ಬೆಂಗಳೂರು: ಕೇಂದ್ರ ಸಚಿವ ಹಾಗೂ ಜೆಡಿಎಸ್ ವರಿಷ್ಠ ಎಚ್‌ಡಿ ಕುಮಾರಸ್ವಾಮಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಐಪಿಎಸ್ ಅಧಿಕಾರಿ ಎಂ.ಚಂದ್ರಶೇಖರ್ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಜೆಡಿಎಸ್ ಸೋಮವಾರ ಆಗ್ರಹಿಸಿದೆ.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ನೇತೃತ್ವದ ಜೆಡಿಎಸ್ ನಿಯೋಗ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಭೇಟಿ ಮಾಡಿದ್ದು, ಅಧಿಕಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿತು.
ಭ್ರಷ್ಟಾಚಾರ, ದುರ್ನಡತೆ, ಸುಲಿಗೆ ಮುಂತಾದ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ಎಡಿಜಿಪಿ ಚಂದ್ರಶೇಖರರಾವ್ ಅವರನ್ನು ಅಮಾನತ್ತಿನಲ್ಲಿಟ್ಟು, ಉನ್ನತಮಟ್ಟದ ತನಿಖೆ ನಡೆಸಬೇಕು ಎಂದು ಈ ದೂರಿನಲ್ಲಿ ಮನವಿ ಮಾಡಿದೆ.
ಎಂ.ಚಂದ್ರಶೇಖರ್ ಮೂಲತಃ ಹಿಮಾಚಲ ಪ್ರದೇಶ ಐ.ಪಿ.ಎಸ್ ಕೇಡರ್‌ಗೆ ಸೇರಿದವರಾಗಿದ್ದಾರೆ. ನಂತರ, ತನ್ನ ಪತ್ನಿಯ ಅನಾರೋಗ್ಯ ಮತ್ತು ಹಿಮಾಚಲ ಪ್ರದೇಶದ ವಾತಾವರಣ ಮತ್ತು ಹವಾಗುಣ ಹೊಂದುವುದಿಲ್ಲ ಎನ್ನುವ ಕುಂಟು ನೆಪ ಹೇಳಿ ಮತ್ತು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಹಾಗೂ ರಾಜಕೀಯ ಪ್ರಭಾವ ಬೀರಿ ಕರ್ನಾಟಕ ರಾಜ್ಯಕ್ಕೆ ವರ್ಗಾವಣೆಗೊಂಡು, ತದನಂತರ ಕರ್ನಾಟಕ ಐ.ಪಿ.ಎಸ್ ಕೇಡರ್‌ನಲ್ಲಿ ವಿಲೀನಗೊಂಡಿದ್ದಾರೆ.
ಎಂ.ಚಂದ್ರಶೇಖರ್ ವಿರುದ್ಧ ದಾಖಲಾಗಿರುವ ದೂರುಗಳು, ಎಫ್.ಐ.ಆರ್, ಕೋರ್ಟ್ ಪ್ರಕರಣಗಳು ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ವಿರುದ್ದ ಅವಾಚ್ಯ, ಅಸಭ್ಯ ಮತ್ತು ಅವಹೇಳನಕಾರಿ ಪದಬಳಕೆ ಮಾಡಿ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತಂದಿರುವ ಹಿನ್ನೆಲೆಯಲ್ಲಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಭಾರತೀಯ ಪೊಲೀಸ್ ಸೇವೆಯಿಂದ ಅಮಾನತುಗೊಳಿಸಬೇಕು. ಜೊತಗೆ ಇವರ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸಲು ಅಗತ್ಯವಿರುವ ದಾಖಲಾತಿಗಳೊಂದಿಗೆ ಭಾರತೀಯ ಪೊಲೀಸ್ ಸೇವೆಗಳ ವೃಂದದ ಪ್ರಾಧಿಕಾರವಾಗಿರುವ ಕೇಂದ್ರ ಗೃಹ ಮಂತ್ರಾಲಯಕ್ಕೆ ಪ್ರಸ್ತಾವನೆಯನ್ನು ಸೂಕ್ತ ಶಿಫಾರಸ್ಸಿನೊಂದಿಗೆ ಕಳುಹಿಸಬೇಕೆಂದು ಒತ್ತಾಯಿಸಿದ್ದಾರೆ.
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ಮಾತನಾಡಿ, ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಹೇಳಿಕೆ ನೀಡಿರುವ ಐಪಿಎಸ್ ಅಧಿಕಾರಿ ವಿರುದ್ಧ ರಾಜ್ಯ ಮತ್ತು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
Advertisement