ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಅಪಹರಣ ಮತ್ತು ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಕಾಮಾಕ್ಷಿಪಾಳ್ಯ ಪೊಲೀಸರು ನ್ಯಾಯಾಲಯಕ್ಕೆ 1300 ಪುಟಗಳ ಹೆಚ್ಚುವರಿ ಆರೋಪಪಟ್ಟಿ ಸಲ್ಲಿಸಿದ್ದಾರೆ.
ವಿಜಯನಗರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಚಂದನ್ ಕುಮಾರ್ ಅವರು ವಿಧಿ ವಿಜ್ಞಾನ ಪ್ರಯೋಗಾಲಯದ (ಸಿಎಫ್‌ಎಸ್‌ಎಲ್) ವರದಿಗಳು ಮತ್ತು ಆರೋಪಿಗಳ ಮೊಬೈಲ್ ಫೋನ್‌ಗಳಿಂದ ಡಿಜಿಟಲ್ ಸಾಕ್ಷ್ಯಗಳನ್ನು ಒಳಗೊಂಡ ಹೆಚ್ಚುವರಿ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಪೊಲೀಸರು 3991 ಪುಟಗಳನ್ನು ಒಳಗೊಂಡ ಮೊದಲ ಆರೋಪಪಟ್ಟಿಯನ್ನು ಸೆಪ್ಟೆಂಬರ್ 4 ರಂದು ಸಲ್ಲಿಸಿದ್ದರು. ಇದೀಗ 1300 ಪುಟಗಳ ಹೆಚ್ಚುವರಿ ಆರೋಪಪಟ್ಟಿಯನ್ನು ಮೈಸೂರು ಬ್ಯಾಂಕ್ ವೃತ್ತದ ಬಳಿಯಿರುವ 57ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಶನಿವಾರ ಸಲ್ಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೆಚ್ಚುವರಿ ಚಾರ್ಜ್‌ಶೀಟ್‌ನಲ್ಲಿ ಕೆಲವು ಆರೋಪಿಗಳ ವಿರುದ್ಧ, ಪ್ರಮುಖವಾಗಿ ಪ್ರಕರಣದ ಆರೋಪಿ ನಂಬರ್ 2 ಆಗಿರುವ ನಟ ದರ್ಶನ್ ತೂಗುದೀಪ ವಿರುದ್ಧ ತಾಂತ್ರಿಕ ಮತ್ತು ವಿಧಿವಿಜ್ಞಾನ ಸಾಕ್ಷ್ಯಗಳಿವೆ ಎಂದು ತಿಳಿದುಬಂದಿದೆ.
ಹೆಚ್ಚುವರಿ ಆರೋಪಪಟ್ಟಿಯಲ್ಲಿ 20ಕ್ಕೂ ಹೆಚ್ಚು ಪ್ರಮುಖ ಸಾಕ್ಷ್ಯಗಳಿದ್ದು. ಪ್ರಮುಖ ಆರೋಪಿಗಳ ಮೊಬೈಲ್ ಫೋನ್‌ಗಳಿಂದ ಡಿಲಿಟ್ ಮಾಡಲಾಗಿದ್ದ ಕೆಲವು ಫೋಟೋಗಳು ಮತ್ತು ಇತರ ಡಿಜಿಟಲ್ ಪುರಾವೆಗಳಿವೆ ಎಂದು ವರದಿಗಳು ತಿಳಿಸಿವೆ.
ಪ್ರತ್ಯಕ್ಷದರ್ಶಿ ಪುನೀತ್ ಮೊಬೈಲ್ನಲ್ಲಿದ್ದ ಫೋಟೋಗಳನ್ನು ರಿಕವರಿ ಮಾಡಲಾಗಿದ್ದು, 2 ಫೋಟೋಗಳಲ್ಲಿ ನಟ ದರ್ಶನ್ ಅವರು ಇರುವುದು ಕಂಡು ಬಂದಿದೆ. ಫೋಟೋದಲ್ಲಿ ನೀಲಿ ಟೀ ಶರ್ಟ್ ಮತ್ತು ಜೀನ್ಸ್ ಧರಿಸಿರುವ ಕಂಡು ಬಂದಿದೆ. ಇದಲ್ಲದೆ, ಫೋಟೋದಲ್ಲಿ ಅನು ಕುಮಾರ್, ರವಿಶಂಕರ್ ಮತ್ತು ಜಗದೀಶ್ ಅಲಿಯಾಸ್ ಜಗ್ಗ ಇರುವುದೂ ಕೂಡ ಕಂಡು ಬಂದಿದೆ.
ನಟ ದರ್ಶನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದರ ಬೆನ್ನಲ್ಲೆ ಇಂದು ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು, ವಿಚಾರಣೆಯನ್ನು ನವೆಂಬರ್ 26ಕ್ಕೆ ಮುಂದೂಡಿಕೆ ಮಾಡಲಾಗಿದೆ.
ನ್ಯಾಯಾಲಯವು ದರ್ಶನ್‌ಗೆ 6 ವಾರಗಳ ವೈದ್ಯಕೀಯ ಜಾಮೀನು ಮಂಜೂರು ಮಾಡಿದೆ. ಈ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆ, ಚಿಕಿತ್ಸೆಯ ಅವಧಿಯ ಬಗ್ಗೆ ವೈದ್ಯರ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಆದೇಶಿಸಲಾಗಿತ್ತು.
ಈ ನಡುವೆ ದರ್ಶನ್‌ಗೆ ನೀಡಿರುವ ಮಧ್ಯಂತರ ಜಾಮೀನಿನ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ನಗರ ಪೊಲೀಸರು ತಿಳಿಸಿದ್ದಾರೆ.
Advertisement