ನ್ಯಾ. ಮೈಕೆಲ್ ಕುನ್ಹಾ ವರದಿ ಕುರಿತಂತೆ ವಿವಾದಾತ್ಮಕ ಹೇಳಿಕೆ: ಪತ್ರದ ಮೂಲಕ ಕ್ಷಮೆಯಾಚಿಸಿದ ಸಚಿವ ಪ್ರಲ್ಹಾದ್ ಜೋಶಿ!

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಇದಕ್ಕೆ ಸ್ಪಷ್ಟನೆ ನೀಡಿದ್ದಲ್ಲದೆ, ವಾಸ್ತವದಲ್ಲಿ ತಾವೇನು ಮಾತನಾಡಿದ್ದೇನೆ ಎಂಬುದರ ಬಗ್ಗೆ ವಿವರಿಸಿ ನ್ಯಾಯಮೂರ್ತಿ ಕುನ್ಹಾ ಅವರಿಗೆ ಪತ್ರ ಬರೆದಿದ್ದಾರೆ.
Prahlad Joshi
ಪ್ರಲ್ಹಾದ ಜೋಶಿ
Updated on

ನವದೆಹಲಿ: ಕೋವಿಡ್ ಚಿಕಿತ್ಸೆಗೆ ಸಂಬಂಧಪಟ್ಟ ವರದಿ ಬಗ್ಗೆ ನೀಡಿದ ಹೇಳಿಕೆ ವಿವಾದ ಸೃಷ್ಟಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನ್ಯಾಯಮೂರ್ತಿ ಮೈಕೆಲ್ ಡಿ.ಕುನ್ಹಾ ಅವರಿಗೆ ನೇರವಾಗಿ ಪತ್ರ ಬರೆದು ಕ್ಷಮೆ ಕೋರಿದ್ದಾರೆ. ಈ ಹಿಂದೆ ರಾಜ್ಯ ವಿಧಾನಸಭೆ ಉಪ ಚುನಾವಣೆ ವೇಳೆ ಸಚಿವರು ಪ್ರಚಾರ ಭಾಷಣದಲ್ಲಿ 'ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ ಹಗರಣ ನಡೆದಿದೆ' ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸುವಾಗ ನ್ಯಾಯಮೂರ್ತಿ ಮೈಕೆಲ್ ಡಿ.ಕುನ್ಹಾ ವರದಿ ಬಗ್ಗೆ ಪ್ರಸ್ತಾಪಿಸಿದ್ದು ವಿವಾದ ಹುಟ್ಟು ಹಾಕಿತ್ತು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಇದಕ್ಕೆ ಸ್ಪಷ್ಟನೆ ನೀಡಿದ್ದಲ್ಲದೆ, ವಾಸ್ತವದಲ್ಲಿ ತಾವೇನು ಮಾತನಾಡಿದ್ದೇನೆ ಎಂಬುದರ ಬಗ್ಗೆ ವಿವರಿಸಿ ನ್ಯಾಯಮೂರ್ತಿ ಕುನ್ಹಾ ಅವರಿಗೆ ಪತ್ರ ಬರೆದಿದ್ದಾರೆ. ಅಲ್ಲದೇ, ವಿವಾದಾತ್ಮಕ ಹೇಳಿಕೆಯಿಂದ ತಮ್ಮ ಮನಸ್ಸಿಗೆ ನೋವುಂಟು ಮಾಡಿದ್ದರೆ ಅದಕ್ಕಾಗಿ ಪ್ರಾಮಾಣಿಕವಾಗಿ ಕ್ಷಮೆಯಾಚಿಸುವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. 'ನನ್ನ ಸುದೀರ್ಘ ವರ್ಷಗಳ ರಾಜಕೀಯ ಮತ್ತು ಸಾರ್ವಜನಿಕ ಜೀವನದಲ್ಲಿ ಯಾವತ್ತೂ ಪ್ರತ್ಯಕ್ಷ-ಪರೋಕ್ಷವಾಗಿ ನ್ಯಾಯಾಂಗದ ಸದಸ್ಯರ ಖ್ಯಾತಿಗೆ ಚ್ಯುತಿ ಬರುವಂತೆ ನಡೆದುಕೊಂಡಿಲ್ಲ ಮತ್ತು ಹೇಳಿಕೆಯನ್ನೂ ನೀಡಿಲ್ಲ ಎಂದು ರಾಜ್ಯ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಡಿ'ಕುನ್ಹಾ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ನಾನು ಇತ್ತೀಚೆಗೆ ನೀಡಿದ ಹೇಳಿಕೆ ಮೇಲ್ನೋಟಕ್ಕೆ ವಿವಾದ ಹುಟ್ಟುಹಾಕಿದೆ. ಆದರೆ, ಯಾವತ್ತೂ ನ್ಯಾಯಾಂಗದ ಸದಸ್ಯರ ಖ್ಯಾತಿ ತಗ್ಗಿಸುವ ಪ್ರವೃತ್ತಿ ತೋರಿಲ್ಲ. ನ್ಯಾಯಾಂಗ ಮತ್ತು ತಮ್ಮ ಬಗ್ಗೆ ಈಗಲೂ ಗೌರವವಿದೆ ಎಂದು ಜೋಶಿ ಪ್ರತಿಪಾದಿಸಿದ್ದಾರೆ. ನ್ಯಾಯಾಂಗ ಮತ್ತು ಗೌರವಾನ್ವಿತ ನ್ಯಾಯಾಧೀಶರು ಸಂವಿಧಾನದ ಕವಚವಾಗಿದ್ದಾರೆ. ನ್ಯಾಯದಾನದ ಪವಿತ್ರ ಕರ್ತವ್ಯದಲ್ಲಿ ಪ್ರಮುಖ ಪಾತ್ರ ಹೊಂದಿದವರೆಂದು ನಂಬಿದವನಾಗಿದ್ದೇನೆ. ಆದರೆ, ತಮ್ಮ ನೇತೃತ್ವದ ಸಮಿತಿ ವರದಿ ಉಲ್ಲೇಖಿಸಿ ಇತ್ತೀಚೆಗೆ ನೀಡಿದ ಹೇಳಿಕೆ ಅವಹೇಳನದಿಂದ ಕೂಡಿದೆ ಎಂಬ ಆರೋಪ ಕೇಳಿಬಂದಿದ್ದು, ಇದಕ್ಕಾಗಿ ತಮ್ಮಲ್ಲಿ ಪ್ರಾಮಾಣಿಕವಾಗಿ ಕ್ಷಮೆ ಕೇಳುತ್ತೇನೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

