ಡಿಕೆ ಶಿವಕುಮಾರ್ ಸಿಎಂ ಆಗುವುದರಲ್ಲಿ ತಪ್ಪೇನಿದೆ?; ಒಕ್ಕಲಿಗ ನಾಯಕತ್ವದಿಂದ ದೇವೇಗೌಡರು ಗೌರವಯುತವಾಗಿ ನಿರ್ಗಮಿಸಲಿ: ಸಿಪಿ ಯೋಗೇಶ್ವರ್ (ಸಂದರ್ಶನ)
ತೀವ್ರ ಜಿದ್ದಾಜಿದ್ದಿಯ ಕಾರಣದಿಂದ ಇಡೀ ರಾಜ್ಯದ ಗಮನ ಸೆಳೆದಿದ್ದ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದ್ದಾರೆ. ಚುನಾವಣೆ ಘೋಷಣೆಯಾದಾಗ ಬಿಜೆಪಿಯಲ್ಲಿದ್ದ ಅವರು, ಕೊನೆಯ ಗಳಿಗೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆಗಿಳಿದು ನಿಖಿಲ್ ಕುಮಾರಸ್ವಾಮಿ ಅವರನ್ನು 25,000 ಮತಗಳ ಅಂತರದಿಂದ ಸೋಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ನೆಲೆಯನ್ನು ಮತ್ತಷ್ಟು ಭದ್ರಪಡಿಸಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಸಿಪಿ.ಯೋಗೇಶ್ವರ್ ಅವರು, ಚುನಾವಣೆಯಲ್ಲಿ ಗೆಲುವು ಕುರಿತು ಮಾತನಾಡಿದರು. ಅಲ್ಲದೆ, ಡಿಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲು ಅವಕಾಶ ಸಿಕ್ಕಿದ್ದೇ ಆದರೆ, ಬೆಂಬಲ ನೀಡುವುದಾಗಿ ಹೇಳಿದರು.
ಇಷ್ಟು ಅಂತರದಿಂದ ಗೆಲುವು ನಿರೀಕ್ಷಿಸಿದ್ದಿರಾ?
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಹಣಬಲ ಹಾಗೂ ಪ್ರಬಲಪ್ರಚಾರವನ್ನು ಕಂಡು ಕಡಿಮೆ ಅಂತರದಲ್ಲಿ ಗೆಲುವು ನಿರೀಕ್ಷಿಸಿದ್ದೆ. ಮತದಾನದ ನಂತರ ಪ್ರತಿ ಬೂತ್‌ನಿಂದ ಮಾಹಿತಿ ಕಲೆಹಾಕಲಾಗಿತ್ತು. ಈ ವೇಳೆ ಅವರ ತಂತ್ರಗಾರಿಕೆ ಫಲಿಸಲಿಲ್ಲ ಎಂಬುದು ಅರಿವಾಯಿತು. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ 30-35 ಸಾವಿರ ಮತಗಳಿಂದ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದೆ. ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರ (ಕುಮಾರಸ್ವಾಮಿ ವಿರುದ್ಧ ಜನಾಂಗೀಯ ಹೇಳಿಕೆಗಳು) ಹೇಳಿಗೆ ನನ್ನ ಗೆಲುವಿನ ಅಂತರವನ್ನು 4,000-5,000 ಮತಗಳಿಂದ ಕಡಿಮೆ ಮಾಡಿರುವ ಸಾಧ್ಯತೆಗಳಿವೆ.
ಇದು ಸಮನಾಂತರ ಹೋರಾಟವಾಗಿತ್ತೇ?
ನಿಖಿಲ್ ಅವರು ಇನ್ನೂ ಚುನಾವಣಾ ರಾಜಕೀಯಕ್ಕೆ ಹೊಸಬರು. ಅವರು ನನಗೆ ಸರಿಸಾಟಿಯಲ್ಲ. ನಾನು ಅವರ ತಾಯಿಯನ್ನು (ಅನಿತಾ ಕುಮಾರಸ್ವಾಮಿ) ಸೋಲಿಸಿದ್ದೆ. ಅವರ ತಂದೆ ಕುಮಾರಸ್ವಾಮಿ ವಿರುದ್ಧ ಈ ಹಿಂದೆ ಕಡಿಮೆ ಅಂತರದಲ್ಲಿ ಸೋತಿದ್ದೆ.
ಶೇಕಡಾವಾರು ಎಷ್ಟು ಮಂದಿ ಒಕ್ಕಲಿಗರು ನಿಮಗೆ ಮತ ಹಾಕಿದ್ದಾರೆ?
