ಕಲಬುರಗಿ: ಕಲಬುರಗಿ ಸೆಂಟ್ರಲ್ ಜೈಲು ಮುಖ್ಯ ಅಧೀಕ್ಷಕಿ ಅನಿತಾ ಅವರ ಕಾರು ಸ್ಫೊಟಿಸುವುದಾಗಿ ಅನಾಮಧೇಯ ವ್ಯಕ್ತಿಯಿಂದ ಆಡಿಯೋ ಸಂದೇಶ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಕಾರು ಸ್ಫೊಟಿಸುವ ಮೂಲಕ ಅನಿತಾ ಹತ್ಯೆಗೆ ಸಂಚು ಹೂಡಲಾಗಿದೆಯೇ ಎಂಬ ಅನುಮಾನ ಇದೀಗ ಬಲವಾಗಿದೆ.
ಅಪರಿಚಿತ ವ್ಯಕ್ತಿಯೊಬ್ಬ ತನ್ನ ಕಾರನ್ನು ಸ್ಫೋಟಿಸುವುದಾಗಿ ಪೊಲೀಸ್ ಇನ್ಸ್‌ಪೆಕ್ಟರ್ ಮೂಲಕ ಆಡಿಯೋ ಸಂದೇಶ ರವಾನಿಸಿದ್ದಾನೆ ಎಂದು ಆರ್.ಅನಿತಾ ಗುರುವಾರ ತಿಳಿಸಿದ್ದಾರೆ. ಆದರೆ, ಈ ಬಗ್ಗೆ ಯಾವುದೇ ದೂರು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಯಾರೋ ನನ್ನ ಕಾರನ್ನು ಸ್ಫೋಟಿಸುವುದಾಗಿ ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಆಡಿಯೋ ಸಂದೇಶ ಕಳುಹಿಸಿದ್ದಾರೆ. ನನಗೆ ವೈಯಕ್ತಿಕವಾಗಿ ಇದುವರೆಗೆ ಅಂತಹ ಯಾವುದೇ ಸಂದೇಶ ಬಂದಿಲ್ಲ, ಆದ್ದರಿಂದ ನಾನು ಯಾವುದೇ ಪೊಲೀಸ್ ದೂರು ನೀಡುವುದಿಲ್ಲ, ಬೆದರಿಕೆಯ ನಂತರ, ತಾನು ಈಗ ಇನ್ನೂ ಹೆಚ್ಚು ಜಾಗರೂಕರಾಗಿರುತ್ತೇನೆ ಎಂದು ಅನಿತಾ ಹೇಳಿದರು.
ಕಳೆದ ತಿಂಗಳು, ಅನಿತಾ ಅವರು ಜೈಲಿನ ಮುಖ್ಯ ಅಧೀಕ್ಷಕಿಯಾಗಿ ಅಧಿಕಾರ ವಹಿಸಿಕೊಂಡ ನಂತರ, ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಮೂವರು ಕೈದಿಗಳು ವಿಶೇಷ ಸೌಲಭ್ಯ ಪಡೆಯುತ್ತಿರುವ ಛಾಯಾಚಿತ್ರಗಳು ಮತ್ತು ವೀಡಿಯೊ ತುಣುಕುಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ದಾಳಿ ನಡೆಸಲಾಯಿತು. ಕೈದಿಗಳಿಂದ ಸೆಲ್ ಫೋನ್, ಗುಟ್ಕಾ ಮತ್ತು ಸಿಗರೇಟ್ ಪ್ಯಾಕೆಟ್ ಗಳನ್ನು ಮತ್ತು ಬೀಡಿಗಳನ್ನು ವಶಪಡಿಸಿಕೊಳ್ಳಲಾಗಿತ್ತು.
Advertisement