ಬೆಂಗಳೂರು: ಅಡುಗೆ ಎಣ್ಣೆ ಶುದ್ಧೀಕರಣಕ್ಕೆ ರಾಸಾಯನಿಕ ಬಳಕೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ದೇವನಹಳ್ಳಿಯಲ್ಲಿರುವ ಕೆಎಫ್‌ಸಿ ಮಳಿಗೆಯ ಪರವಾನಗಿಯನ್ನು ಆರೋಗ್ಯ ಇಲಾಖೆ ಅಮಾನತುಗೊಳಿಸಿದೆ.
ಕೆಎಫ್‌ಸಿ ಫ್ರೈಡ್ ಚಿಕನ್‌ಗೆ ಹೆಸರುವಾಸಿಯಾಗಿದ್ದು, ಇತ್ತೀಚೆಗೆ ಮಳಿಗೆಗೆ ಭೇಟಿ ನೀಡಿದ್ದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಈ ವೇಳೆ ಆರೋಗ್ಯ ಇಲಾಖೆಯ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಪತ್ತೆಯಾಗಿದೆ.
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ಅಧಿಕಾರಿಗಳು ಕೆಎಫ್‌ಸಿಯಲ್ಲಿ ಮಾರಾಟವಾಗುವ ಫ್ರೈಡ್ ಚಿಕನ್ ಸೇರಿದಂತೆ ವಿವಿಧ ವಸ್ತುಗಳ ಮಾದರಿಗಳನ್ನು ಪರೀಕ್ಷೆಗೆ ರವಾನಿಸಿದ್ದರು. ಆಹಾರ ತಯಾರಿಕೆಯಲ್ಲಿ ಬಳಸಲಾಗಿರುವ ಎಣ್ಣೆಯಲ್ಲಿ ರಾಸಾಯನಿಕ ಇರುವುದು ಪತ್ತೆಯಾಗಿದೆ. ಎಣ್ಣೆಯಲ್ಲಿ ‘ಸಿಂಥೆಟಿಕ್ ಮೆಗ್ನೀಸಿಯಮ್ ಸಿಲಿಕೇಟ್’ ಇರುವುದು ಪತ್ತೆಯಾಗಿದೆ.
ಸಿಂಥೆಟಿಕ್ ಮೆಗ್ನೀಸಿಯಮ್ ಸಿಲಿಕೇಟ್ ಅನ್ನು ಕೈಗಾರಿಕಾ ಕ್ಷೇತ್ರದಲ್ಲಿನ ಸೆರಾಮಿಕ್ಸ್, ರಬ್ಬರ್ ಮತ್ತು ಪೇಂಟ್‌ಗಳಲ್ಲಿ ಬಳಸಲಾಗುತ್ತದೆ. ಇದಲ್ಲದೆ, ಸೌಂದರ್ಯವರ್ಧಕಗಳು ಮತ್ತು ಫಾರ್ಮಾಸ್ಯುಟಿಕಲ್‌ಗಳಲ್ಲಿ ಆಂಟಿ-ಕೇಕಿಂಗ್ ಏಜೆಂಟ್ ಆಗಿಯೂ ಬಳಸಲಾಗುತ್ತದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದನ್ನು ಆಹಾರದಲ್ಲಿ ಬಳಕೆ ಮಾಡುವುದು ಹಾನಿಕಾರಕ. ಇದನ್ನು ಸೇವಿಸಿದರೆ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಇದಲ್ಲದೆ ತಪಾಸಣೆಯ ವೇಳೆ ಕೆಎಫ್‌ಸಿ ದೇವನಹಳ್ಳಿ ಶಾಖೆಯಲ್ಲೂ ಅನೈರ್ಮಲ್ಯ ಕಂಡು ಬಂದಿದೆ. ಆಹಾರ ಪದಾರ್ಥಗಳಲ್ಲಿ ಕಲಬೆರಕೆ ದೃಢವಾಗಿದ್ದು, ಅಡುಗೆ ಎಣ್ಣೆಯನ್ನು ಹಲವು ಬಾರಿ ಮರುಬಳಕೆ ಮಾಡಿರುವುದನ್ನು ರೆಸ್ಟೋರೆಂಟ್ ಒಪ್ಪಿಕೊಂಡಿದೆ ಎಂದು ತಿಳಿಸಿದ್ದಾರೆ.
