ಕೊಪ್ಪಳ: ದಲಿತರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಮರಕುಂಬಿಯ 98 ಗ್ರಾಮಸ್ಥರಿಗೆ ಜಾಮೀನು ಸಿಕ್ಕಿದ್ದರೂ ಇನ್ನು ಬಿಡುಗಡೆ ಭಾಗ್ಯ ದೊರೆತಿಲ್ಲ.
ಮರಕುಂಬಿ ಪ್ರಕರಣದಲ್ಲಿ ದಲಿತರ ಮೇಲೆ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಬರೋಬ್ಬರಿ 101 ಆರೋಪಿಗಳಿಗೆ ಕೋರ್ಟ್ ಶಿಕ್ಷೆ ವಿಧಿಸಿತ್ತು. ಅದರಲ್ಲಿ 98 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅಟ್ರಾಸಿಟಿ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದ್ದು, ದೇಶಾದ್ಯಂತ ದೊಡ್ಡ ಸುದ್ದಿಯಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್ ಪೀಠ 99 ಅಪರಾಧಿಗಳಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಆದರೆ, ಜಾಮೀನಿಗೆ ವಿಧಿಸಿರುವ ಷರತ್ತು ಪೂರೈಸಲು ಸಾಧ್ಯವಾಗದೇ ಕುಟುಂಬಗಳು ಪರದಾಡುತ್ತಿವೆ. ಈ ಮೂಲಕ ಜಾಮೀನು ಸಿಕ್ಕರೂ ಅಪರಾಧಿಗಳಿಗೆ ಬಿಡುಗಡೆ ಭಾಗ್ಯ ಇಲ್ಲದಂತಾಗಿದೆ.
ಗ್ರಾಮದಲ್ಲಿನ ಹಲವು ಕುಟುಂಬಗಳ ಸದಸ್ಯರು ಸೆರೆವಾಸ ಅನುಭವಿಸುತ್ತಿದ್ದಾರೆ. ಬಹುತೇಕ ಕುಟುಂಬಗಳು ದಿನಗೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದು, ದಿನಗೂಲಿ ನಂಬಿಕೊಂಡೇ ಜೀವನ ನಡೆಸುತ್ತಿದ್ದಾರೆ. ಆದರೆ, ನ್ಯಾಯಾಲಯದ ಷರತ್ತಿನಂತೆ ಪ್ರತಿಯೊಬ್ಬ ಅಪರಾಧಿಯೂ 50 ಸಾವಿರ ರೂ. ಬೆಲೆಯ ಬಾಂಡ್ ನೀಡಬೇಕು. ಹಾಗೂ ಒಬ್ಬರೂ ಶ್ಯೂರಿಟಿ ಕೊಡಬೇಕು. ಆದರೆ, ಕುಟುಂಬಸ್ಥರಿಗೆ ಈ ಷರತ್ತು ಪೂರೈಸುವುದೇ ಕಷ್ಟಕರವಾಗಿದೆ.
ಕೆಲವರು ಬಾಂಡ್‌ಗಾಗಿ ತಮ್ಮ ಚಿನ್ನಾಭರಣಗಳನ್ನು ಮಾರಾಟ ಮಾಡುತ್ತಿದ್ದರೆ, ಕೆಲವರು ಕೈ ಸಾಲ ಪಡೆಯಲು ಮುಂದಾಗಿದ್ದಾರೆ.
ಮರಕುಂಬಿ ಗ್ರಾಮದ ನಿವಾಸಿಯಾಗಿರುವ ವೃದ್ಧೆ ನಾಗಮ್ಮ (ಹೆಸರು ಬದಲಿಸಲಾಗಿದೆ) ಅವರಿಗೆ ಒಬ್ಬನೇ ಮಗನಿದ್ದು, ಆತ ಮಾಡುತ್ತಿದ್ದ ದಿನಗೂಲಿಯಿಂದ ಮನೆ ನಡೆಯುತ್ತಿತ್ತು. ಆದರೀಗ ಆತನೇ ಜೈಲಿನಲ್ಲಿರುವುದರಿಂದ ನಾಗಮ್ಮ ಅವರಿಗೆ ದಿಕ್ಕು ತೋಚದಂತಾಗಿದೆ.
ಗ್ರಾಮದಲ್ಲಿ ಹಲವರು ತಮ್ಮ ತಮ್ಮ ಕುಟುಂಬಸ್ಥರನ್ನು ಹೊರತರಲು ಹೆಣಗಾಡತ್ತಿದ್ದಾರೆ. ಕೆಲವರು ಹಣದ ವ್ಯವಸ್ಥೆ ಮಾಡಿ, ವಕೀಲರನ್ನು ಭೇಟಿ ಮಾಡಿದ್ದಾರೆ. ಕೆಲವರು ಇನ್ನೂ ಹಣ ಹೊಂದಿಸುವ ಪ್ರಯತ್ನದಲ್ಲಿದ್ದಾರೆಂದು ಗ್ರಾಮಸ್ಥರೊಬ್ಬರು ಹೇಳಿದ್ದಾರೆ.
