
ಮೈಸೂರು: ನಂಜನಗೂಡು ತಾಲ್ಲೂಕಿನ ಇಮ್ಮಾವು ಬಳಿಯ 160 ಎಕರೆ ಪ್ರದೇಶದಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಫಿಲಂ ಸಿಟಿ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಘೋಷಿಸಿದರು.
ದಸರಾ ಮಹೋತ್ಸವದ ಕೆಎಸ್ಒಯು ಘಟಿಕೋತ್ಸವ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಚಲನಚಿತ್ರೋತ್ಸವವನ್ನು ಉದ್ಘಾಟಿಸಿ ಮುಖ್ಯಮಂತ್ರಿಗಳು ಮಾತನಾಡಿದರು.
ಹಿಂದಿನ ಬಾರಿ ನಾನು ಮುಖ್ಯಮಂತ್ರಿ ಆಗಿದ್ದಾಗ, ಮೈಸೂರಿನಲ್ಲಿ ಫಿಲಂ ಸಿಟಿ ನಿರ್ಮಿಸಲು ತೀರ್ಮಾನಿಸಿ, ಇಮ್ಮಾವು ಗ್ರಾಮದಲ್ಲಿ 110 ಎಕರೆ ವಿಸ್ತೀರ್ಣದ ಭೂಮಿಯನ್ನು ಮೀಸಲಿರಿಸಲಾಗಿದ್ದು, ಇದರೊಂದಿಗೆ ಹೆಚ್ಚುವರಿಯಾಗಿ ಎರಡನೇ ಹಂತದ ವಿಸ್ತಣೆಗೆ 50 ಎಕರೆ ಜಮೀನನ್ನು ಗುರುತಿಸಿ ನೀಡಲು ತೀರ್ಮಾನಿಸಲಾಗಿದೆ. ಮಾದರಿ ಸಿನಿಮಾ ನಗರಿಯನ್ನು ನಿರ್ಮಿಸುವುದು ಸರ್ಕಾರ ಹಾಗೂ ಚಿತ್ರರಂಗದವರ ಉದ್ದೇಶವಾಗಿದೆ ಎಂದು ಹೇಳಿದರು.
ಚಿತ್ರರಂಗದ ಬೆಳವಣಿಗೆ ಸರ್ಕಾರ ಎಲ್ಲಾ ರೀತಿಯ ಬೆಂಬಲವನ್ನು ನೀಡುತ್ತಾ ಬಂದಿದೆ. ಕನ್ನಡ ಚಲನಚಿತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು, ಚಿತ್ರರಂಗ ಬೆಳೆಯಬೇಕು. ಜನರು ಸಿನಿಮಾಗಳನ್ನು ಚಿತ್ರಮಂದಿರಗಳಿಗೆ ಹೋಗಿಯೇ ವೀಕ್ಷಿಸಬೇಕೆಂದು ತಿಳಿಸಿದರು.
ದಸರಾ ಚಲನಚಿತ್ರೋತ್ಸವ ಅ.4ರಿಂದ 10ರವರೆಗೆ ನಡೆಯಲಿದ್ದು, ದೇಶ ವಿದೇಶಗಳ ಪ್ರಶಸ್ತಿ ಪುರಸ್ಕೃತ ಚಲನಚಿತ್ರಗಳು ಪ್ರದರ್ಶನವಾಗಲಿದೆ. ಚಲನಚಿತ್ರೋತ್ಸವದಲ್ಲಿ ಹಳೆಯ ಹಾಗೂ ಹೊಸ ಸಿನಿಮಾಗಳನ್ನು ವೀಕ್ಷಿಸುವ ಸುವರ್ಣ ಅವಕಾಶವಿದ್ದು, ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಇದೇ ವೇಳೆ ಕನ್ನಡ ಚಿತ್ರರಂಗಕ್ಕೆ ಗಣನೀಯ ಕೊಡುಗೆ ನೀಡಿದ ದಿವಂಗತ ನಟ ಮತ್ತು ನಿರ್ಮಾಪಕ ದ್ವಾರಕೀಶ್ ಅವರಿಗೆ ಈ ವರ್ಷದ ಹಬ್ಬವನ್ನು ಅರ್ಪಿಸಲಾಯಿತು.
ಬಳಿಕ 1983 ರಲ್ಲಿ ದ್ವಾರಕೀಶ್ ಅವರೊಂದಿಗೆ ಹೆಲಿಕಾಪ್ಟರ್‌ನಲ್ಲಿ ಮೈಸೂರಿಗೆ ಪ್ರಯಾಣಿಸಿದ್ದನ್ನು ಸ್ಮರಿಸಿದ ಅವರು, ಅವರೊಂದಿಗಿದ್ದ ಸ್ನೇಹ ಬಾಂಧವ್ಯದ ಬಗ್ಗೆ ತಿಳಿಸಿದರು.
Advertisement