ಬೆಂಗಳೂರು: ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆ ಓದುವುದನ್ನು ಕಡ್ಡಾಯ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದ್ದಾರೆ.
ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಎಲ್ಲ ಮಕ್ಕಳಿಗೂ ಸಂವಿಧಾನ ಅರ್ಥವಾಗಬೇಕು. ಹೀಗಾಗಿ ಶಾಲೆಗಳಲ್ಲೇ ಸಂವಿಧಾನ ಪೀಠಿಕೆ ಓದಿಸುತ್ತಿದ್ದೇವೆ ಎಂದರು.
ಸಂವಿಧಾನ ಅಂಗೀಕಾರವಾಗಿ ಇಂದಿಗೆ 75 ವರ್ಷ ಆಯ್ತು. ಈ ದಿನವನ್ನು ನಾವು ಸಂವಿಧಾನ ದಿನ ಎಂದು ಆಚರಣೆ ಮಾಡುತ್ತಿದ್ದೇವೆ. ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಸಂಸ್ಥೆಗಳು ಸಂವಿಧಾನದಡಿಯಲ್ಲೇ ನಡೆಯಬೇಕು ಎಂದರು.
ಸಂವಿಧಾನ ಜಾರಿಗೆ ಬಂದು ಮುಂದಿನ ವರ್ಷ ಜನವರಿಗೆ 75 ವರ್ಷ ತುಂಬಲಿದೆ. ದೀರ್ಘಕಾಲದ ಶಾಂತಿಯಲ್ಲಿರುವ ಸಂವಿಧಾನ ಎಂದರೆ ಅದು ಭಾರತದ ಸಂವಿಧಾನ. ಸಂವಿಧಾನ ಎಷ್ಟೇ ಚೆನ್ನಾಗಿದ್ದರೂ ಒಳ್ಳೆಯವರ ಕೈಯಲ್ಲಿ ಇದ್ದರೆ ಒಳ್ಳೆಯದಾಗುತ್ತದೆ. ಕೆಟ್ಟವರ ಕೈಯಲ್ಲಿ ಇದ್ದರೆ ಕೆಟ್ಟದಾಗುತ್ತೆ ಅಂತ ಬಿಆರ್ ಅಂಬೇಡ್ಕರ್ ಅವರು ಹೇಳಿದ್ದಾರೆ ಎಂದು ಸಿಎಂ ತಿಳಿಸಿದರು.
ನಮ್ಮ ದೇಶದಲ್ಲಿ ಸಂವಿಧಾನ ವಿರೋಧಿಗಳಿದ್ದರು. ವೀರ್ ಸಾವರ್ಕರ್, ಆರ್ಎಸ್ಎಸ್ನ ಸರ ಸಂಘಚಾಲಕರಾಗಿದ್ದ ಎಂಎಸ್ ಗೋಲ್ವಾಲ್ಕರ್ ವಿರೋಧ ಮಾಡಿದ್ದರು. ಜಗತ್ತಿನ ಅನೇಕ ರಾಷ್ಟ್ರಗಳ ಸಂವಿಧಾನದ ಅಭ್ಯಾಸ, ಅನುಭವದ ಆಧಾರದ ಮೇಲೆ ಸಂವಿಧಾನ ರಚನೆ ಮಾಡಲಾಗಿದೆ. ಇದು ಲಿಖಿತ ಸಂವಿಧಾನ. ಇದಕ್ಕಿಂತ ಮೊದಲು ಅಲಿಖಿತ ಸಂವಿಧಾನ ಇತ್ತು. ಅದು ಒಬ್ಬರು ಮತ್ತೊಬ್ಬರನ್ನು ದ್ವೇಷಿಸುವ ರೀತಿ ಇತ್ತು ಎಂದರು.
Advertisement