Muda Scam: ಸಿಎಂ ಪತ್ನಿ ಪಾರ್ವತಿ ವಿರುದ್ಧ ಮತ್ತೊಂದು ದೂರು; ಮುಸ್ಲಿಮರಿಗೆ ಮತದಾನ ಹಕ್ಕು ಬೇಡ ಹೇಳಿಕೆಗೆ ಸ್ವಾಮೀಜಿ ವಿಷಾದ; 36 ಗಂಟೆಗಳಲ್ಲಿ ಮಗುವಿನ ರಕ್ಷಣೆ! ಇವು ಇಂದಿನ ಪ್ರಮುಖ ಸುದ್ದಿಗಳು 27-11-24

Muda Scam: ಸಿಎಂ ಪತ್ನಿ ಪಾರ್ವತಿ ವಿರುದ್ಧ ಮತ್ತೊಂದು ದೂರು; ಮುಸ್ಲಿಮರಿಗೆ ಮತದಾನ ಹಕ್ಕು ಬೇಡ ಹೇಳಿಕೆಗೆ ಸ್ವಾಮೀಜಿ ವಿಷಾದ; 36 ಗಂಟೆಗಳಲ್ಲಿ ಮಗುವಿನ ರಕ್ಷಣೆ! ಇವು ಇಂದಿನ ಪ್ರಮುಖ ಸುದ್ದಿಗಳು 27-11-24

1. ಜಿಮ್ಸ್ ಆಸ್ಪತ್ರೆಯಲ್ಲಿ ಅಪಹರಣವಾಗಿದ್ದ ಮಗುವಿನ ರಕ್ಷಣೆ

ಗುಲ್ಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ್) ಆಸ್ಪತ್ರೆಯಲ್ಲಿ ಅಪಹರಣಗೊಂಡಿದ್ದ ನವ ಜಾತ ಶಿಶುವನ್ನು ರಕ್ಷಿಸುವಲ್ಲಿ ಕಲಬುರಗಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಮಗು ಅಪಹರಣ ಮಾಡಿದ್ದ ಮೂವರು ಮಹಿಳೆಯರನ್ನು ಬಂಧಿಸಿದ್ದು, ಮಗುವನ್ನು ಸುರಕ್ಷಿತವಾಗಿ ಮತ್ತೆ ತಾಯಿ ಮಡಿಲಿಗೆ ಸೇರಿಸಿದ್ದಾರೆ. ಬಂಧಿತರಲ್ಲಿ ಇಬ್ಬರನ್ನು ನಸ್ರೀನ್ ಮತ್ತು ಫಾತೀಮಾ ಎಂದು ಗುರುತಿಸಲಾಗಿದೆ. ಸೋಮವಾರ ಮುಂಜಾನೆ ಜಿಮ್ಸ್ ಆಸ್ಪತ್ರೆ ಆವರಣದಲ್ಲಿರುವ ತಾಯಿ ಮತ್ತು ಮಕ್ಕಳ ಚಿಕಿತ್ಸಾ ವಿಭಾಗಕ್ಕೆ ನರ್ಸ್ ಗಳ ಸೋಗಿನಲ್ಲಿ ಬಂದಿದ್ದ ಕಳ್ಳಿಯರು, ನವಜಾತ ಗಂಡು ಶಿಶುವನ್ನು ಅಪಹರಿಸಿ ಪರಾರಿಯಾಗಿದ್ದರು. ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ನೇತೃತ್ವದ ಪೊಲೀಸ್ ತಂಡ 36 ಗಂಟೆಗಳಲ್ಲಿ ಕ್ಷೀಪ್ರ ಕಾರ್ಯಾಚರಣೆ ನಡೆಸುವ ಮೂಲಕ ಕಳ್ಳಿಯರನ್ನು ಬಂಧಿಸಿ ಮಗುವನ್ನು ಪತ್ತೆ ಹಚ್ಚಿದೆ. ಆರೋಪಿಗಳು ಗಂಡು ಮಗುವನ್ನು ಮಕ್ಕಳಿಲ್ಲದ ಕುಟುಂಬಕ್ಕೆ 50 ಸಾವಿರ ರೂ.ಗೆ ಮಾರಾಟ ಮಾಡಲು ವ್ಯವಸ್ಥೆ ಮಾಡಿದ್ದು, ಅದರಲ್ಲಿ ಈಗಾಗಲೇ 25 ಸಾವಿರ ರೂ.ಗಳನ್ನು ಮುಂಗಡವಾಗಿ ಪಡೆದಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

