
ಬೆಳಗಾವಿ: ಬೆಳಗಾವಿ ತಹಶಿಲ್ದಾರ್ ಕಚೇರಿಯಲ್ಲಿ ಎಸ್‌ಡಿಎ ರುದ್ರೇಶ್ ಆತ್ಮಹತ್ಯೆ ಪ್ರಕರಣ ದೊಡ್ಡ ತಿರುವು ಪಡೆದುಕೊಂಡಿದೆ. ರುದ್ರೇಶ್ ಆತ್ಮಹತ್ಯೆ ಮಾಡಿಕೊಂಡಿಲ್ಲ, ಇದೊಂದು ಕೊಲೆ ಎಂದು ಅನಾಮಧೇಯ ಪತ್ರವೊಂದು ಬಂದಿದ್ದು, ಇದು ತೀವ್ರ ಗೊಂದಲವನ್ನು ಸೃಷ್ಟಿಸಿದೆ.
ಪ್ರಕರಣದ ಎ1 ತಹಶಿಲ್ದಾರ ಬಸವರಾಜ ನಾಗರಾಳ, ಎ2 ಅಶೋಕ ಕಬ್ಬಲಿಗೇರ್, ಎ3 ಹೆಬ್ಬಾಳ್ಕರ್ ಪಿಎ ಸೋಮುಗೆ ಜಾಮೀನು ಸಿಕ್ಕಿದ್ದು, ಇದರ ಬೆನ್ನಲ್ಲೇ ಅಂಚೆ ಮೂಲಕ ಅನಾಮಧೇಯ ವ್ಯಕ್ತಿಯ ಪತ್ರ ಬಂದಿದೆ.
ಪತ್ರದಲ್ಲಿ, ರುದ್ರೇಶ್ ಆತ್ಮಹತ್ಯೆ ಮಾಡಿಕೊಂಡಿಲ್ಲ, ಇದೊಂದು ಕೊಲೆಯಾಗಿದೆ ಎಂದು ತಿಳಿಸಲಾಗಿದೆ. ತಹಶಿಲ್ದಾರ್ ಆಪ್ತ ಡ್ರೈವರ್ ಯಲ್ಲಪ್ಪ ಬಡಸದ ಕೊಲೆಯ ಸೂತ್ರದಾರ. ತಹಶಿಲ್ದಾರರ ಜೀಪ್ ಚೆಕ್ ಮಾಡಿದರೆ ಎಲ್ಲಾ ಸಿಗುತ್ತವೆ ಎಂದು ಬರೆದಿರುವುದಾಗಿ ತಿಳಿದುಬಂದಿದೆ.
ಇದು ಆತ್ಮಹತ್ಯೆ ಎಂದು ಹೇಳುತ್ತಿದ್ದಾರೆ. ಆದರೆ, ಆತ್ಮಹತ್ಯೆ ಅಲ್ಲ. ಡ್ರೈವರ್ ಯಲ್ಲಪ್ಪನ ವಿಚಾರಣೆ ಮಾಡಿದರೆ ಕೊಲೆ ರಹಸ್ಯ ಹೊರಗೆ ಬರುತ್ತದೆ. ಯಲ್ಲಪ್ಪನ ಹೆಂಡತಿ ಅನೈತಿಕ ಸಂಬಂಧ ಇಟ್ಟುಕೊಂಡು ಅವನ ಎಲ್ಲ ದುಡ್ಡು ಹೊಡೆದಿರುತ್ತಾಳೆ. ಸತ್ತವನಿಗೆ ನ್ಯಾಯ ಸಿಗಬೇಕು. ಕೇಸ್ ಮುಚ್ಚಿ ಹಾಕಬಾರದು ಎಂದು ತಿಳಿಸಿದ್ದಾರೆ.
ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ ಎಸ್‌ಡಿಎ (ದ್ವಿತೀಯ ದರ್ಜೆ ಸಹಾಯಕ) ರುದ್ರೇಶ್ (ರುದ್ರಣ್ಣ) ಯಡಣ್ಣನವರ್ ಎಂಬವರು ನವೆಂಬರ್ 5ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಾವಿಗೂ ಮುನ್ನ ತನ್ನ ಸಾವಿಗೆ ಇವರೇ ಕಾರಣ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪಿಎ ಸೋಮು, ತಹಶಿಲ್ದಾರ್ ಬಸವರಾಜ ನಾಗರಾಳ, ಸಹೊದ್ಯೋಗಿ ಅಶೋಕ ಕಬ್ಬಲಿಗೇರ್ ಹೆಸರು ಉಲ್ಲೇಖಿಸಿ ವಾಟ್ಸ್ಆ್ಯಪ್ ಗ್ರೂಪೊಂದರಲ್ಲಿ ಸಂದೇಶ ಕಳುಹಿಸಿದ್ದರು.
ವರ್ಗಾವಣೆ ಆದೇಶ ನೋಡಿದ ನಂತರ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಮೆಸೇಜ್ ಮಾಡಿದ್ದ ಅವರು ಮರುದಿನ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪಿಎ ಹೆಸರು ಕೇಳಿಬಂದ ಕಾರಣ ಪ್ರಕರಣ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಈ ನಡುವೆ ಮೃತನ ತಾಯಿ ಮಲ್ಲವ್ವ ಯಡಣ್ಣನವರ್ ಅವರು, ನನ್ನ ಮಗ ಆತ್ಮಹತ್ಯೆ ಮಾಡಿಕೊಳ್ಳುವಂತಹ ಹೇಡಿಲ್ಲ. ಇದರಲ್ಲಿ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿದ್ದಾರೆ. ಇದೇ ವೇಳೆ ಪ್ರಕರಣದ ಬಗ್ಗೆ ಮಾಹಿತಿ ಹಂಚಿಕೊಳ್ಳದ ಪೊಲೀಸರ ವಿರುದ್ಧವೂ ತೀವ್ರವಾಗಿ ಕಿಡಿಕಾರಿದ್ದಾರೆ.
ಬೆಳಗಾವಿ ಪೊಲೀಸ್ ಆಯುಕ್ತ ಇಡಾ ಮಾರ್ಟಿನ್ ಮಾರ್ಬಾನಿಯಾಂಗ್ ಅವರು ಮಾತನಾಡಿ, ಅನಾಮಧೇಯ ಪತ್ರದ ಬಗ್ಗೆ ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಇಲಾಖೆಯು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸುತ್ತಿದೆ. ತನಿಖೆ ಸಂಬಂಧ ಮೃತನ ಕುಟುಂಬವರೊಂದಿಗೆ ಮಾಹಿತಿ ಹಂಚಿಕೊಳ್ಳುವಂತೆ ಪೊಲೀಸರಿಗೆ ಸೂಚಿಸುವುದಾಗಿ ತಿಳಿಸಿದ್ದಾರೆ.
Advertisement