ಹುಬ್ಬಳ್ಳಿ: ಉಪಚುನಾವಣೆ ಫಲಿತಾಂಶಕ್ಕೂ ವಕ್ಫ್ ಭೂ ವಿವಾದಕ್ಕೂ ಸಂಬಂಧವಿಲ್ಲ, ಈ ವಿವಾದದ ವಿರುದ್ಧ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಬಿಜೆಪಿ ಹೇಳಿದೆ.
ಮಾಧ್ಯಮಗಳೊದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು, ವಕ್ಫ್ ಮಂಡಳಿಯ ಅಕ್ರಮ ಭೂ ಒತ್ತುವರಿ ವಿರುದ್ಧದ ಹೋರಾಟಕ್ಕೆ ಪಕ್ಷ ಬದ್ಧವಾಗಿದೆ. ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಗೆದ್ದಿದ್ದೇವೆಂದು ಮತ್ತೆ ವಕ್ಫ್ ವಿಚಾರವನ್ನು ಮುನ್ನೆಲೆಗೆ ತಂದರೆ ಇದೇ ಜನ ತಕ್ಕ ಪಾಠ ಕಲಿಸುತ್ತಾರೆಂದು ಎಚ್ಚರಿಕೆ ನೀಡಿದರು.
ವಕ್ಫ್ ಆಸ್ತಿಗಳ ಮೇಲೆ ಹಿಡಿತ ಸಾಧಿಸುವ ಉದ್ದೇಶವನ್ನು ಕಾಂಗ್ರೆಸ್ ಹೊಂದಿದೆ. ಆದರೆ, ಅವರ ಈ ಪ್ರಯತ್ನಕ್ಕೆ ನಾವು ಅವಕಾಶ ನೀಡುವದಿಲ್ಲ. ಈ ಸಮಯ ಶಾಶ್ವತವಾಗಿ ಉಳಿಯುವುದಿಲ್ಲ. ಹೀಗಾಗಿ, ಕಾಂಗ್ರೆಸ್ ವಕ್ಫ್ ವಿಷಯದಲ್ಲಿನ ತನ್ನ ಹುಚ್ಚುತನವನ್ನು ನಿಲ್ಲಿಸಬೇಕೆಂದು ಹೇಳಿದರು.
ಉಪಚುನಾವಣೆ ಸೋಲು ಕುರಿತು ಮಾತನಾಡಿ, ಉಪ ಚುನಾವಣೆಯಲ್ಲಿ ಜನ ಆಡಳಿತಾರೂಢ ಪಕ್ಷಕ್ಕೆ ಜೈಕಾರ ಹಾಕೋದು ಸಹಜ. ಕ್ಷೇತ್ರದ ಅಭಿವೃದ್ಧಿ, ಹೆಚ್ಚಿನ ಅನುದಾನ ನಿರೀಕ್ಷಿಸಿ ಆಡಳಿತಾರೂಢ ಅಕ್ಷಕ್ಕೆ ಜೈಕಾರ ಹಾಕುತ್ತಾರೆ. ಆದರೆ, ಈ ಚುನಾವಣೆಯಲ್ಲಿ ಆಡಳಿತಾರೂಢರ ಹಣ-ಹೆಂಡ ಕೆಲಸ ಮಾಡಿದೆ. ಒಂದೊಂದು ಗ್ರಾಮ ಪಂಚಾಯತಿ ವ್ಯಾಪ್ತಿಯಯಲ್ಲಿ ಒಬ್ಬಿಬ್ಬರು ಸಚಿವರು, 10-15 ಶಾಸಕರು ಬೀಡು ಬಿಟ್ಟು ಹಣ ಬಲದಿಂದ ಚುನಾವಣೆ ಎದುರಿಸಿದ್ದಾರೆ. ಜೊತೆಗೆ ಸರ್ಕಾರದ ಮಶಿನರಿಗಳ ದುರ್ಬಳಕೆ ಆಗಿರುವುದೂ ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಹೇಳಿದರು.
ರಾಜ್ಯ ಉಪ ಚುನಾವಣೆ ಸೋತಿದ್ದೇವೆ ನಿಜ. ಆದರೆ, ನಾವು ಕಾಂಗ್ರೆಸ್ ನವರ ಹಾಗೆ ಇವಿಎಂ ದೋಷ ಅಂತ ಹೇಳುತ್ತಿಲ್ಲ. ಬೈ ಎಲೆಕ್ಷನ್ ಅಲ್ಲಿ ಆಡಳಿತಾರೂಢ ಅಲೆ ಸಾಮಾನ್ಯ. ಬಿಜೆಪಿಯೂ ಹಿಂದೆ ಅನೇಕ ಬಾರಿ ಉಪ ಚುನಾವಣೆಗಳಲ್ಲಿ ಗೆದ್ದಿದೆ. 2019ರ ಬಳಿಕ ನಡೆದಂತಹ ಉಪ ಚುನಾವಣೆಗಳಲ್ಲಿ ಗೆದ್ದಿದ್ದೇವೆ. ಆದರೆ, ಸಾರ್ವತ್ರಿಕ ಚುನಾವಣೆಯಲ್ಲಿ ಸೋತಿದ್ದಿದೆ. ಈ ಬಾರಿ ಜನ ತೀರ್ಮಾನ ಮಾಡಿದ್ದರೆ ಗೆಲ್ಲಬಹುದಿತ್ತು ಎಂದು ತಿಳಿಸಿದರು.
ಚುನಾವಣೆ ಸೋಲಿನ ಬಗ್ಗೆ ಬಿಜೆಪಿ ನಾಯಕರು ಆತ್ಮವಿಮರ್ಶೆ ಮಾಡಿಕೊಳ್ಳುತ್ತೇವೆ. ಸೋಲಾದ ಮಾತ್ರಕ್ಕೆ ಕಾಂಗ್ರೆಸ್ ಪಕ್ಷದವರ ಹಾಗೆ ಇವಿಎಂ ದೋಷ ಎನ್ನುವುದಿಲ್ಲ. ಒಂದೆರೆಡು ರಾಜ್ಯಗಳಲ್ಲಿ ಬಿಟ್ಟರೆ ದೇಶಾದ್ಯಂತ ಕಾಂಗ್ರೆಸ್ ನಶಿಸಿ ಹೋಗುತ್ತಿದೆ. ಸಂಪೂರ್ಣ ನೆಲಕಚ್ಚಿದೆ. ಮಹಾರಾಷ್ಟ್ರದಲ್ಲಿ ಬರೀ 21 ಸ್ಥಾನ ಪಡೆದಿದ್ದಾರೆ. ವಿರೋಧ ಪಕ್ಷದ ಲೀಡರ್ ಆಗಲೂ ಲಾಯಕ್ಕಿಲ್ಲದಂತಹ ಸ್ಥಿತಿ ತಲುಪಿದ್ದಾರೆ ಎಂದು ಟೀಕಿಸಿದರು.
Advertisement