2. ಮುಡಾ ಹಗರಣ: ಪಾರ್ವತಿ ಸಿದ್ದರಾಮಯ್ಯ ವಿರುದ್ಧ ಮತ್ತೊಂದು ದೂರು

ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಉರುಳಾಗಿ ಪರಿಣಮಿಸಿರುವ ಮುಡಾ ಹಗರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಜಮೀನು ಮಾಲೀಕ ದೇವರಾಜು ವಿರುದ್ಧ ಅಣ್ಣ ಮೈಲಾರಯ್ಯ ಮಗಳು ಜಮುನಾ ಮೈಸೂರಿನ ಜೆಎಂಎಫ್ಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಸಿದ್ದರಾಮಯ್ಯ ಪತ್ನಿ ಪಾರ್ವತಿಯವರ ಹೆಸರಿನಲ್ಲಿರುವ ಜಮೀನು ದೇವರಾಜು ಅವರದ್ದು ಅಲ್ಲ, ಬದಲಿಗೆ ನಮ್ಮ ತಂದೆ ಮೈಲಾರಯ್ಯಗೆ ಸೇರಿದ್ದು ಎಂದು ಜಮುನಾ ದಾವೆ ಹೂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಸೇರಿದಂತೆ 12 ಜನರ ಮೇಲೆ ಸಿವಿಲ್ ಕೇಸ್ ದಾಖಲಿಸಿದ್ದಾರೆ. ಜಮುನಾ ದಾವೆ ಹೂಡಿರುವ ಡಿಜಿಟಲ್ ಪ್ರತಿಯನ್ನು ದೂರುದಾರ ಸ್ನೇಹಮಯಿ ‌ಕೃಷ್ಣ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಸಿದ್ದರಾಮಯ್ಯ ಮತ್ತು ಪಾರ್ವತಮ್ಮ ಸಿದ್ದರಾಮಯ್ಯ ವಿರುದ್ಧ ತಮ್ಮ ಆರೋಪಕ್ಕೆ ಇದು ಕೈಗನ್ನಡಿ ಎಂದು ಹೇಳಿದ್ದಾರೆ. ಸದ್ಯ ಮುಡಾ ಹಗರಣದ ತನಿಖೆಯನ್ನು ಲೋಕಾಯುಕ್ತ ಮತ್ತು ಇಡಿ ನಡೆಸುತ್ತಿದೆ.