ನನ್ನ ಹಿಂದಿನ ಅಧಿಕಾರಾವಧಿಯಲ್ಲಿ ನೀರಾವರಿ ಯೋಜನೆಗಳನ್ನು ಅಭಿವೃದ್ಧಿಪಡಿಸಿದ್ದರಿಂದ ಪ್ರಾಮಾಣಿಕವಾಗಿ ಕೃಷಿ ಮಾಡುತ್ತಿರುವ ಶೇ.50 ರಷ್ಟು ಒಕ್ಕಲಿಗರು ನನಗೆ ಮತ ಹಾಕಿದ್ದಾರೆ. ಕೆಲವು ಗಣ್ಯರು, ವಿದ್ಯಾವಂತರು ಮತ್ತು ಜಾತಿವಾದಿ ಒಕ್ಕಲಿಗರು ಗೌಡರ ಕುಟುಂಬಕ್ಕೆ ಒಲವು ತೋರಿರಬಹುದು.
ಮತ್ತೆ ಚನ್ನಪಟ್ಟಣದಲ್ಲೇ ಇರಲು ನಿಖಿಲ್ ನಿರ್ಧರಿಸಿದ್ದಾರೆ...?
ಇದರ ಬದಲು ಹಿಂದೆ ಸೋತಿದ್ದ ಮಂಡ್ಯ, ರಾಮನಗರದಲ್ಲಿಯೇ ವಾಪಸಾಗುವ ಸಂಕಲ್ಪ ಮಾಡಬೇಕಿತ್ತು.
ನಿಮ್ಮ ಕ್ಷೇತ್ರ ಚನ್ನಪಟ್ಟಣಕ್ಕೆ ನಿಮ್ಮ ಯೋಜನೆಗಳೇನು?
ಕುಮಾರಸ್ವಾಮಿ ಕ್ಷೇತ್ರವನ್ನು ನಾಶ ಮಾಡಿದ್ದಾರೆ. ಇಲ್ಲಿನ ಆಡಳಿತ ಕುಸಿದಿದೆ. ಇಲ್ಲಿನ ಭ್ರಷ್ಟಾಚಾರವನ್ನು ಕಿತ್ತು ಹಾಕಬೇಕಿದೆ. ಉತ್ತಮ ಮಾರುಕಟ್ಟೆಯೊಂದಿಗೆ ರೈತರ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆಯನ್ನು ಒದಗಿಸುವ ಮೂಲಕ ಮತ್ತು ಕೃಷಿಯಲ್ಲಿ ವೈಜ್ಞಾನಿಕ ಜ್ಞಾನವನ್ನು ತುಂಬುವ ಮೂಲಕ ರೈತರನ್ನು ಆರ್ಥಿಕವಾಗಿ ಬಲಪಡಿಸಲು ಕ್ರಮಕೈಗೊಳ್ಳಬೇಕು. ಬೆಂಗಳೂರು ಸಮೀಪದಲ್ಲಿದ್ದು ಕ್ಷೇತ್ರ ಹಣ್ಣು ಮತ್ತು ತರಕಾರಿಗಳಿಗೆ ದೊಡ್ಡ ಮಾರುಕಟ್ಟೆಯಾಗಿರುವುದರಿಂದ ತೋಟಗಾರಿಕೆಯಲ್ಲಿ ಗುತ್ತಿಗೆ ಕೃಷಿ ಮಾಡುವ ಬಗ್ಗೆಯೂ ಯೋಚಿಸುತ್ತಿದ್ದೇನೆ. ಚನ್ನಪಟ್ಟಣದಲ್ಲಿ ನೀರು ಸಮೃದ್ಧವಾಗಿರುವುದರಿಂದ ಮತ್ತು ಭೂಮಿ ಫಲವತ್ತಾಗಿರುವುದರಿಂದ ಆ ಸಾಮರ್ಥ್ಯವನ್ನು ಬಳಸಿಕೊಳ್ಳಬಹುದು. ಇದಲ್ಲದೆ, ಒಳಚರಂಡಿ ವ್ಯವಸ್ಥೆಗಳು, ಬಸ್ ನಿಲ್ದಾಣಗಳು ಮತ್ತು ನೀರಾವರಿ ಯೋಜನೆಗಳ ಅನುಷ್ಠಾನ ತರುವ ಚಿಂತನೆಗಳಿವೆ.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಮಾಜಿ ಸಂಸದ ಡಿಕೆ ಸುರೇಶ್ ಅವರಿಗೆ ಋಣಿಯಾಗಿದ್ದೀರಾ?