2014ರ ಆಗಸ್ಟ್ 28 ರಂದು ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದ ಮಂಜುನಾಥ ಮತ್ತು ಸ್ನೇಹಿತರು ಎಂಬುವರು ಪವರ್ ಸಿನಿಮಾ ನೋಡಲು ಗಂಗಾವತಿ ನಗರದಲ್ಲಿರುವ ಶಿವ ಚಿತ್ರಮಂದಿರಕ್ಕೆ ಹೋಗಿದ್ದರು. ಈ ಸಮಯದಲ್ಲಿ ಟಿಕೆಟ್ ತೆಗೆದುಕೊಳ್ಳುವ ವಿಚಾರಕ್ಕೆ ಜಗಳ ಆರಂಭವಾಗಿತ್ತು. ಬಳಿಕ, ಮಂಜುನಾಥ್ ಮತ್ತು ಆತನ ಸ್ನೇಹಿತರು, ನಮ್ಮೂರಿನ ದಲಿತರು ನಮ್ಮ ಮೇಲೆ ಹಲ್ಲೆ ಮಾಡಿಸಿದ್ದಾರೆ ಎಂದು ಗ್ರಾಮದಲ್ಲಿ ಹೇಳಿದ್ದಾರೆ. ಇದು ಸವರ್ಣೀಯ ಕುಟುಂಬಗಳ ಆಕ್ರೋಶಕ್ಕೆ ಕಾರಣವಾಗಿತ್ತು.
ಇದರ ಬೆನ್ನಲ್ಲೇ ಅಂದು ಸಂಜೆ ಗ್ರಾಮದ ಸವರ್ಣೀಯರು, ದಲಿತರ ಕೇರಿ ಮೇಲೆ ದಾಳಿ ಮಾಡಿದ್ದರು. ದಲಿತರಿಗೆ ಸೇರಿದ್ದ ನಾಲ್ಕು ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದರು. ಅನೇಕರ ಮೇಲೆ ಸಿಕ್ಕಸಿಕ್ಕ ವಸ್ತುಗಳಿಂದ ಹಲ್ಲೆ ಮಾಡಿದ್ದರು. ಬೆಂಕಿ ಅವಘಡದಲ್ಲಿ ಗುಡಿಸಲುಗಳು ಸುಟ್ಟು ಭಸ್ಮವಾಗಿದ್ದವು. ಅದೃಷ್ಟವೆನ್ನುವಂತೆ ಗುಡಿಸಲುಗಳಲ್ಲಿ ಯಾರು ಇಲ್ಲದೇ ಇದ್ದಿದ್ದರಿಂದ ಅಂದು ಯಾವುದೇ ಪ್ರಾಣಾಪಾಯವಾಗಿರಲಿಲ್ಲ. ಕೇವಲ ಬೆಂಕಿ ಹಚ್ಚಿದ್ದು ಮಾತ್ರವಲ್ಲ, ಅಂದು 27 ದಲಿತರ ಮೇಲೆ ಹಲ್ಲೆಯಾಗಿತ್ತು. ಈ ಬಗ್ಗೆ ಅಂದು ಘಟನೆಯಲ್ಲಿ ಗಾಯಗೊಂಡವರು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸವರ್ಣೀಯರ ವಿರುದ್ದ ಅಟ್ರಾಸಿಟಿ, ಕೊಲೆಗೆ ಯತ್ನ, ದೊಂಬಿ, ಜೀವ ಬೆದರಿಕೆ ಸೇರಿದಂತೆ ಅನೇಕ ಸೆಕ್ಷನ್ ಅಡಿಯಲ್ಲಿ ಪ್ರಕರಣಗಳು ದಾಖಲಿಸಿದ್ದರು. 117 ಸವರ್ಣೀಯರ ಮೇಲೆ ಅಂದು ಕೇಸ್ ದಾಖಲಾಗಿತ್ತು.
ಮರಕುಂಬಿ ಗ್ರಾಮದಲ್ಲಿ ದಲಿತರ ಮೇಲೆ ನಡೆದಿದ್ದ ದೌರ್ಜನ್ಯ, ದೇಶಾದ್ಯಂತ ಸುದ್ದಿಯಾಗಿತ್ತು. ಘಟನೆ ನಂತರ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ನಂತರ ಎಲ್ಲರು ಜಾಮೀನಿನ ಮೇಲೆ ಹೊರಗಿದ್ದರು. ಆದರೆ, ಕಳೆದ ಹತ್ತು ವರ್ಷಗಳಿಂದ ಪ್ರಕರಣದ ವಿಚಾರಣೆ ನಡೆಯುತ್ತಲೇ ಇತ್ತು. ಆರಂಭದಲ್ಲಿ ಸೆಷನ್ ಕೋರ್ಟ್ ವಿಚಾರಣೆ ನಡೆಸಿತ್ತು. ನಂತರ, 2015ರಲ್ಲಿ ಪ್ರಕರಣ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಲಯಕ್ಕೆ ವರ್ಗಾವಣೆಯಾಗಿತ್ತು. ಪ್ರಕರಣ ಸಂಬಂಧ ಅಕ್ಟೋಬರ್ 21 ರಂದು ವಿಚಾರಣೆ ನಡೆಸಿದ್ದ ನ್ಯಾಯಾಧೀಶರು, ಘಟನೆಯಲ್ಲಿ ಬಾಗಿಯಾಗಿದ್ದ 101 ಜನರು ಅಪರಾಧಿಗಳು ಎಂದು ಘೋಷಣೆ ಮಾಡಿದ್ದರು. 117 ಜನರ ಪೈಕಿ ಈಗಾಗಲೇ ಅನೇಕರು ಬಾರದ ಲೋಕಕ್ಕೆ ಹೋಗಿದ್ದು, ಉಳಿದ 101 ಜನರು ಅಪರಾಧಿಗಳು ಎಂದು ಆದೇಶ ನೀಡಿದ್ದರು.
Advertisement