ಬೆಂಗಳೂರು: ಕೊಲೆಯಾದ ವ್ಯಕ್ತಿ ‘ಸಮಾಜಕ್ಕೆ ಕಂಟಕವಾಗಿದ್ದ’ ಎಂದು ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್ ತೂಗುದೀಪ ಪರ ವಕೀಲ ಸಿ ವಿ ನಾಗೇಶ್ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ಮಂಗಳವಾರ ವಾದ ಮಂಡಿಸಿದ್ದಾರೆ.
ನಿಯಮಿತ ಜಾಮೀನು ಕೋರಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ದರ್ಶನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ ವಿ ನಾಗೇಶ್ ಅವರು, ರೇಣುಕಾಸ್ವಾಮಿ ಮಹಿಳೆಯರ ಅಶ್ಲೀಲ ಚಿತ್ರಗಳನ್ನು ಹಂಚಿಕೊಳ್ಳುವ ಇತಿಹಾಸ ಹೊಂದಿದ್ದರು ಮತ್ತು ಸಾಮಾಜಿಕ ನಿಯಮಗಳ ಬಗ್ಗೆ ಅಥವಾ ಮಹಿಳೆಯರ ಬಗ್ಗೆ ಗೌರವ ಇರಲಿಲ್ಲ. ಆತನ ವರ್ತನೆ ಖಂಡನೀಯ ಎಂದು ನಾಗೇಶ್ ಹೇಳಿದ್ದಾರೆ.
ಹೆಣ್ಣಿನ ಬಗ್ಗೆ ಗೌರವ ಇಲ್ಲದ, ಕಾನೂನು ಬಾಹಿರವಾಗಿ ಅಶ್ಲೀಲ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದ ವ್ಯಕ್ತಿಯನ್ನು ಈಗ ಹೀರೋ ಎಂದು ಬಿಂಬಿಸಲಾಗಿದೆ. ಆದರೆ ರೀಲ್ ಲೈಫ್ ನಲ್ಲಿ ಹೀರೋ ಆಗಿರುವ ನನ್ನ ಕಕ್ಷಿದಾರನನ್ನು ವಿಲನ್ ಎಂದು ನಿಂದಿಸಲಾಗುತ್ತಿದೆ ಎಂದು ನಾಗೇಶ್ ವಾದಿಸಿದರು.
ಸತತ ಮೂರು ಗಂಟೆಗಳ ವಾದ ಮಂಡಿಸಿದ ಸಿವಿ ನಾಗೇಶ್ ಅವರು, ಸಾಕಷ್ಟು ವಿಚಾರಗಳನ್ನು ತೆರೆದಿಟ್ಟಿದ್ದಾರೆ. ಕೆಲ ಸುಳ್ಳು ಸಾಕ್ಷಿಗಳನ್ನು ಸೃಷ್ಟಿ ಮಾಡಲಾಗಿದೆ ಎಂದೂ ಸಹ ಹೇಳಿದ್ದಾರೆ.
ಜೂನ್ 9 ರಂದು ಪತ್ತೆಯಾದ ಶವದ ಮರಣೋತ್ತರ ಪರೀಕ್ಷೆ ನಡೆಸುವಲ್ಲಿ ವಿಳಂಬವಾಗಿದೆ. ಶವ ಪರೀಕ್ಷೆ ವರದಿ ಒಂದು ತಿಂಗಳು ವಿಳಂಬವಾಗಿ ಬಂದಿದೆ. ದರ್ಶನ್ ವಿರುದ್ಧ ಅಪಹರಣ ಮತ್ತು ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದರು.
ಇದಲ್ಲದೆ, ದರ್ಶನ್ ಅವರ ಸೂಚನೆ ಮೇರೆಗೆ ರೇಣುಕಾಸ್ವಾಮಿಯನ್ನು ಅಪಹರಿಸಲಾಗಿದೆ ಎಂಬ ಪೊಲೀಸರ ವಾದವನ್ನು ತಳ್ಳಿಹಾಕಿದ ನಾಗೇಶ್, ರೇಣುಕಾಸ್ವಾಮಿ ಅಪಹರಣ ಆಗಿದ್ದು ಚಿತ್ರದುರ್ಗದಲ್ಲಿ. ಅಂದು ದರ್ಶನ್ ಬೆಂಗಳೂರಿನಲ್ಲೇ ಇದ್ದರು. ಅಪಹರಣಕ್ಕೆ ಸಂಬಂಧಪಟ್ಟಂತೆ ದರ್ಶನ್ ಭಾಗಿ ಯಾಗಿರುವ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ರೇಣುಕಾಸ್ವಾಮಿ ಸ್ವಯಂಪ್ರೇರಿತವಾಗಿ ಬೆಂಗಳೂರಿಗೆ ಬಂದಿದ್ದಾನೆ. ಆವಿಷಯವನ್ನು ಆತನೇ ತನ್ನ ತಂದೆ, ತಾಯಿಗೆ ಫೋನ್ ಮಾಡಿ ಹೇಳಿದ್ದಾನೆ. ಸ್ನೇಹಿತರ ಜೊತೆ ಹೊರಗೆ ಬಂದಿದ್ದೇನೆ ಎಂದು ತಿಳಿಸಿದ್ದಾನೆ ಎಂದರು.
ಇನ್ನು ರೇಣುಕಾಸ್ವಾಮಿ ಪವಿತ್ರಾಗೌಡ ಅವರಿಗೆ ಕಳುಹಿಸಿದ್ದ ಸಂದೇಶಗಳನ್ನು ಕುರಿತು ಪ್ರಸ್ತಾಪಿಸಿದ ನಾಗೇಶ್ ಅವರು, ರೇಣುಕಾಸ್ವಾಮಿ ಫೆಬ್ರವರಿಯಿಂದ ಪವಿತ್ರಾಗೆ ಅಶ್ಲೀಲವಾಗಿ ಸಂದೇಶಗಳನ್ನು ಕಳುಹಿಸಿದ್ದಾನೆ. ಘನ ನ್ಯಾಯಾಲಯ ಆತ ಕಳುಹಿಸಿರುವ ಸಂದೇಶಗಳನ್ನು ಗಮನಿಸಬೇಕು. ಕೇವಲ ಪವಿತ್ರಾ ಅವರಿಗಷ್ಟೇ ಅಲ್ಲದೆ ಇತರ ಮಹಿಳೆಯರಿಗೂ ಕೆಟ್ಟದಾಗಿ ಸಂದೇಶಗಳನ್ನು ಕಳುಹಿಸಿದ್ದಾನೆ. ತಮ್ಮ ಗಮನಕ್ಕೆ ತಂದಿರುವುದು ಕೇವಲ ಸ್ಯಾಂಪಲ್ ಮಾತ್ರ ಎಂದರು.
ಸುದೀರ್ಘ ವಾದ, ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರು ವಿಚಾರಣೆಯನ್ನು ನವೆಂಬರ್ 28ಕ್ಕೆ ಮುಂದೂಡಿದ್ದಾರೆ.
Advertisement