ಬೆಂಗಳೂರು: ಮೊದಲ ದಿನದಿಂದಲೂ ವಿಜಯೇಂದ್ರ ಅವರ ನಾಯಕತ್ವವನ್ನು ಒಪ್ಪಿಕೊಂಡಿಲ್ಲ. ವಕ್ಫ್ ವಿವಾದ ಸಂಬಂಧ ವಿಜಯೇಂದ್ರ ಆರಂಭಿಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಗೋಕಾಕ್ ಶಾಸಕ ರಮೇಶ ಜಾರಕಿಹೊಳಿ ಅವರು ಶುಕ್ರವಾರ ಹೇಳಿದರು.
ಅಥಣಿಯಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಕ್ಫ್ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ನವೆಂಬರ್ 25 ರಿಂದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ವಿಜಯೇಂದ್ರ ಪ್ರಾರಂಭಿಸಲಿರುವ ಮತ್ತೊಂದು ಪ್ರತಿಭಟನೆಯಲ್ಲಿ ಭಾಗವಾಗುವುದಿಲ್ಲ. ಮೊದಲ ದಿನದಿಂದಲೂ ನಾನವು ಅವರ ನಾಯಕತ್ವವನ್ನು ಒಪ್ಪಿಕೊಂಡಿಲ್ಲ. ಅದರ ಬಗ್ಗೆ ಹೆಚ್ಚು ಚರ್ಚೆ ನಡೆಸುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು.
ಇದೇ ವೇಳೆ ಸಿದ್ದರಾಮಯ್ಯ ಆರೋಪ ಕುರಿತು ಪ್ರತಿಕ್ರಿಯಿಸಿ, ಆರೋಪದಲ್ಲಿ ಹುರುಳಿಲ್ಲ. ಯಾವ ಅರ್ಥದಲ್ಲಿ ಅವರು ಹೇಳಿಕೆ ನೀಡಿದ್ದಾರೆಂಬುದು ಗೊತ್ತಿಲ್ಲ ಎಂದು ತಿಳಿಸಿದರು.
ಸರ್ಕಾರ ಬೀಳಿಸುವ ಮನಸ್ಸು ಮಾಡಿದ್ದರೆ ಅದರ ಜವಾಬ್ದಾರಿ ನಾನೇ ತೆಗೆದುಕೊಳ್ಳುತ್ತಿದ್ದೆ. ಆದರೆ, ನಮಗ್ಯಾರಿಗೂ ಆ ಉದ್ದೇಶ ಇಲ್ಲ ಎಂದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅನೇಕ ಕಾಂಗ್ರೆಸ್ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ಬಿಜೆಪಿಗೆ ಬರುವ ಇಚ್ಛೆ ವ್ಯಕ್ತಪಡಿಸಿದ್ದರೂ ಕೂಡ ನಾನೇ ಈ ಸರ್ಕಾರದ ಅಧಿಕಾರ ಅವಧಿ ಮುಗಿಯುವವರೆಗೆ ಅಲ್ಲಿಯೇ ಇರುವಂತೆ ಸಲಹೆ ನೀಡಿದ್ದೇನೆಂದು ಹೇಳಿದರು.
Advertisement