3. ಬೆಂಗಳೂರಿನ 20 ಕಡೆಗಳಲ್ಲಿ ಲೋಕಾಯುಕ್ತ ದಾಳಿ: ಇಬ್ಬರು BBMP ಅಧಿಕಾರಿಗಳ ವಿಚಾರಣೆ

ಬಿಬಿಎಂಪಿಯ ಇಬ್ಬರು ಅಧಿಕಾರಿಗಳ ನಿವಾಸ, ಕಚೇರಿ ಸೇರಿದಂತೆ ಬೆಂಗಳೂರಿನ 20 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಿಬಿಎಂಪಿ ಪಶ್ಚಿಮ ವಲಯದ ಕಲ್ಯಾಣ ಕಾರ್ಯಕ್ರಮಗಳ ಫಲಾನುಭವಿಗಳ ಹಣವನ್ನು ಸಹಕಾರ ಸಂಘಗಳ ಖಾತೆಗಳಿಗೆ ವರ್ಗಾಯಿಸುವ ಮೂಲಕ ವಂಚನೆ ಮಾಡಲಾಗಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಸುನೀಲ್ ವೈ ನಾಯಕ್ ನೇತೃತ್ವದ ತಂಡ ಬೆಂಗಳೂರಿನ ದೇವಯ್ಯ ಪಾರ್ಕ್ ಬಳಿ ಇರುವ ಬಿಬಿಎಂಪಿ ಕಲ್ಯಾಣಾಧಿಕಾರಿ ಲಲಿತಾ, ವಯ್ಯಾಲಿಕಾವಲ್ನಲ್ಲಿರುವ ಉಪ ಹಣಕಾಸು ನಿಯಂತ್ರಕ ಸತ್ಯಮೂರ್ತಿ ನಿವಾಸದ ಮೇಲೆ ದಾಳಿ ಮಾಡಿ, ದಾಖಲೆ ಪರಿಶೀಲನೆ ನಡೆಸುತ್ತಿದೆ. ಮತ್ತೊಂದೆಡೆ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ನಗರದ ಅನೇಕ ಬಿಲ್ಡರ್ ಗಳು, ಉದ್ಯಮಿಗಳ ಮನೆ ಹಾಗೂ ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವೈಯಾಲಿಕಾವಲ್, ಕತ್ರಿಗುಪ್ಪೆ ಮತ್ತಿತರ ಕಡೆಗಳಲ್ಲಿರುವ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆ ಪತ್ರಗಳಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

4. 'ಮುಸ್ಲಿಮರಿಗೆ ಮತದಾನದ ಹಕ್ಕು ನೀಡಬಾರದು' ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಚಂದ್ರಶೇಖರ ಸ್ವಾಮೀಜಿ

'ಮುಸ್ಲಿಮರಿಗೆ ಮತದಾನದ ಹಕ್ಕು ನೀಡಬಾರದು ಮತ್ತು ದೇಶದಲ್ಲಿ ವಕ್ಫ್ ಮಂಡಳಿಯೇ ಇಲ್ಲದಂತೆ ಮಾಡಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ಅವರು ಇದೀಗ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಮುಸಲ್ಮಾನರೂ ಸಹ ಈ ದೇಶದ ಪ್ರಜೆಗಳೇ. ಎಲ್ಲರಂತೆ ಅವರಿಗೂ ಮತದಾನದ ಹಕ್ಕು ಇರುತ್ತದೆ. ನಿನ್ನೆಯ ದಿನ ತಾನು ಬಾಯಿ ತಪ್ಪಿ ನೀಡಿದ ಹೇಳಿಕೆಯಿಂದ ಮುಸಲ್ಮಾನ ಸಹೋದರರಿಗೆ ಬೇಸರವಾಗಿದ್ದರೆ, ಅದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದ್ದಾರೆ. ಚಂದ್ರಶೇಖರ ಸ್ವಾಮೀಜಿಗಳ ಹೇಳಿಕೆಗೆ ರಾಜಕೀಯವಾಗಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

5. ಬೆಂಗಳೂರು: ಎಂಜಿ ರಸ್ತೆಯ ಎಚ್​ಎಸ್​ಬಿಸಿ ಬ್ಯಾಂಕ್ ಗೆ ಬಾಂಬ್ ಬೆದರಿಕೆ

ಬೆಂಗಳೂರಿನ ಎಂಜಿ ರಸ್ತೆಯಲ್ಲಿರುವ HSBC ಬ್ಯಾಂಕ್ ಶಾಖೆಗೆ ಬಾಂಬ್ ಬೆದರಿಕೆ ಹಾಕಲಾಗಿತ್ತು. ಬ್ಯಾಂಕ್ನಲ್ಲಿ ಬಾಂಬ್ ಇಡಲಾಗಿದೆ ಎಂದು ಬರೆದಿರುವ ಇಮೇಲ್ವೊಂದು ಬ್ಯಾಂಕ್ಗೆ ಬಂದಿದ್ದರಿಂದ ಕೂಡಲೇ ಕಚೇರಿಯ ಎಲ್ಲಾ ಸಿಬ್ಬಂದಿ ಹಾಗೂ ಗ್ರಾಹಕರನ್ನು ಹೊರಕಳುಹಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಹಲಸೂರು ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ನಂತರ ಇದು ಹುಸಿ ಬಾಂಬ್ ಬೆದರಿಕೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com