ನನಗೆ ಮತ್ತು ಕಾಂಗ್ರೆಸ್‌ಗೆ ಗೆಲುವು-ಗೆಲುವಿನ ಪರಿಸ್ಥಿತಿಯನ್ನು ನಾನು ಸೃಷ್ಟಿಸಿದೆ. ನಾನೇ ಅಭ್ಯರ್ಥಿಯಾಗದಿದ್ದರೆ ಪಕ್ಷ ಸೋಲುತ್ತಿತ್ತು. ಇದು ನಮ್ಮ ನಡುವಿನ ಒಪ್ಪಂದ. ಕಾಂಗ್ರೆಸ್‌ನ ಸೋಲು ಶಿವಕುಮಾರ್ ಅವರ ರಾಜ್ಯದ ಡಿಸಿಎಂ ಇಮೇಜ್‌ಗೆ ಧಕ್ಕೆ ತರುತ್ತಿತ್ತು.
ಶಿವಕುಮಾರ್ ಅವರನ್ನು ಮುಂದಿನ ಸಿಎಂ ಆಗಿ ನೋಡಬೇಕೆ?
ಅದರಲ್ಲಿ ತಪ್ಪೇನು? ಡಿಕೆ ಶಿವಕುಮಾರ್ ಅವರಿಗೆ ಅವರದೇ ಆದ ಸಾಮರ್ಥ್ಯಗಳಿವೆ... ಆದರೆ ಅವರಲ್ಲಿ ಯಾವುದೇ ದೌರ್ಬಲ್ಯವಿಲ್ಲ ಎಂದಲ್ಲ. ಅವಕಾಶಗಳು ಅವರ ಬಾಗಿಲನ್ನು ತಟ್ಟಿದರೆ, ನಾನು ಕೂಡ ಅವರನ್ನು ಬೆಂಬಲಿಸುತ್ತೇನೆ.
ಎಚ್.ಡಿ.ದೇವೇಗೌಡರಿಗೆ ನಿವೃತ್ತಿಯಾಗುವಂತೆ ಸಲಹೆ ನೀಡಿದ್ದೀರಿ. ಅದನ್ನು ಹೇಗೆ ಸಮರ್ಥಿಸುತ್ತೀರಿ?
ಅವರು 90 ವರ್ಷ ದಾಟಿದ ನಂತರ ನಿವೃತ್ತರಾಗಬೇಕಿತ್ತು. ಆದರೆ ಪ್ರಧಾನಿಯಾದ ಬಳಿಕವೂ ಅಧಿಕಾರದ ಹಸಿವನ್ನು ಉಳಿಸಿಕೊಂಡರು. ಇದಲ್ಲದೆ, ಅವರು ತಮ್ಮ ಮೊಮ್ಮಗನ ವಿಜಯವನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಡಾರ್ವಿನ್ನನ ಸಿದ್ಧಾಂತದ ಪ್ರಕಾರ, ಇದು ಸರ್ವೈವಲ್ ಆಫ್ ದಿ ಫಿಟೆಸ್ಟ್. ಅವರು ಪೂರ್ಣಾವಧಿಗೆ ರಾಜ್ಯ ಅಥವಾ ದೇಶವನ್ನು ಆಳಲಿಲ್ಲ.
ಅವರು (ಗೌಡ) ಒಕ್ಕಲಿಗರ ಪರಮೋಚ್ಚ ನಾಯಕರಲ್ಲವೇ?
ಹಿಂದೆ ಇದ್ದರು. ಅವರಿಗೆ ಯಾವ ವಿಶ್ವಾಸಾರ್ಹತೆ ಇತ್ತು? ತಮ್ಮ ಅಸ್ತಿತ್ವಕ್ಕಾಗಿ ದೇವೇಗೌಡರು ತನ್ನ ಮನೆಯವರನ್ನೆಲ್ಲ, ಮೊಮ್ಮಕ್ಕಳನ್ನೆಲ್ಲ ರಾಜಕೀಯವಾಗಿ ಬೆಳೆಸಲು ಮುಂದಾದರು. ಹೀಗಿರುವಾಗ ಒಕ್ಕಲಿಗ ನಾಯಕನಾಗುವುದು ಹೇಗೆ? ಈ ಸತ್ಯವನ್ನು ಒಕ್ಕಲಿಗರು ಅರಿತುಕೊಂಡಿದ್ದಾರೆ. ದೇವೇಗೌಡರು ರಾಜಕೀಯ ಜೀವನದ ಸಂಧ್ಯಾಕಾಲದಲ್ಲಿ ಮೊಮ್ಮಗನನ್ನು ಗೆಲ್ಲಿಸಿಕೊಳ್ಳಲು ಆಗಲಿಲ್ಲ. ದೈತ್ಯ ಶಕ್ತಿಯಾಗಿದ್ದ ದೇವೇಗೌಡರಲ್ಲಿ ಪ್ರಕೃತಿ ಸಹಜವಾಗಿ ವಯಸ್ಸಾದಂತೆ ಈಗ ಶಕ್ತಿಯಿಲ್ಲ. ಹೀಗಾಗಿ ಗೌರವಯುತವಾಗಿ ದೇವೇಗೌಡರು ನಿರ್ಗಮಿಸಬೇಕು. ಇಲ್ಲದಿದ್ದರೆ ಸಮುದಾಯದ ಪ್ರಬಲ ಶಕ್ತಿಗಳು ಅವರನ್ನು ಸೋಲಿಸಿ ಸ್ಥಾನವನ್ನು ಪಡೆದುಕೊಳ್ಳುತ್ತವೆ. ಇದು ಡಿಕೆ ಶಿವಕುಮಾರ್ ಆಗಿರಬಹುದು ಅಥವಾ ಸಾಮರ್ಥ್ಯ ಮತ್ತು ಅದೃಷ್ಟವನ್ನು ಹೊಂದಿರುವ ಬೇರೆಯವರೂ ಆಗಿರಬಹುದು.
