ಬೆಂಗಳೂರು: ಬಿಜೆಪಿ ವಿರುದ್ಧ 100 ಕೋಟಿ ಆಮಿಷ ಆರೋಪ ಮಾಡಿರುವ ಕಾಂಗ್ರೆಸ್ ಶಾಸಕ ರವಿಕುಮಾರ್ ಗೌಡ ಗಣಿಗ ಅವರು ತಮ್ಮ ಆರೋಪಕ್ಕೆ ಸಾಕ್ಷಿ ಒದಗಿಸಲಿ, ಇಲ್ಲವೇ ಕ್ರಮ ಎದುರಿಸಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರು ಆಧಾರರಹಿತ ಆರೋಪಗಳನ್ನು ಮಾಡುವುದು ಸರಿಯಲ್ಲ. ಆರೋಪಕ್ಕೆ ಸಾಕ್ಷಿಗಳಿದ್ದರೆ ಬಹಿರಂಗಪಡಿಸಲಿ. 100 ಕೋಟಿ ಇರಲಿ, 500 ಕೋಟಿ ಇರಲಿ, ಸಾಕ್ಷ್ಯವಿದ್ದರೆ ಬಿಡುಗಡೆ ಮಾಡಿ. ಯಾರೂ ನಿಮ್ಮನ್ನು ತಡೆಯುತ್ತಿಲ್ಲ. ಗಾಣಿಗ ಅವರು ಮೊದಲಿನಿಂದಲೂ ಈ ಬಗ್ಗೆ ಮಾತನಾಡುತ್ತಿದ್ದಾರೆ, ಆದರೆ, ಈ ವರೆಗೂ ಯಾವುದೇ ಸಾಕ್ಷಿಗಳನ್ನೇಕೆ ಬಿಡುಗಡೆ ಮಾಡಿಲ್ಲ? ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಸಂದರ್ಭದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಸಿದ್ದರಾಮಯ್ಯ ಅವರೇ ಬಿಜೆಪಿಕೆ ಕೆಲ ಕಾಂಗ್ರೆಸ್ ಶಾಸಕರನ್ನು ಕಳುಹಿಸಿದ್ದರು. ಹೀಗಾಗಿಯೇ ನಾವು ಸರ್ಕಾರ ರಚನೆ ಮಾಡಿದೆವು. ಈ ಬಾರಿ ಅವರಿಗೆ ಬಹುಮತ ಇದೆ. ನಾವು ವಿರೋಧ ಪಕ್ಷವಾಗಿ ಕೆಲಸ ಮಾಡುತ್ತೇವೆ. ಪ್ರತಿಪಕ್ಷದಲ್ಲಿದ್ದು ಸಾರ್ವಜನಿಕ ಒಳಿತಿಗಾಗಿ ರಚನಾತ್ಮಕ ಕೆಲಸಗಳತ್ತ ಗಮನ ಹರಿಸುವಂತೆ ಹೈಕಮಾಂಡ್ ರಾಜ್ಯ ಘಟಕಕ್ಕೆ ಸೂಚನೆ ನೀಡಿದೆ ಎಂದು ತಿಳಿಸಿದರು.
ಇದೇ ವೇಳೆ ಸರ್ಕಾರದ ವಿರುದ್ದ ಕಿಡಿಕಾರಿದ ಅವರು, ಕಾಂಗ್ರೆಸ್ ತನ್ನ ಅಕ್ರಮಗಳನ್ನು ಮುಚ್ಚಿಕೊಳ್ಳಲು ಷಡ್ಯಂತ್ರ ನಡೆಸುತ್ತಿದೆ ಎಂದು ಆರೋಪಿಸಿದರು.
ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ನ್ಯಾಯಾಲಯ ಸ್ಪಷ್ಟ ತೀರ್ಪು ನೀಡಿದೆ. ಲೋಕಾಯುಕ್ತ ತನಿಖೆ ನಡೆಯುತ್ತಿದ್ದರೂ ಕಾಂಗ್ರೆಸ್ ನಾಯಕರು ನೈಜ ಸಮಸ್ಯೆಗಳಿಂದ ಗಮನ ಬೇರೆಡೆ ಸೆಳೆಯಲು ಆಧಾರ ರಹಿತ ಹೇಳಿಕೆ ನೀಡುತ್ತಿದ್ದಾರೆಂದು ಕಿಡಿಕಾರಿದರು
Advertisement