Prahlad Joshi
BJP ಆಮಿಷ ಆರೋಪಕ್ಕೆ ಸಾಕ್ಷಿ ಒದಗಿಸಿ, ಇಲ್ಲವೇ ಕ್ರಮ ಎದುರಿಸಿ: 'ಕೈ' ಶಾಸಕನಿಗೆ ಪ್ರಹ್ಲಾದ್ ಜೋಶಿ ಎಚ್ಚರಿಕೆ

ಸಿಎಂ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರ ತರಾತುರಿಯಲ್ಲಿ ನ್ಯಾಯಮೂರ್ತಿ ಮೈಕೆಲ್ ಡಿ' ಕುನ್ಹಾ ಅವರಿಂದ ವರದಿ ತರಿಸಿಕೊಂಡಿದೆ ಎಂದು ಹೇಳಿದ್ದೇನೆ ಹೊರತು ತಮ್ಮ ಮೇಲೆ ಯಾವುದೇ ವೈಯಕ್ತಿಕ ಹೇಳಿಕೆ ನೀಡಿಲ್ಲ. ತಮಗೆ ಮತ್ತು ಆಯೋಗಕ್ಕೆ ಅಪಕೀರ್ತಿ ತರಲು ಅಥವಾ ಜನರ ಮನಸ್ಸಿನಲ್ಲಿ ನಿಮ್ಮ ಇಮೇಜ್ ಕಡಿಮೆ ಮಾಡುವ ಉದ್ದೇಶದ್ದೂ ಅಲ್ಲ ಎಂದು ಸಚಿವ ಜೋಶಿ ನ್ಯಾಯಮೂರ್ತಿ ಕುನ್ಹಾ ಅವರಿಗೆ ತಿಳಿಸಿದ್ದಾರೆ.

ಆಯೋಗದ ಸದಸ್ಯರಾಗಿ ತಮ್ಮ ಕರ್ತವ್ಯ ನಿರ್ವಹಣೆ ಮತ್ತು ನಿಷ್ಪಕ್ಷಪಾತವನ್ನು ಅನುಮಾನಿಸಲು ನನಗೆ ಯಾವುದೇ ಕಾರಣವಿಲ್ಲ ಎಂಬುದನ್ನು ಈ ಮೂಲಕ ನೇರವಾಗಿ ತಮ್ಮ ಗಮನಕ್ಕೆ ತರಬಯಸಿದ್ದೇನೆ. ನನ್ನ ಹೇಳಿಕೆಗಳು ತಮಗೆ ಯಾವುದೇ ನೋವು ಅಥವಾ ಅನುಮಾನ ಉಂಟುಮಾಡಿದ್ದರೆ ಅದಕ್ಕೆ ವಿಷಾದಿಸುತ್ತೇನೆ ಮತ್ತು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ ಎಂದು ಸಚಿವ ಜೋಶಿ ಅವರು ನ್ಯಾಯಮೂರ್ತಿ ಮೈಕಲ್ ಡಿ'ಕುನ್ಹಾ ಅವರಲ್ಲಿ ಕೋರಿದ್ದಾರೆ.

ಕ್ಷಮಾಪಣೆ ಪತ್ರ
ಕ್ಷಮಾಪಣೆ ಪತ್ರ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com