
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಸೈಟು ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಹಾಗೂ ನಗರಾಭಿವೃದ್ದಿ ಸಚಿವ ಭೈರತಿ ಸುರೇಶ್ ಅವರಿಗೆ ಜಾರಿ ನಿರ್ದೇಶನಾಲಯ(ED) ಶಾಕ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ ಎಂದು ಹೇಳಲಾಗುತ್ತಿದೆ. ಆದರೆ ಭೈರತಿ ಸುರೇಶ್ ಇದನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.
ಇಡಿ ನೋಟಿಸ್ ಬಗ್ಗೆ ಪ್ರತಿಕ್ರಿಯಿಸಿದ ಭೈರತಿ ಸುರೇಶ್ ಅವರು, ಮುಡಾ ಪ್ರಕರಣ ಸಂಬಂಧ ನನಗೆ ಯಾವುದೇ ರೀತಿಯ ನೋಟಿಸ್ ಬಂದಿಲ್ಲ. ಕೆಲವರು ಅನಗತ್ಯವಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ನನ್ನ ಕಚೇರಿಗೆ ಆಗಲಿ, ಮನೆಗೆ ಆಗಲಿ ಯಾರು ಬಂದು ನೋಟಿಸ್ ಕೊಟ್ಟಿಲ್ಲ. ನಾನು ತಪ್ಪೇ ಮಾಡದಿದ್ದಾಗ ನನಗೇಕೆ ನೋಟಿಸ್ ಕೊಡುತ್ತಾರೆ ಎಂದು ಸಚಿವರು ಪ್ರಶ್ನೆ ಮಾಡಿದರು.
ನನ್ನ ತೇಜೋವಧೆ ಮಾಡುವ ಪ್ರಯತ್ನ ನಡೆಸಲಾಗಿದೆ. ಕಾನೂನುಬದ್ದವಾಗಿ ನಾನು ಇಲಾಖೆಯನ್ನು ನಿರ್ವಹಿಸಿದ್ದೇನೆ. ಇಂಥ ಸುಳ್ಳು ಸುದ್ದಿಗಳನ್ನು ಯಾರೂ ಹಬ್ಬಿಸುತ್ತಿದ್ದಾರೋ ಗೊತ್ತಿಲ್ಲ. ಅವರಿಗೆ ಒಳ್ಳೆಯದಾಗಲಿ ಎಂದು ಪರೋಕ್ಷವಾಗಿ ತಮ್ಮ ಎದುರಾಳಿಗಳಿಗೆ ತಿರುಗೇಟು ನೀಡಿದರು.
ಇಂದು ಬೆಳಗ್ಗೆ ಹೆಬ್ಬಾಳದಲ್ಲಿರುವ ಭೈರತಿ ಸುರೇಶ್ ಅವರ ನಿವಾಸಕ್ಕೆ ತೆರಳಿದ್ದ ಇಡಿ ಅಧಿಕಾರಿಗಳ ತಂಡ, ನೋಟಿಸ್ ನೀಡಿ ವಿಚಾರಣೆಗೆ ಆಗಮಿಸಬೇಕೆಂದು ಸೂಚನೆ ನೀಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
Advertisement