ಬೆಂಗಳೂರು: ರಾಜಧಾನಿ ಬೆಂಗಳೂರಿನಿಂದ 40 ಕಿ.ಮೀ ದೂರದಲ್ಲಿರುವ ದೇವನಹಳ್ಳಿ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಯಾದ ನಂತರ ಕೈಗಾರಿಕೆಗಳ ಹಬ್ ಆಗಿ ಮಾರ್ಪಟ್ಟಿದೆ. ಈಗ ಭಾರತೀಯ ಗುಣಮಟ್ಟ ಮಾಪನ ಸಂಸ್ಥೆಯ (BIS-10,500)ಕುಡಿಯಲು ಯೋಗ್ಯವಾದ ನೀರಿನ ಮಟ್ಟ ಕಾಯ್ದುಕೊಂಡು ಸಂಸ್ಕರಿಸಿದ ನೀರು ಬಳಕೆ ಯೋಜನೆಯ ಮೂಲಕ ದಿನಕ್ಕೆ 6,40,000 ಲೀಟರ್ ಕುಡಿಯುವ ನೀರನ್ನು ಪಡೆಯುತ್ತಿದೆ.
ಸುಮಾರು 45,000 ನಿವಾಸಿಗಳನ್ನು ಹೊಂದಿರುವ ದೇವನಹಳ್ಳಿ ತನ್ನ ನೀರಿನ ಅಗತ್ಯಗಳಿಗಾಗಿ ಕೊಳವೆ ಬಾವಿಗಳನ್ನು ಹೆಚ್ಚಾಗಿ ಅವಲಂಬಿಸಬೇಕಾಗಿತ್ತು. ಸಂಸ್ಕರಿಸಿದ ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸುವ ಬೋಸಾನ್ ವೈಟ್ ವಾಟರ್ ಮತ್ತು ಬೆಂಗಳೂರು ಮೂಲದ ಬಯೋಮ್ ಎನ್ವಿರಾನ್‌ಮೆಂಟಲ್ ಟ್ರಸ್ಟ್ ಸಹಯೋಗದಲ್ಲಿ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ.
ಸಂಸ್ಕರಿಸಿದ ನೀರು ಬಳಕೆ ಯೋಜನೆ ಮೂಲಕ ಸ್ಥಳೀಯ ಕೆರೆಯನ್ನು ಪುನಶ್ಚೇತನಗೊಳಿಸುವ ಗುರಿ ಹೊಂದಿದ್ದೇವೆ. ಅಂತರ್ಜಲವನ್ನು ಮರುಪೂರಣಗೊಳಿಸುತ್ತೇವೆ, ಸ್ಥಳೀಯ ನೀರಿನ ಮೂಲಗಳು ಮತ್ತು ಸಂಸ್ಕರಿಸಿದ ತ್ಯಾಜ್ಯನೀರು ಎರಡನ್ನೂ ಬಳಸಿಕೊಂಡು ಪಟ್ಟಣವು ಹೇಗೆ ಸ್ವಾವಲಂಬಿಯಾಗಬಹುದು ಎಂಬುದನ್ನು ಅನ್ವೇಷಿಸುತ್ತೇವೆ ಎಂದು ಬಯೋಮ್ ಎನ್ವಿರಾನ್ಮೆಂಟಲ್ ಟ್ರಸ್ಟ್‌ನ ಸಲಹೆಗಾರ ವಿಶ್ವನಾಥ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದರು.
ಈ ಯೋಜನೆಯ ಭಾಗವಾಗಿ, ತ್ಯಾಜ್ಯ ನೀರು ಸಂಸ್ಕರಣಾ ಘಟಕದಿಂದ (STP) ಸಂಸ್ಕರಿಸಿದ ತ್ಯಾಜ್ಯ ನೀರನ್ನು ಮೊದಲು ಬಾಗಲೂರು ಕೆರೆಗೆ ಪಂಪ್ ಮಾಡಲಾಗುತ್ತದೆ. ಅಲ್ಲಿ ಅದನ್ನು ಮಳೆನೀರಿನೊಂದಿಗೆ ಪರಿವರ್ತಿಸಿದ ನಂತರ ದೇವನಹಳ್ಳಿಯ ಸಿಹಿ ನೀರು ಕೆರೆಗೆ ತುಂಬಿಸಲಾಗುತ್ತದೆ.
ಯೋಜನೆಯು ದೇವನಹಳ್ಳಿಯ 5.4 MLD (ದಿನಕ್ಕೆ ಮಿಲಿಯನ್ ಲೀಟರ್) ನೀರಿನ ಬೇಡಿಕೆಯನ್ನು ಪೂರೈಸುವ ಸಾಮರ್ಥ್ಯವನ್ನು ಹೊಂದಿದೆ. ಒಂದನೇ ಹಂತದಲ್ಲಿ ಪ್ರತಿದಿನ 240 KL (ಕಿಲೋ ಲೀಟರ್) ನೀರನ್ನು ಒದಗಿಸಲು ನೀರಿನ ಸಂಸ್ಕರಣಾ ಘಟಕವನ್ನು ಸ್ಥಾಪಿಸಲಾಗಿದೆ ಎಂದು ವಿಶ್ವನಾಥ್ ಹೇಳಿದರು. ಹಂತ 2 ರಲ್ಲಿ ಇನ್ನೂ ನಾಲ್ಕು ಫಿಲ್ಟರ್ ಬೋರ್‌ವೆಲ್‌ಗಳು, 60 KL ಸಂಪ್ ಮತ್ತು 400 KLD ನೀರಿನ ಸಂಸ್ಕರಣಾ ಘಟಕ ಸ್ಥಾಪನೆಯೊದಿಗೆ ದೇವನಹಳ್ಳಿ ಜನರು ನಿತ್ಯ 6,40,000 ಲೀಟರ್ ನೀರಿನ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದರು.
ಬೋಸನ್ ವೈಟ್‌ವಾಟರ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ವಿಕಾಸ್ ಬ್ರಹ್ಮಾವರ್ ಮಾತನಾಡಿ, ನಮ್ಮ ನಗರಗಳಲ್ಲಿ ಉತ್ಪತ್ತಿಯಾಗುವ ಪ್ರತಿಯೊಂದು ಹನಿ ತ್ಯಾಜ್ಯ ನೀರನ್ನು ಬಳಸಿಕೊಳ್ಳುವ ಮೂಲಕ ಸುಸ್ಥಿರ ನೀರಿನ ಮೂಲವನ್ನು ರಚಿಸುವುದು ನಮ್ಮ ದೃಷ್ಟಿಯಾಗಿದೆ ಎಂದು ಹೇಳಿದರು.
Advertisement