ಮೈಸೂರು: ತನ್ನ ಗರ್ಭಿಣಿ ಪತ್ನಿ, ಇಬ್ಬರು ಮಕ್ಕಳು ಮತ್ತು ತಾಯಿಯನ್ನು ಬರ್ಬರವಾಗಿ ಹತ್ಯೆಗೈದ ಆರೋಪಿಗೆ ಮೈಸೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಮರಣದಂಡನೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಆರೋಪಿ, ಎಚ್‌ಡಿ ಕೋಟೆಯ ಚಾಮೇಗೌಡನಹುಂಡಿ ಗ್ರಾಮದ ಮಣಿಕಂಠ ಸ್ವಾಮಿ ಎಂಬಾತ 2021 ರ ಏಪ್ರಿಲ್ 28 ರಂದು ತನ್ನ ಹೆಂಡತಿಯ ಶೀಲ ಶಂಕಿಸಿ ಅಪರಾಧ ಎಸಗಿದ್ದ. ಭಾಗಶಃ ಅಂಗವಿಕಲನಾಗಿದ್ದ ಮಣಿಕಂಠ ಟೈಲರ್ ಕೆಲಸ ಮಾಡುತ್ತಿದ್ದ. ಆಗಾಗ್ಗೆ ತನ್ನ ಹೆಂಡತಿಗೆ ಅನೈತಿಕ ಸಂಬಂಧವಿದೆ ಎಂದು ಆರೋಪಿಸಿ ಈ ಸಂಬಂಧ ಜಗಳ ಮಾಡುತ್ತಿದ್ದ. ಮಕ್ಕಳ ಹುಟ್ಟಿನ ಬಗ್ಗೆ ಅನುಮಾನ ವ್ಯಕ್ತ ಪಡಿಸುತ್ತಿದ್ದ. ಘಟನೆ ನಡೆದ ದಿನ ಕೂಡ ಪತಿ-ಪತ್ನಿಯರ ನಡುವೆ ತೀವ್ರ ಕಲಹವಾಗಿತ್ತು. ಕುಪಿತಗೊಂಡ ಆತ ಊರುಗೋಲಿನಿಂದ ಒಂಬತ್ತು ತಿಂಗಳ ಗರ್ಭಿಣಿ ಪತ್ನಿ ಗಂಗಮ್ಮ, ಮಗ ಸಾಮ್ರಾಟ್ (4) ಹಾಗೂ ತಾಯಿ ಕೆಂಪಾಜಮ್ಮ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ.
ತನ್ನ 18 ತಿಂಗಳ ಮಗ ರೋಹಿತ್‌ನನ್ನು ಕತ್ತು ಹಿಸುಕಿ ಕೊಂದಿದ್ದ. ಈ ಕೊಲೆಗಳು ಗ್ರಾಮವನ್ನು ಬೆಚ್ಚಿ ಬೀಳಿಸಿತ್ತು, ಕೊಲೆ ಮಾಡಿದ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ. ಮರುದಿನ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು.. ಸರಗೂರು ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಆನಂದ್ ಎನ್ ತನಿಖೆಯ ನೇತೃತ್ವ ವಹಿಸಿದ್ದು, ಮಣಿಕಂಠನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಐಪಿಸಿ ಸೆಕ್ಷನ್ 498(ಎ), 302 ಮತ್ತು 316 ಅಡಿಯಲ್ಲಿ ಆರೋಪಗಳನ್ನು ದಾಖಲಿಸಲಾಗಿದೆ. ಸರಕಾರಿ ಅಭಿಯೋಜಕ ಬಿ.ಇ.ಯೋಗೇಶ್ವರ ಅವರು ಸಲ್ಲಿಸಿದ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ನ್ಯಾಯಾಧೀಶ ಗುರುರಾಜ ಸೋಮಕ್ಕಲವರ್ ತೀರ್ಪು ನೀಡಿದ್ದಾರೆ. ಮಣಿಕಂಠನಿಗೆ ಐಪಿಸಿ ಸೆಕ್ಷನ್ 302 ರ ಅಡಿಯಲ್ಲಿ ಮರಣದಂಡನೆ ಮತ್ತು 5,000 ರು. ದಂಡ ವಿಧಿಸಲಾಯಿತು. ಅವರು ಸೆಕ್ಷನ್ 316 ರ ಅಡಿಯಲ್ಲಿ ಹುಟ್ಟಲಿರುವ ಮಗುವಿನ ಸಾವಿಗೆ ಕಾರಣವಾದಕ್ಕಾಗಿ 10 ವರ್ಷಗಳ ಜೈಲು ಶಿಕ್ಷೆ ಮತ್ತು ಸೆಕ್ಷನ್ 498 (A) ಅಡಿಯಲ್ಲಿ ಕ್ರೌರ್ಯಕ್ಕಾಗಿ ಎರಡು ವರ್ಷ ಶಿಕ್ಷೆ ವಿಧಿಸಲಾಗಿದೆ.
Advertisement