
ಬೆಂಗಳೂರು: ಅನಗತ್ಯವಾಗಿ ಬಿಜೆಪಿ ತಮ್ಮ ಹೆಸರನ್ನ ಎಳೆದು ತರುತ್ತಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಅವರ ಪತ್ನಿ ಟಬು ರಾವ್ ಮಹಿಳಾ ಆಯೋಗಕ್ಕೆ ಬಿಜೆಪಿ ಮಾಧ್ಯಮ ಘಟಕದ ವಿರುದ್ಧ ದೂರು ನೀಡಿದ್ದಾರೆ.
ನಾನು ರಾಜಕೀಯದಲ್ಲಿ ಇಲ್ಲ. ರಾಜಕೀಯ ಕುಟುಂಬದಲ್ಲಿರುವ ಒಬ್ಬ ಮಹಿಳೆ ಅಷ್ಟೇ. ರಾಜಕೀಯಕ್ಕೂ ನನಗೂ ಸಂಬಂಧವಿಲ್ಲ. ನಾನು ಮುಸ್ಲಿಂ ಕುಟುಂಬದಿಂದ ಬಂದು ಹಿಂದು ಕುಟುಂಬದಲ್ಲಿದ್ದೇನೆ ಎಂಬ ಒಂದೇ ಕಾರಣಕ್ಕೆ ಬಿಜೆಪಿ ತನ್ನ ರಾಜಕೀಯಕ್ಕಾಗಿ ನನ್ನ ಹೆಸರನ್ನ ತಳುಕು ಹಾಕುವುದು ಸರಿಯಲ್ಲ, ವಿನಾ ಕಾರಣ ನನ್ನ ಹೆಸರನ್ನು ಎಳೆದ ತಂದು ಅವಹೇಳನ ಮಾಡಲಾಗುತ್ತಿದೆ ಎಂದು ಟಬು ರಾವ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮೊನ್ನೆಯಷ್ಟೇ ಸಾವರ್ಕರ್ ಕುರಿತ ಸಚಿವ ದಿನೇಶ್ ಗುಂಡೂರಾವ್ ಅವರ ಹೇಳಿಕೆ ಟೀಕಿಸುವ ಭರದಲ್ಲಿ ಬಿಜೆಪಿ, ಸಚಿವರ ಪತ್ನಿ ಟಬು ರಾವ್ ಅವರ ಹೆಸರನ್ನ ಪ್ರಸ್ತಾಪಿಸಿತ್ತು. ಬಿಜೆಪಿ ಟ್ವೀಟ್ ನಲ್ಲಿ ತಮ್ಮ ಹೆಸರನ್ನ ಎಳೆದು ತಂದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಟಬು ರಾವ್ ಈ ಬಗ್ಗೆ ಸಂಬಂಧಪಟ್ಟವರನ್ನ ಕರೆಸಿ ವಿಚಾರಣೆ ನಡೆಸುವಂತೆ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ರಾಜಕೀಯವಾಗಿ ಟೀಕೆ ಟಿಪ್ಪಣಿ ಮಾಡುವಾಗ ನನ್ನ ಹಾಗೂ ನನ್ನ ಕುಟುಂಬದ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡುತ್ತಿದ್ದಾರೆ. ಬಿಜೆಪಿಯ ಶಾಸಕ ಯತ್ನಾಳ್ ಅವರು ಇದೇ ರೀತಿಯ ಆಕ್ಷೇಪಾರ್ಹ ಹೇಳಿಕೆ ನೀಡಿದಾಗ ಟಬು ರಾವ್ ಅವರು ಮಾನನಷ್ಟ ಪ್ರಕರಣ ದಾಖಲಿಸಿದ್ದರು.
ಪ್ರಕರಣಕ್ಕೆ ತಡೆಯಾಜ್ಞೆ ಕೋರಿದ್ದ ಯತ್ನಾಳ್ ಅವರಿಗೆ ಹೈ ಕೋರ್ಟ್ ನ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠ ತರಾಟೆಗೆ ತೆಗೆದುಕೊಂಡಿದ್ದಲ್ಲದೇ, ತಡೆಯಾಜ್ಞೆ ನೀಡಲು ನಿರಾಕರಿಸಿದ್ದರು. ಆದರೆ ಇದೀಗ ಬಿಜೆಪಿ ತನ್ನ ಟ್ವೀಟರ್ ನಲ್ಲಿ ಟಬು ರಾವ್ ಅವರ ಹೆಸರನ್ನ ಉಲ್ಲೇಖಿಸಿ ಟೀಕಿಸಿದೆ. ಬಿಜೆಪಿಯ ಈ ನಡೆ ಪುನಾರಾವರ್ತನೆ ಆಗುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವ ದಿನೇಶ್ ಗುಂಡೂರಾವ್ ಅವರ ಪತ್ನಿ ಟಬು ರಾವ್ ಮಹಿಳಾ ಆಯೋಗಕ್ಕೆ ಮನವಿ ಮಾಡಿದ್ದಾರೆ.
ತನ್ನ ಬಗ್ಗೆ ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಿದ್ದಕ್ಕಾಗಿ ಬಿಜೆಪಿ ಪದಾಧಿಕಾರಿಗಳು ಮತ್ತು ಪಕ್ಷದ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ವಹಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಾವ್ ಆಯೋಗವನ್ನು ಒತ್ತಾಯಿಸಿದ್ದಾರೆ, ಇದು ತನ್ನ ಘನತೆಗೆ ಧಕ್ಕೆ ತಂದಿದೆ ಮತ್ತು ಭಾವನಾತ್ಮಕ ನೋವು ಉಂಟುಮಾಡಿದೆ ಎಂದು ಹೇಳಿದ್ದಾರೆ.
ಕರ್ನಾಟಕ ಸಚಿವ ದಿನೇಶ್ ಗುಂಡೂರಾವ್ ಅವರು ವೀರ್ ಸಾವರ್ಕರ್ ಕುರಿತು ಗುರುವಾರ ಮಾಡಿದ ಹೇಳಿಕೆಯಿಂದ ವಿವಾದಕ್ಕೆ ಕಾರಣವಾದ ನಂತರ ಈ ಬೆಳವಣಿಗೆ ನಡೆದಿದೆ.
Advertisement