ಕಲಬುರಗಿ: ಬಿಜೆಪಿಯಲ್ಲಿನ ಭಿನ್ನಮತ ತಾರಕಕ್ಕೇರಿದ್ದು, ವಕ್ಫ್ ವಿರುದ್ಧ ಜನಜಾಗೃತಿ ಅಭಿಯಾನಕ್ಕೆ ಪ್ರತ್ಯೇಕವಾಗಿ ಚಾಲನೆ ನೀಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಜಿ ಸಿಎಂ ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಕ್ಫ್ ವಿರುದ್ಧದ ಹೋರಾಟ ಮಾಡುತ್ತಿರುವ ಬಗ್ಗೆ ಮಾತನಾಡಿರುವ ಯತ್ನಾಳ್, ಇಲ್ಲಿ ಯಾರೂ ಸಿಎಂ ಆಗೋಕೆ ಹೋರಾಟ ಮಾಡುತ್ತಿಲ್ಲ. ನಾವು ವಕ್ಫ್ ವಿರುದ್ಧ ಹೋರಾಟ ಮಾಡಿದ್ರೆ ನಿಮಗ್ಯಾಕೆ ಭಯ, ಟೆನ್ಶನ್ ಎಂದು ಯಡಿಯೂರಪ್ಪ, ವಿಜಯೇಂದ್ರ ಅವರನ್ನು ಪ್ರಶ್ನಿಸಿದ್ದಾರೆ.
ವಕ್ಪ್ ವಿರುದ್ಧದ ಹೋರಾಟ ಅಧಿಕಾರ, ಅಂತಸ್ತು, ಹುದ್ದೆ ಮೇಲೆ ಕಣ್ಣಿಟ್ಟು ಆರಂಭಿಸಿದ್ದಲ್ಲ ಯಾರೂ ಸ್ವಾರ್ಥಕ್ಕಾಗಿ ವಕ್ಫ್ ವಿರುದ್ಧ ಹೋರಾಟ ನಡೆಸುತ್ತಿಲ್ಲ. ಯಾವುದೇ ಕುಟುಂಬವನ್ನು ಮುಗಿಸಲು ನಾವು ಹೋರಾಟ ಮಾಡುತ್ತಿಲ್ಲ ಎಂದು ವಿಜಯೇಂದ್ರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ನನ್ನ ಬಗ್ಗೆ ಕಠಿಣ ಕ್ರಮ ಕೈಗೊಳ್ತೇವೆ ಅಂತಾರೆ ಯಾಕೆ ಕ್ರಮ ಕೈಗೊಳ್ತಿರಾ? ಎಂದು ಯತ್ನಾಳ್ ವಿಜಯೇಂದ್ರ, ಬಿಎಸ್ ವೈ ಗೆ ಸವಾಲು ಹಾಕಿದ್ದಾರೆ. ನಾವು ಕಲಬುರಗಿ ಬಳಿಕ ಬೆಳಗಾವಿಯಲ್ಲಿ ಬೃಹತ್ ಹೋರಾಟ ಮುಗಿಸಿ ದೆಹಲಿಗೆ ಹೋಗುತ್ತೇವೆ. ಡಿ. 3-4 ರಂದು ದೆಹಲಿಗೆ ಹೋಗಿ ವಕ್ಪ್ ವಿರುದ್ದ ವರದಿ ನೀಡ್ತೇವೆ ಎಂದು ಯತ್ನಾಳ್ ಹೇಳಿದ್ದಾರೆ.
ಬಿ.ವೈ.ವಿಜಯೇಂದ್ರ ಹೋರಾಟ ಮಾಡಲ್ಲ. ವಿಜಯೇಂದ್ರ ವಕ್ಫ್ ವಿರುದ್ಧ ಯಾವ ಹೋರಾಟ ಮಾಡಿದ್ದಾರೆ? ಯಾವ ರೈತರ ಮನವಿ ಸ್ವೀಕರಿಸಿದ್ದಾನೆ ತೋರಿಸಿ. ರಾತ್ರಿಯಾದ್ರೆ ಸಾಕು ಡಿಕೆ-ಸಿದ್ದರಾಮಯ್ಯ ಮನೆಯಲ್ಲಿ ಇರ್ತಾರೆ. ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ನೂರೆಂಟು ಕೇಸ್ ಇದೆ. ಕಾಪಾಡೋ ಶಿವಪ್ಪ ಅಂತಾ ಡಿಸಿಎಂ ಮನೆಯಲ್ಲಿ ಇರ್ತಾರೆ. ಕಾಪಾಡೋ ಸಿದ್ದರಾಮಯ್ಯ ಅಂತಾ ಅವರ ಮನೆಯಲ್ಲಿಯೂ ಇರ್ತಾರೆ ಎಂದು ಯತ್ನಾಳ್ ವ್ಯಂಗ್ಯವಾಡಿದ್ದಾರೆ.
ಮುಂದೆ ಟಿಕೆಟ್ ಕೊಡುವ ಅಧಿಕಾರ ನಮಗೆ ಬರುತ್ತೆ. ಹೈಕಮಾಂಡ್ ಗೆ ನನ್ನ ವಿರುದ್ದ ಪತ್ರ ಬರೆಯುತ್ತಿರುವುದು ಹೊಸದೇನೂ ಅಲ್ಲ. ನನ್ನ ವಿರುದ್ದ ನೀಡಿರುವ ದೂರುಗಳೇ ಒಂದು ರೂಮ್ ತುಂಬಿವೆ. ಆದರೆ ನನ್ನನ್ನು ಏನು ಮಾಡುವುದಕ್ಕೆ ಆಗುವುದಿಲ್ಲ ಎಂದು ವಿಜಯೇಂದ್ರಗೆ ಯತ್ನಾಳ್ ಟಾಂಗ್ ನೀಡಿದ್ದಾರೆ.
Advertisement