ಆರೋಗ್ಯ ಆಯುಕ್ತ ರಂದೀಪ್ ಡಿ ಅವರು ಎಫ್‌ಎಸ್‌ಎಸ್‌ಎಐ ಆಯುಕ್ತ ಶ್ರೀನಿವಾಸ್ ಕೆ ಅವರಿಗೆ ಸುಳಿವು ನೀಜಿದ್ದು, ನಂತರ ಮಳಿಗೆಯಲ್ಲಿ ತಪಾಸಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಇದೀಗ ಮಳಿಗೆಯ ಪರವಾನಗಿಯನ್ನು 14 ದಿನಗಳ ಕಾಲ ಅಮಾನತುಗೊಳಿಸಲಾಗಿದೆ. ಕೆಎಫ್‌ಸಿ ಮಳಿಗೆಯ ಜೊತೆಗೆ ಇತರೆ ಮಳಿಗೆಗಳ ಪರವಾನಗಿಯನ್ನೂ ಅಮಾನತುಗೊಳಿಸಲಾಗಿದೆ.
ಬಿಬಿಎಂಪಿ ದಕ್ಷಿಣದಲ್ಲಿರುವ ನುಪಾ ಟೆಕ್ನಾಲಜೀಸ್ ಮತ್ತು ಮಮತಾ ಏಜೆನ್ಸಿ, ಮೈಸೂರಿನ ವಿಶಾಲ್ ಬಾರ್ ಮತ್ತು ರೆಸ್ಟೋರೆಂಟ್‌ಗಳ ಪರವಾನಗಿಯನ್ನು ಎಫ್‌ಎಸ್‌ಎಸ್‌ಎಐ ಅಮಾನತುಗೊಳಿಸಿದೆ.
KFC ಸ್ಪಷ್ಟನೆ
"ಕೆಎಫ್ ಸಿ ನೆಲದ ಕಾನೂನುಗಳಿಗೆ ಅತ್ಯಂತ ಹೆಚ್ಚು ಗೌರವ ನೀಡುತ್ತದೆ ಮತ್ತು ಸರ್ಕಾರದ ಎಲ್ಲಾ ಮಾರ್ಗಸೂಚಿಗಳು ಮತ್ತು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತದೆ. ದೇಶದ ಹೆಸರಾಂತ ಪೂರೈಕೆದಾರರಿಂದ ಖರೀದಿಸುವ ಅತ್ಯಧಿಕ ಗುಣಮಟ್ಟದ ಖಾದ್ಯತೈಲ ಮತ್ತು ಚಿಕನ್ ಅನ್ನು ಬಳಸಲಾಗುತ್ತಿದೆ. ಎಫ್ ಎಸ್ ಎಸ್ ಎಐ ಮತ್ತು ಸಂಬಂಧಪಟ್ಟ ಇಲಾಖೆಗಳು ನಿಗದಿಪಡಿಸಿರುವ ಸುರಕ್ಷತೆ ಮತ್ತು ಗುಣಮಟ್ಟ ಮಾನದಂಡಗಳನ್ನು ಚಾಚೂತಪ್ಪದೇ ಪಾಲಿಸಲಾಗುತ್ತಿದೆ.
ಎಫ್ಎಸ್ಎಸ್ಎಐ ಅಧಿಸೂಚನೆಯ ಪ್ರಕಾರ ಅನುಮೋದಿತ ಪ್ರಮಾಣದಲ್ಲಿ ಮೆಗ್ನೀಸಿಯಂ ಸಿಲಿಕೇಟ್ ಅನ್ನು ಫಿಲ್ಟರೇಶನ್ ಏಜೆಂಟ್ ಆಗಿ ಬಳಸಲಾಗುತ್ತಿದೆ; ಮತ್ತು ಎಫ್ಎಸ್ಎಸ್ಎಐ ಮಾರ್ಗಸೂಚಿಗಳ ಪ್ರಕಾರ ಎಲ್ಲಾ ಕೆಎಫ್ ಸಿ ಚಿಕನ್ ಅನ್ನು ಸಿದ್ಧಪಡಿಸಿದ ನಂತರ ಸಂಪೂರ್ಣ ಸುರಕ್ಷಿತವಾಗಿ ಮಾರಾಟ ಮಾಡಲಾಗುತ್ತಿದೆ ಎಂಬುದನ್ನು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ. ಕೆಎಫ್ ಸಿ ದೇವನಹಳ್ಳಿ ರೆಸ್ಟೋರೆಂಟ್ ಎಂದಿನಂತೆ ಕಾರ್ಯಾಚರಣೆ ನಡೆಸುತ್ತಿದೆ’’.
Advertisement