ಬೆಂಗಳೂರು: ಗ್ಯಾರಂಟಿ ಯೋಜನೆಗಳಿಂದಾಗಿ ಕ್ಷೇತ್ರಕ್ಕೆ ಬರುತ್ತಿದ್ದ ಅನುದಾನ ಕಡಿತವಾಗಿದ್ದು, ಒಂದೆರಡು ಗ್ಯಾರಂಟಿ ಯೋಜನೆಗಳನ್ನು ಕೈ ಬಿಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರ ಬಳಿ ಮನವಿ ಮಾಡುತ್ತೇನೆ ಎಂದು ಕಾಂಗ್ರೆಸ್ ಶಾಸಕರೊಬ್ಬರು ನೀಡಿರುವ ಹೇಳಿಕೆ ಇದೀಗ ವೈರಲ್ ಆಗುತ್ತಿದೆ.
ವಿಜಯನಗರ ಜಿಲ್ಲೆಯ ಹೊಸಪೇಟೆ ಕಾಂಗ್ರೆಸ್ ಶಾಸಕ ಹೆಚ್.ಆರ್.ಗವಿಯಪ್ಪ ಇಂತಹುದೊಂದು ಪ್ರಸ್ತಾಪ ಮುಂದಿಟ್ಟಿದ್ದು, ಗ್ಯಾರಂಟಿ ಸ್ಕೀಂಗಳಿಂದಾಗಿ ಕ್ಷೇತ್ರಗಳಿಗೆ ಅನುದಾನ ಬರುತ್ತಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.
ಹೊಸಪೇಟೆಯ ಇಪ್ಪಿತೇರಿ ಮಾಗಾಣಿಯಲ್ಲಿ ನಡೆದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ಯಾರಂಟಿಗಳಿಂದ ಆಶ್ರಯ ಮನೆಗಳು ಬರುತ್ತಿಲ್ಲ. ಶಕ್ತಿ ಯೋಜನೆ ಸೇರಿದಂತೆ ಇನ್ನೆರೆಡು ಗ್ಯಾರಂಟಿಗಳು ಕಡಿಮೆ ಮಾಡಲು ಮುಖ್ಯಮಂತ್ರಿಗಳಿಗೆ ಹೇಳುತ್ತೇವೆ. ಅವರೇನು ತೀರ್ಮಾನ ಮಾಡುತ್ತಾರೆ ನೋಡೋಣ ಎಂದು ಹೇಳಿದರು.
'ಎರಡು ಗ್ಯಾರಂಟಿಗಳನ್ನ ರದ್ದು ಮಾಡುವುದರಿಂದ ಅನುದಾನ ಸರಿಯಾಗುತ್ತದೆ. ಗ್ಯಾರಂಟಿಗಳಿಂದ ಆಶ್ರಯ ಮನೆಗಳು ಬರ್ತಿಲ್ಲ. ಬಸ್‌ನಲ್ಲಿ ಓಡಾಡೋದು ಸೇರಿದಂತೆ ಇನ್ನಿರಡು ಗ್ಯಾರಂಟಿಗಳು ಕಡಿಮೆ ಮಾಡೋಕೆ ಸಿಎಂಗೆ ಹೇಳ್ತೀವಿ. ಒಂದೆರಡು ಗ್ಯಾರಂಟಿಗಳು ತೆಗೆಯಿರಿ ಅಂತಾ ಸಿಎಂ ಸಿದ್ದರಾಮಯ್ಯ ಅವರಿಗೆ ಹೇಳ್ತೀವಿ. ಅವರೇನು ತೀರ್ಮಾನ ಮಾಡ್ತಾರೆ ನೋಡೋಣ ಎಂದು ಹೇಳಿರುವ ವಿಡಿಯೋ ವೈರಲ್ ಆಗುತ್ತಿದೆ.
