ಮೈಸೂರು: ಮುಡಾ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ್ದ ತೀರ್ಪಿನ ವಿಚಾರವಾಗಿ ಹೇಳಿಕೆ ನೀಡಿ ಸಂಕಷ್ಟಕ್ಕೆ ಸಿಲುಕಿರುವ ಸಚಿವ ಜಮೀರ್ ಅಹ್ಮದ್ ವಿಚಾರ ಹಸಿರಾಗಿರುವಂತೆಯೇ ಇದೀಗ ಇಂತಹುದೇ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಕೂಡ ಸುದ್ದಿಗೆ ಗ್ರಾಸವಾಗಿದ್ದಾರೆ.
ಹೌದು.. ಕಾಂಗ್ರೆಸ್ ಎಂಎಲ್ಸಿ ಯತೀಂದ್ರ ದೇಶದ ನ್ಯಾಯಾಲಯಗಳ ಕುರಿತು ಹೇಳಿಕೆ ನೀಡಿ ಬಳಿಕ ಅದನ್ನು ಸಮರ್ಥಿಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ನ್ಯಾಯಾಲಯಗಳಲ್ಲಿ ದೇಶಕ್ಕೆ ಮಾರಕವಾಗುವ ತೀರ್ಪುಗಳು ಬರುತ್ತಿವೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಅಲ್ಲದೆ ಅದಾನಿ ಮತ್ತು ಬಾಬ್ರಿ ಮಸೀದಿ ಪ್ರಕರಣಗಳ ತೀರ್ಪುಗಳನ್ನು ಉಲ್ಲೇಖಿಸಿ ಅವುಗಳನ್ನೂ ಟೀಕಿಸಿದ್ದಾರೆ. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ, ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ಯಾವುದೇ ನಿರ್ದಿಷ್ಟ ಪ್ರಕರಣದ ತೀರ್ಪಿನ ಬಗ್ಗೆ ನಾನು ಮಾತನಾಡಿಲ್ಲ. ಜನರ ಭಾವನೆ ಏನಿದೆ ಅನ್ನುವುದರ ಬಗ್ಗೆ ನಾನು ಮಾತಾಡಿದ್ದೇನೆ ಎಂದು ಅವರು ಹೇಳಿದ್ದಾರೆ.
ಯತೀಂದ್ರ ಹೇಳಿದ್ದೇನು?
ಇತ್ತೀಚೆಗೆ ಮಾತನಾಡಿದ್ದ ಅವರು, 'ಇತ್ತೀಚೆಗೆ ದೇಶಕ್ಕೆ ಮಾರಕ ಆಗುವ ರೀತಿ ತೀರ್ಪು ಬರುತ್ತಿದೆ. ದೇಶಕ್ಕೆ ಒಳ್ಳೆಯ ರೀತಿ ತೀರ್ಪು ಬಂದಿಲ್ಲ. ಉದ್ಯಮಿ ಅದಾನಿ ವಿಚಾರ, ಬಾಬ್ರಿ ಮಸೀದಿ ಧ್ವಂಸದ ವಿಚಾರದಲ್ಲಿ ದೇಶದ ಹಿತಾಸಕ್ತಿ ಪರ ತೀರ್ಪು ಬಂದಿಲ್ಲ ಎಂದು ಹೇಳಿದ್ದರು.
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ವಿರುದ್ಧದ ಆರೋಪದಲ್ಲಿ ಹುರುಳಿಲ್ಲ
ಮುಡಾದಲ್ಲಿ ಕಾನೂನುಬಾಹಿರವಾಗಿ ಬದಲಿ ಭೂಮಿ ಪಡೆದ ಆರೋಪ ಸಂಬಂಧ ಪ್ರತಿಕ್ರಿಯಿಸಿದ ಯತೀಂದ್ರ, 'ನನ್ನ ತಂದೆ (ಸಿದ್ದರಾಮಯ್ಯ) ವಿರುದ್ಧ ಮಾಡಿರುವ ಆರೋಪದಲ್ಲಿ ಯಾವುದೇ ಸತ್ಯ ಇಲ್ಲ. ನನ್ನ ತಂದೆ ಸಿದ್ದರಾಮಯ್ಯ, ತಾಯಿ ಪಾರ್ವತಿ, ಮಾವ ಮಲ್ಲಿಕಾರ್ಜುನ ಮೂವರ ವಿರುದ್ಧವೂ ಮಾಡಿರುವ ಆರೋಪದಲ್ಲಿ ಯಾವುದೇ ಸತ್ಯ ಇಲ್ಲ. ಇದು ತನಿಖಾ ಸಂಸ್ಥೆಗೂ ಗೊತ್ತಿದೆ.
ಜಾರಿ ನಿರ್ದೇಶನಾಲಯ ಅಧಿಕಾರಿಗಳಿಂದ ಮುಡಾ ಕ್ಲೀನ್ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಮುಡಾವನ್ನು ಕ್ಲೀನ್ ಮಾಡಲು ಆಯೋಗ ರಚನೆ ಮಾಡಿದ್ದೇವೆ. ಮುಡಾವನ್ನು ಖಂಡಿತಾ ನಾವೇ ಕ್ಲೀನ್ ಮಾಡುತ್ತೇವೆ ಎಂದರು.