ಟಿಕೆಟ್‌ಗಾಗಿ ನಿಮ್ಮ ಪರವಾಗಿ ಲಾಬಿ ಮಾಡಿದ ಆರ್ ಅಶೋಕ ಮತ್ತು ಡಾ ಸಿಎನ್ ಅಶ್ವಥ್ ನಾರಾಯಣ್ ಅವರಂತಹ ಹಲವು ನಾಯಕರು ಇನ್ನೂ ಬಿಜೆಪಿಯಲ್ಲಿದ್ದಾರೆ..?
ಸ್ವಾಭಾವಿಕವಾಗಿ, ಅವರಿಗೆ ನನ್ನ ಶಕ್ತಿ ತಿಳಿದಿತ್ತು. ಆದರೆ ಬಿಎಸ್ ಯಡಿಯೂರಪ್ಪ ನನ್ನ ಶಕ್ತಿ ಬಳಸಿ ಸಿಎಂ ಆದರು... ಬಳಿಕ ನಾನು ಮಂತ್ರಿಯಾಗದಂತೆ ನೋಡಿಕೊಂಡರು.
ಭವಿಷ್ಯದಲ್ಲಿ ಬಿಜೆಪಿಗೆ ಮರಳುತ್ತೀರಾ?
ನಾನೇಕೆ ಮರಳಲಿ? ಹಾಗೆ ಮಾಡಲು ನಾನು ದೇವೇಗೌಡ ಅಲ್ಲ. ಚನ್ನಪಟ್ಟಣ ಜನತೆಯ ಹಿತದೃಷ್ಟಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಪಕ್ಷಾಂತರ ಮಾಡಿದ್ದೇನೆ.
ಜಂಪಿಂಗ್ ಸ್ಟಾರ್ ಆಗಿಯೇ ಮುಂದುವರಿಯುತ್ತೀರಾ... ಪಕ್ಷ ಬದಲಾಯಿಸುತ್ತೀರಾ?
ಕಾಂಗ್ರೆಸ್ ಅಧಿಕಾರದಲ್ಲಿರುವುದರಿಂದ ಇಲ್ಲ ಎಂಬುದೇ ನನ್ನ ಉತ್ತರ. ಅಂತಹ ಪರಿಸ್ಥಿತಿ ಬರುತ್ತದೆಯೇ ಎಂದು ನೋಡೋಣ. ನಾನು ಯಾವುದೇ ಪಕ್ಷಕ್ಕೆ (ಕಾಂಗ್ರೆಸ್ ಸೇರಿದಂತೆ) ಯಾವುದೇ ಬಾಂಡ್ ಪೇಪರ್ ಮೇಲೆ ಸಹಿ ಮಾಡಿಲ್ಲ. ನಾನೊಬ್ಬ ಸ್ವತಂತ್ರ ಚಿಂತಕ. ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡದೆ ಒಂದು ಪಕ್ಷಕ್ಕೆ ಅಂಟಿಕೊಂಡರೆ ಏನು ಪ್ರಯೋಜನ? ಅಭಿವೃದ್ಧಿಯೇ ನನ್ನ ಸಿದ್ಧಾಂತ. ನನ್ನದು ಪ್ರೈವೇಟ್ ಲಿಮಿಟೆಡ್ ಕಂಪನಿಯಂತೆ.
ಅಲ್ಪಸಂಖ್ಯಾತರು ನಿಮ್ಮ ಗೆಲುವಿಗೆ ಸಹಾಯ ಮಾಡಿದ್ದಾರೆಯೇ?
ನಾನು ಬಿಜೆಪಿಯಲ್ಲಿದ್ದಾಗಲೂ ಅವರಲ್ಲಿ 3,000-4,000 (ಅಲ್ಪಸಂಖ್ಯಾತ ಮತದಾರರು) ಜನರು ನನಗೆ ಮತ ಹಾಕಿದ್ದರು. ಈ ಬಾರಿ ನಾನು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ನನಗೆ ಮತ ಹಾಕಿದ್ದಾರೆಂದು ಹೇಳಿದರು.