ಬೆಂಗಳೂರು: ದೇಶಾದ್ಯಂತ ವಕ್ಫ್ ಆಸ್ತಿಗಳನ್ನು ಕಬಳಿಸಲು ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ, 2024 ಅನ್ನು ಸಿದ್ಧಪಡಿಸಿದೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಎಲ್‌ಬಿ) ಸೋಮವಾರ ಆರೋಪಿಸಿದೆ.
ವಕ್ಫ್ ಕುರಿತ ಜಂಟಿ ಸಂಸದೀಯ ಸಮಿತಿ(ಜೆಪಿಸಿ) ಸಹ ತನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿಲ್ಲ ಎಂದು ಎಐಎಂಪಿಎಲ್‌ಬಿ ವಕ್ತಾರ ಎಸ್ ಕ್ಯೂ ಆರ್ ಇಲ್ಯಾಸ್ ದೂರಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ ಮುಕ್ತಾಯಗೊಂಡ ಎಐಎಂಪಿಎಲ್‌ಬಿಯ 29ನೇ ಸಮಾವೇಶದ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಇಲ್ಯಾಸ್, ದೇಶದಾದ್ಯಂತ ಇರುವ ವಕ್ಫ್ ಆಸ್ತಿಗಳನ್ನು ಕಬಳಿಸಲು ವಕ್ಫ್ ತಿದ್ದುಪಡಿ ಮಸೂದೆ 2024 ಅನ್ನು ಕುತಂತ್ರದಿಂದ ಸಿದ್ಧಪಡಿಸಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಎಲ್ಲಾ ಪ್ರಸ್ತಾವಿತ 44 ತಿದ್ದುಪಡಿಗಳು ಮತ್ತು ಅವುಗಳ ಉಪ-ವಿಭಾಗಗಳನ್ನು ವಕ್ಫ್ ಆಸ್ತಿಗಳನ್ನು "ಕಬಳಿಸಲು ಅತ್ಯಂತ ಜಾಣ್ಮೆಯಿಂದ" ಮಸೂದೆ ವಿನ್ಯಾಸಗೊಳಿಸಲಾಗಿದೆ ಎಂದು ಇಲ್ಯಾಸ್, ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
ಸಂಬಂಧಪಟ್ಟವರ ಸಲಹೆಗಳನ್ನು ಪಡೆಯಲು ರಚಿಸಲಾದ ಜೆಪಿಸಿ, ಈ ವಿಷಯದ ಬಗ್ಗೆ ಯಾವುದೇ ಸ್ಥಾನಮಾನವಿಲ್ಲದವರಿಗೆ ಸಮಯ ಮತ್ತು ಗಮನವನ್ನು ನೀಡುತ್ತಿದೆ ಮತ್ತು ಪಕ್ಷಪಾತಿಯಾಗಿ ವರ್ತಿಸುತ್ತಿದೆ. ನಿಯಮಗಳನ್ನು ಉಲ್ಲಂಘಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಏಕರೂಪ ನಾಗರಿಕ ಸಂಹಿತೆ "ಸ್ವೀಕಾರಾರ್ಹವಲ್ಲ" ಎಂದ ಇಲ್ಯಾಸ್, ಇದು ಮೂಲಭೂತ ಹಕ್ಕುಗಳ ಅಡಿಯಲ್ಲಿ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಧರ್ಮ ಮತ್ತು ಸಾಂಸ್ಕೃತಿಕ ವೈವಿಧ್ಯಗಳ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ ಎಂದರು.
ಮುಸ್ಲಿಮರು ಷರಿಯಾ ಕಾನೂನಿನೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲವಾದ್ದರಿಂದ ಏಕರೂಪ ನಾಗರಿಕ ಸಂಹಿತೆ ಸ್ವೀಕಾರಾರ್ಹವಲ್ಲ ಎಂದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸ್ಪಷ್ಟಪಡಿಸುತ್ತದೆ ಎಂದು ಅವರು ಹೇಳಿದರು.
Advertisement