟ್ ಉದ್ಯಮಿ ಸತೀಶ್ ನೌಬಾದೆ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಇಂದು ಲೋಕಾಯುಕ್ತ ಎಸ್ಪಿ ಉಮೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಶ್ರೀಕಾಂತ್ ಚಿಮಕೋಡೆ ಅವರು ಬಿಜೆಪಿ ಮುಖಂಡ ಹಾಗೂ ಗುತ್ತಿಗೆದಾರ ಗುರುನಾಥ್ ಕೊಳ್ಳೂರು ಅವರ ಅಳಿಯ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