ಕೇಂದ್ರ ತನಿಖಾ ಸಂಸ್ಥೆಗಳ ಮೇಲೆ ನಮಗೆ ನಂಬಿಕೆಯಿಲ್ಲ
ಇದೇ ವೇಳೆ, 'ಇಡಿಗೆ ಮುಡಾ ಹಗರಣ ಕುರಿತು ವಿಚಾರಣೆ ನಡೆಸುವ ಹಕ್ಕಿಲ್ಲ. ಸುಳ್ಳು ಆರೋಪ ಮಾಡಿ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸಲಾಗುತ್ತಿದೆ. ಸಿದ್ದರಾಮಯ್ಯ ಅವರ ವರ್ಚಸ್ಸಿಗೆ ಕಪ್ಪುಮಸಿ ಬಳಿದು, ಅವರ ರಾಜೀನಾಮೆ ಪಡೆದು, ಬಿಜೆಪಿ ಅಧಿಕಾರಕ್ಕೆ ಬರಲು ಯತ್ನಿಸುತ್ತಿದೆ. ಅದಕ್ಕೆ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ನಮಗೆ ಕೇಂದ್ರ ತನಿಖಾ ಸಂಸ್ಥೆಗಳ ಮೇಲೆ ನಂಬಿಕೆ ಇಲ್ಲ. RTI ಕಾರ್ಯಕರ್ತರು ಮಾಡಿರುವ ಆರೋಪದಲ್ಲಿ ಸತ್ಯಾಂಶ ಇಲ್ಲ. ಪ್ರತಿಪಕ್ಷಗಳು ನಮ್ಮನ್ನು ಡೆಮಾಲಿಷ್ ಮಾಡಲು ಯತ್ನಿಸುತ್ತಿದೆ. ಅಧಿಕಾರಕ್ಕಾಗಿ ಏನು ಬೇಕಾದೂ ಮಾಡಲು ಪ್ರತಿಪಕ್ಷಗಳು ಸಿದ್ಧವಿದೆ ಎಂದರು.
ಸ್ವಾಭಿಮಾನಿ ಸಮಾವೇಶಕ್ಕೆ ಹೈಕಮಾಂಡ್ ಒಪ್ಪಿಗೆ ಇದೆ
ಇದೇ ವೇಳೆ ಸ್ವಾಭಿಮಾನಿ ಸಮಾವೇಶದ ಕುರಿತು ಮಾತನಾಡಿದ ಯತೀಂದ್ರ, 'ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡುತ್ತಿರುವುದರಿಂದ ಸಮಾವೇಶ ಮಾಡಲಾಗುತ್ತಿದೆ. ಈ ಸಮಾವೇಶದ ಮೂಲಕ ವಿಪಕ್ಷಗಳ ಆರೋಪಕ್ಕೆ ಉತ್ತರ ನೀಡಲಿದ್ದೇವೆ. ಹಾಸನದಲ್ಲಿ ಡಿ.5 ರಂದು ನಡೆಯಲಿರುವ, ಸ್ವಾಭಿಮಾನಿ ಸಮಾವೇಶಕ್ಕೆ ಹೈಕಮಾಂಡ್ ಒಪ್ಪಿಗೆ ಇದೆ. ಸ್ವಾಭಿಮಾನಿ ಸಮಾವೇಶದ ಬಗ್ಗೆ ಎಐಸಿಸಿಗೆ ಪತ್ರ ಬರೆದಿರುವ ವಿಚಾರ ನನಗೆ ಗೊತ್ತಿಲ್ಲ. ಆ ಪತ್ರ ಫೇಕ್ ಇರುಬಹುದು. ಈಗಾಗಲೇ ಮುಡಾ ವಿಚಾರದಲ್ಲಿ, ಮೈಸೂರಿನಲ್ಲಿ ಸಮಾವೇಶ ಮಾಡಲಾಗಿದೆ. ಜತೆಗೆ ಹಾಸನದಲ್ಲೂ ಭಾರೀ ಸಮಾವೇಶ ಮಾಡುತ್ತಿದ್ದೇವೆ, ಅಷ್ಟೇ. ಹಾಸನ ಸಮಾವೇಶಕ್ಕೆ 2 ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆ ಇದೆ" ಎಂದು ತಿಳಿಸಿದರು.
ಅಂತೆಯೇ ಮೂರು ಉಪಚುನಾವಣಾ ಫಲಿತಾಂಶ ನಮಗೆ, ನೈತಿಕ ಬೆಂಬಲ, ವಿಶ್ವಾಸ ಹೆಚ್ಚಿಸಿದೆ. ಜನರ ಬೆಂಬಲ ನಮ್ಮ ಪರವಾಗಿದೆ. ಹೀಗಾಗಿ ನಾವು ರಾಜೀನಾಮೆ ಕೊಡುವುದಿಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದರು.
Advertisement