ಬೆಂಗಳೂರು: ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸಿ, ಮುಖ್ಯಮಂತ್ರಿಯಾಗಲು ಸಾವಿರ ಕೋಟಿ ಹಣ ಇಟ್ಟುಕೊಂಡು ಕೆಲವರು ಕಾಯುತ್ತಿದ್ದಾರೆಂದು ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ಧ ಹೈಗ್ರೌಂಡ್ ಪೊಲೀಸರಿಗೆ ಕಾಂಗ್ರೆಸ್ ಸೋಮವಾರ ದೂರು ದಾಖಲಿಸಿದೆ.
1,000 ಕೋಟಿ ರೂ. ಹಣದ ಮೂಲ ಯಾವುದು? ಯತ್ನಾಳ್ ವಿರುದ್ಧ ಎಫ್‌ಐಆರ್ ದಾಖಲಿಸಬೇಕು. ಪಿಎಂಎಲ್‌ಎ (PMLA) ಅಡಿ ಕೇಸ್ ಕೂಡ ಬರುತ್ತದೆ. ವಿಚಾರಣೆಗೊಳಪಡಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸೆ.29ರಂದು ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್ ಅವರು ಈ ಹೇಳಿಕೆ ನೀಡಿದ್ದರು.
ರಾಜ್ಯದ ನಮ್ಮ ಪಕ್ಷದ ನಾಯಕರು ರೂ.1 ಸಾವಿರ ಕೋಟಿಯನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ. ಆ ಹಣ ಬಳಸಿ ರಾಜ್ಯ ಸರ್ಕಾರವನ್ನು ಪತನಗೊಳಿಸಿ, ತಾವು ಮುಖ್ಯಮಂತ್ರಿ ಆಗಲು ಹೊರಟಿದ್ದಾರೆ. ಆ ಹಣವನ್ನು ಬಳಸಿ ಕಾಂಗ್ರೆಸ್ ಶಾಸಕರನ್ನು ಖರೀದಿಸಲು ಸಂಚು ರೂಪಿಸಿದ್ದಾರೆ. ಅಲ್ಲದೇ ಡಿಸೆಂಬರ್‌ನಲ್ಲಿ ರಾಜಕೀಯ ಕ್ರಾಂತಿ ಆಗಲಿದೆ ಎಂದೂ ಹೇಳಿಕೆ ಕೊಟ್ಟಿದ್ದಾರೆ. ಹಣ ಸಂಗ್ರಹಿಸಿರುವ ನಾಯಕರ ಮನೆಯಲ್ಲಿ ನೋಟು ಎಣಿಕೆ ಯಂತ್ರವೂ ಪತ್ತೆಯಾಗಿತ್ತು ಹೇಳಿದ್ದರು.
ದೂರು ಸ್ವೀಕರಿಸಲಾಗಿದ್ದು, ಪರಿಶೀಲನೆಯ ನಂತರ ಎಫ್‌ಐಆರ್ ದಾಖಲಿಸಲಾಗುಪವುದು ಎಂದು ಪೊಲೀಸರು ತಿಳಿಸಿದ್ದಾರೆ
Advertisement