ಎಚ್ಚರಿಕೆ ಕೊಟ್ಟ ಡಿಸಿಎಂ ಡಿಕೆ ಶಿವಕುಮಾರ್
ಇನ್ನು ಗವಿಯಪ್ಪ ಅವರ ಈ ಹೇಳಿಕೆಯಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನವಿಲ್ಲ ಎಂದು ಆರೋಪ ಮಾಡ್ತಿದ್ದ ವಿರೋಧ ಪಕ್ಷದ ನಾಯಕರಿಗೆ ಆಹಾರವಾದಂತಾಗಿದ್ದು, ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಡಿಸಿಎಂ ಡಿಕೆ ಶಿವಕುಮಾರ್, ಶಾಸಕ ಗವಿಯಪ್ಪ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
ಅಲ್ಲದೆ 'ಶಾಸಕ ಗವಿಯಪ್ಪ ಅವರು ಈ ರೀತಿ ಹೇಳಿಕೆ ನೀಡಬಾರದಿತ್ತು. ಅವರಿಗೆ ಪಕ್ಷದ ವತಿಯಿಂದ ಶೋಕಾಸ್ ನೋಟಿಸ್ ನೀಡುತ್ತೇವೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ನಾವು ಕರ್ನಾಟಕದ ಜನತೆಗೆ ನೀಡಿದ್ದ ಮಾತಿಗೆ ಬದ್ಧರಾಗಿದ್ದೇವೆ.
ಯಾರೂ ಕೂಡ ಈ ಬಗ್ಗೆ ಚಕಾರ ಎತ್ತಬಾರದು. ಬಿಪಿಎಲ್ ಕಾರ್ಡ್ ವಿಚಾರವಾಗಿ ಅನ್ನಭಾಗ್ಯ ಯೋಜನೆಗೆ ಯಾರು ಅರ್ಹರಲ್ಲವೋ ಅವರನ್ನು ಪತ್ತೆ ಮಾಡಿ ತೆಗೆದು ಹಾಕುತ್ತೇವೆ. ಆದರೆ ಓರ್ವ ಕಾಂಗ್ರೆಸ್ ಶಾಸಕನಾಗಿ ಪಕ್ಷದ ಯೋಜನೆಗಳ ಬಗ್ಗೆ ನಕಾರಾತ್ಮಕವಾಗಿ ಮಾತನಾಡಬಾರದು' ಎಂದು ಹೇಳಿದರು.
ಗವಿಯಪ್ಪ ವಿರುದ್ಧ ಕ್ಷೇತ್ರದಲ್ಲೇ ಅಸಮಾಧಾನ!
ನಮ್ಮ ಕ್ಷೇತ್ರಕ್ಕೆ ಸರ್ಕಾರದಿಂದ ಯಾವುದೇ ಅನುದಾನ ಬರುತ್ತಿಲ್ಲ. ಇದಕ್ಕೆ ಸ್ಥಳೀಯ ಕಾಂಗ್ರೆಸ್ ಮುಖಂಡರೇ ಶಾಸಕರ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಶಾಸಕ ಹೆಚ್ಆರ್ ಗವಿಯಪ್ಪ ಹೊಸಪೇಟೆ ಪಾಲಿಗೆ ಶಾಪವಾಗಿದ್ದಾರೆ ಎಂದು ಹುಡಾ ಅಧ್ಯಕ್ಷ ಇಮಾಮ್ ನಿಯಾಜಿ ಕಿಡಿಕಾರಿದ್ದರು. ವಿಜಯನಗರ ಕ್ಷೇತ್ರಕ್ಕೆ ಅಂದಾಜು 150 ಕೋಟಿ ರೂಪಾಯಿ ಅನುದಾನ ಬಂದರೂ ಶಾಸಕ ಗವಿಯಪ್ಪ ಸುಳ್ಳು ಹೇಳುತ್ತಾರೆ ಎಂದು ಇಮಾಮ್ ನಿಯಾಜಿ ಅಸಮಾಧಾನ ಹೊರಹಾಕಿದ್ದರು.
Advertisement