ಉಡುಪಿ: ರಾಜ್ಯಾದ್ಯಂತ ಮಳೆ ಅಬ್ಬರ ಮುಂದುವರೆದಿರುವಂತೆಯೇ ಅತ್ತ ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಭಾರಿ ಮಳೆಯಿಂದಾಗಿ ಉಡುಪಿಯಲ್ಲಿ ಪ್ರವಾಹ ಪರಿಸ್ಥಿತಿ ಏರ್ಪಟ್ಟಿದೆ.
ಪಶ್ಚಿಮ ಘಟ್ಟದ ತಪ್ಪಲು ಹೆಬ್ರಿಯಲ್ಲಿ ಮಧ್ಯಾಹ್ನ 4.30 ರ ಸುಮಾರಿಗೆ ಮೇಘಸ್ಫೋಟವಾಗಿದ್ದು, ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮದ ಬಲ್ಲಾಡಿ ಎಂಬಲ್ಲಿ ಹಠಾತ್ ಜಲ ಪ್ರವಾಹ ಉಂಟಾಗಿದೆ. ಬಲ್ಲಾಡಿಯ ಈಶ್ವರನಗರ ಸಮೀಪದ ಬಮ್ಮಗುಂಡಿ ಹೊಳೆ ಉಕ್ಕಿ ಹರಿದು ಮನೆ, ಕೃಷಿ ಜಮೀನಿಗೆ ನೀರು ನುಗ್ಗಿ ಭಾರೀ ಆವಾಂತರ ಸೃಷ್ಟಿಯಾಗಿದೆ.
ಭೀಕರ ಜಲ ಪ್ರವಾಹದಿಂದಾಗಿ ಹಲವು ಮನೆಗಳು, ಕಾರು ಬೈಕ್ ಗಳು ಕೊಚ್ಚಿಕೊಂಡು ಹೋಗಿದ್ದು, ಕಬ್ಬಿನಾಲೆ ಭಾಗದ ಪರ್ವತ ಸಾಲಿನಲ್ಲಿ ಮೇಘ ಸ್ಫೋಟವಾಗಿ ಈ ಭೀಕರ ಪ್ರವಾಹ ಸೃಷ್ಟಿಯಾಗಿದೆ. ಮುದ್ರಾಡಿಯ ಹೊಸ ಕಂಬ್ಲದಲ್ಲಿ 1, ಕಾಂತರಬೈಲಿನಲ್ಲಿ 4, ಕೆಲಕಿಲದಲ್ಲಿ 3 ಮನೆಗಳು ಅರ್ಧದಷ್ಟು ಮುಳುಗಿದ್ದು, ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ರಕ್ಷಣಾ ಸಿಬ್ಬಂದಿ ಹಗ್ಗಕಟ್ಟಿ ಏಣಿಯ ಸಹಾಯದಿಂದ ಮನೆಮಂದಿಯನ್ನು ರಕ್ಷಿಸಿದ್ದಾರೆ.
ಮುದ್ರಾಡಿಯ ಹೊಸ ಕಂಬ್ಲ, ಕಾಂತರಬೈಲು, ಕೆಲಕಿಲ ಎಂಬಲ್ಲಿನ ಸುಮಾರು ಎಂಟು ಮನೆಗಳಿಗೆ ಪ್ರವಾಹದ ನೀರು ನುಗ್ಗಿದೆ. ನೆರೆಯಿಂದಾಗಿ ಮುದ್ರಾಡಿ ಸಂಪರ್ಕಿಸುವ ಬಲ್ಲಾಡಿ ತುಂಡುಗುಡ್ಡೆ ರಸ್ತೆ ಸಂಪೂರ್ಣ ಬಂದ್ ಆಗಿದ್ದು ಸ್ಥಳೀಯರು ಬದಲಿ ರಸ್ತೆಯ ಮೂಲಕ ಸಂಚರಿಸುತ್ತಿದ್ದಾರೆ.
ಮೇಘಸ್ಫೋಟ
‘ಕಬ್ಬಿನಾಲೆಯ ಬೆಟ್ಟದಲ್ಲಿ ಉಂಟಾದ ಮೇಘಸ್ಫೋಟದಿಂದ ಕೇವಲ ಕೆಲವೇ ಗಂಟೆಯಲ್ಲಿ ಭಾರೀ ಮಳೆಯಾಗಿ ಜಲ ಪ್ರವಾಹ ಸೃಷ್ಠಿಯಾಗಿದೆ. ಇದರ ಪರಿಣಾಮ ನೀರು ಮನೆಗಳಿಗೆ ನುಗ್ಗಿವೆ ಎಂದು ಮುದ್ರಾಡಿ ಗ್ರಾಮ ಪಂಚಾಯತ್ ಸದಸ್ಯ ಗಣಪತಿ ಮುದ್ರಾಡಿ ತಿಳಿಸಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಸಂತಿ ಪೂಜಾರಿ, ಪಂಚಾಯತಿ ಸದಸ್ಯರು, ಗ್ರಾಮ ಆಡಳಿತಾಧಿಕಾರಿ ನವೀನ್ ಕುಮಾರ್ ಕುಕ್ಕುಜೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅ.9ರವರೆಗೆ ಭಾರೀ ಮಳೆಯಾಗಲಿದೆ: ಉಡುಪಿ ಜಿಲ್ಲಾಧಿಕಾರಿ
ಇನ್ನು ಪ್ರವಾಹದ ಕುರಿತು ಮಾಹಿತಿ ನೀಡಿರುವ ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ ಅವರು, 'ಅ.9ರವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಸೂಚನೆ ನೀಡಿದೆ. ಅದರಂತೆ ಹೆಬ್ರಿ ತಾಲೂಕಿನ ಬಲ್ಲಾಡಿಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ. ಇದರಿಂದ ನೆರೆ ಸೃಷ್ಠಿಯಾಗಿ ಮನೆಗಳು ಹಾಗೂ ದನದ ಕೊಟ್ಟಿಗೆಗೆ ಹಾನಿಯಾಗಿದೆ. ಕಂದಾಯ ಇಲಾಖೆಯ ಅಧಿಕಾರಿ ಗಳು ಸ್ಥಳದಲ್ಲಿದ್ದು, ನೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ' ಎಂದು ಹೇಳಿದರು.
ಅಲ್ಲದೆ 'ಗುಡ್ಡ ಪ್ರದೇಶವಾಗಿರುವುದರಿಂದ ಒಂದೇ ಜಾಗದಲ್ಲಿ ಅತೀ ಹೆಚ್ಚು ಮಳೆಯಾಗಿದೆ. ಸದ್ಯ ಯಾವುದೇ ಸಮಸ್ಯೆ ಆಗಿಲ್ಲ. ಕಾರು, ಬೈಕುಗಳಿಗೆ, ಏಳೆಂಟು ಮನೆಗಳಿಗೆ ನೀರು ನುಗ್ಗಿವೆ. ಒಂದು ದನದ ಕೊಟ್ಟಿಗೆ ಹಾನಿಯಾಗಿದೆ. ಒಂದು ಜಾನುವಾರು ನಾಪತ್ತೆಯಾಗಿದೆ. ಆದರೆ ಯಾವುದೇ ಪ್ರಾಣ ಹಾನಿಯದ ಬಗ್ಗೆ ವರದಿಯಾಗಿಲ್ಲ ಎಂದು ಹೇಳಿದರು.
Advertisement