ಹಳೇಹುಬ್ಬಳ್ಳಿ ಗಲಭೆ ಪ್ರಕರಣವನ್ನು ಹಿಂದಕ್ಕೆ ಪಡೆಯುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ವಿಪಕ್ಷಗಳು ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಿರುವಂತೆಯೇ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಿಎಂ ಸಿದ್ದರಾಮಯ್ಯ, 'ಕೋರ್ಟ್ ಅನುಮತಿ ನೀಡಿದರಷ್ಟೇ ಹಳೇಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ಪಡೆಯುತ್ತೇವೆ' ಎಂದು ಸ್ಪಷ್ಟನೆ ನೀಡಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿದ್ದರಾಮಯ್ಯ, ‘ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಹಳೇಹುಬ್ಬಳ್ಳಿ ಗಲಭೆ ಪ್ರಕರಣವನ್ನು ಹಿಂಪಡೆಯಲು ಸಚಿವ ಸಂಪುಟ ನಿರ್ಧರಿಸಿದೆ. ಆದರೆ, ಅದಕ್ಕೆ ಕೋರ್ಟ್ ಅನುಮತಿ ನೀಡದೇ ಇದ್ದಲ್ಲಿ ಸಾಧ್ಯವಿಲ್ಲ’ ಎಂದು ಸಿಎಂ ಹೇಳಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರದ ವೇಳೆ ಆರ್ ಎಸ್ ಎಸ್ ಕಾರ್ಯಕರ್ತರ ಮೇಲಿದ್ದ ಪ್ರಕರಣಗಳನ್ನು ವಾಪಸ್ ಪಡೆದಿಲ್ಲವೇ.. ಎಂದು ಸರ್ಕಾರದ ನಿರ್ಧಾರವನ್ನು ಸಿದ್ದರಾಮಯ್ಯ ಸಮರ್ಥಿಸಿಕೊಂಡರು.
ರಾಜ್ಯ ಸರ್ಕಾರ ಹಳೆ ಹುಬ್ಬಳ್ಳಿ ಗಲಭೆ ಕೇಸ್ ಹಿಂಪಡೆದ ವಿಚಾರವಾಗಿ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ಇಂದು ಹುಬ್ಬಳ್ಳಿಯ ಗೋಕುಲ್ ರೋಡ್ ನಲ್ಲಿ ಸಿಎಂ ಸಿದ್ದರಾಮಯ್ಯ ಕಾರಿಗೆ ಬಿಜೆಪಿ ಕಾರ್ಯಕರ್ತರು ಕಪ್ಪು ಬಟ್ಟೆ ಪ್ರದರ್ಶಿಸಿದರು.
BBMP ಅಕ್ಟೋಬರ್ 17 ರಂದು 'ಕುಕುರ್ ತಿಹಾರ್' ಎಂದು ಕರೆಯಲ್ಪಡುವ 'ನಾಯಿಗಳ ಹಬ್ಬ'ವನ್ನು ಆಚರಿಸಲಿದೆ. ಈ ವಿಶಿಷ್ಟ ಕಾರ್ಯಕ್ರಮವು ನಗರದಾದ್ಯಂತ ವಸತಿ ಕಲ್ಯಾಣ ಸಂಘಗಳು (RWA) ಮತ್ತು ಪ್ರಾಣಿ ಪಾಲಕರನ್ನು ಒಟ್ಟಿಗೆ ಸೇರಿಸುತ್ತದೆ. ಮನುಷ್ಯರು ಮತ್ತು ಪ್ರಾಣಿಗಳ ನಡುವಿನ ಪ್ರೀತಿ ಮತ್ತು ಬಂಧವನ್ನು ಎತ್ತಿ ತೋರಿಸುವ ಕಾರ್ಯಕ್ರಮ ಇದಾಗಿರಲಿದೆ. ಕಾರ್ಯಕ್ರಮದ ಭಾಗವಾಗಿ ಬಿಬಿಎಂಪಿ ನಾಲ್ಕು ವಾರ್ಡ್‌ಗಳಿಂದ ಪೌರಕಾರ್ಮಿಕರನ್ನು ನೇಮಿಸುವ ಮೂಲಕ ಪ್ರಾಯೋಗಿಕ ಫೀಡಿಂಗ್ ಉಪಕ್ರಮವನ್ನು ಪ್ರಾರಂಭಿಸುತ್ತದೆ. ಪ್ರದೇಶದ ರೆಸ್ಟೋರೆಂಟ್‌ಗಳೊಂದಿಗೆ ಸಮನ್ವಯ ಸಾಧಿಸುವ ಮೂಲಕ ನಾಯಿಗಳಿಗೆ ಆಹಾರ ನೀಡುವ ಉದ್ದೇಶ ಹೊಂದಲಾಗಿದೆ. ಬಿಬಿಎಂಪಿ ಆರೋಗ್ಯ ಇಲಾಖೆಯ ವಿಶೇಷ ಆಯುಕ್ತ ಸುರಲ್ಕರ್ ವಿಕಾಸ್ ಕಿಶೋರ್ ಮಾತನಾಡಿ, ಈ ಉಪಕ್ರಮವು ಪ್ರಾಣಿಗಳಿಗೆ ಮಾನವೀಯ ವಾತಾವರಣವನ್ನು ನಿರ್ಮಿಸುವಲ್ಲಿ ಒಟ್ಟಾಗಿ ಕೆಲಸ ಮಾಡುವ ಸಂಬಂಧಿತ ಸಹಾನುಭೂತಿಯ ಜನರ ಗುಂಪಿನ ಸಂಪರ್ಕ ಹೊಂದುವ ಉದ್ದೇಶ ಹೊಂದಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನ 2 ಕೆರೆಗಳ ಒತ್ತುವರಿ ಮತ್ತು ಕೆರೆಗೆ ನೀರು ಹರಿದುಬರುವ ರಾಜಕಾಲುವೆ ಮುಚ್ಚಿರುವ ಬಗ್ಗೆ ಲೋಕಾಯುಕ್ತ ವರದಿ ಕುರಿತು ಬಿಬಿಎಂಪಿ ಮತ್ತಿತರ ಅಧಿಕಾರಿಗಳಿಗೆ ಎನ್‌ಜಿಟಿ ನೋಟಿಸ್ ಜಾರಿ ಮಾಡಿದೆ.
ವಿಭೂತಿಪುರ ಮತ್ತು ದೊಡ್ಡನೆಕುಂದಿ ಕೆರೆಗಳಲ್ಲಿನ ಹಲವು ಸಮಸ್ಯೆಗಳ ಕುರಿತು ಲೋಕಾಯುಕ್ತ ತನಿಖೆಗೆ ಸಂಬಂಧಿಸಿದ ಪತ್ರಿಕೆಯೊಂದರ ವರದಿಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ದೂರನ್ನಾಗಿ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸುತ್ತಿದೆ. ವಿಭೂತಿಪುರ ಕೆರೆಯಲ್ಲಿನ ಪ್ರವೇಶ ದ್ವಾರವನ್ನು ವಿರೂಪಗೊಳಿಸಿರುವುದು, ತಂತಿ ಬೇಲಿಗಳನ್ನು ಧ್ವಂಸಗೊಳಿಸಿರುವುದು ಮತ್ತು ಅಕ್ರಮ ಕಟ್ಟಡ ತಲೆ ಎತ್ತಿರುವುದನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ ಎಂದು ಎನ್‌ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಅವರನ್ನೊಳಗೊಂಡ ಪೀಠ ಇತ್ತೀಚಿನ ಆದೇಶದಲ್ಲಿ ಹೇಳಿತ್ತು.
ಕುಟುಂಬಕ್ಕೆ ಸೇರಿದ ಸಿದ್ಧಾರ್ಥ ಟ್ರಸ್ಟ್‌ಗೆ ಕೆಐಎಡಿಬಿಯಿಂದ ಪಡೆದಿದ್ದ 5 ಎಕರೆ ಜಮೀನನ್ನು ವಾಪಸ್ ನೀಡಲು ಖರ್ಗೆ ಕುಟುಂಬ ನಿರ್ಧರಿಸಿದೆ. ಖರ್ಗೆ ಕುಟುಂಬದ ಸಿದ್ಧಾರ್ಥ ಟ್ರಸ್ಟ್ ಗೆ ಜಮೀನು ನೀಡಿದ್ದು ವಿವಾದಕ್ಕೆ ಗುರಿಯಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ಮುಡಾದಿಂದ ಪಡೆದಿದ್ದ 14 ನಿವೇಶನಗಳನ್ನು ವಾಪಸ್ ಮಾಡಿದ ಬೆನ್ನಲ್ಲೆ ಖರ್ಗೆ ಕುಟುಂಬ ಈ ನಿರ್ಧಾರ ಕೈಗೊಂಡಿರುವುದು ಮಹತ್ವ ಪಡೆದುಕೊಂಡಿದೆ.
ಸಿದ್ಧಾರ್ಥ ಟ್ರಸ್ಟ್‌ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ರಾಹುಲ್ ಖರ್ಗೆ ಅಧ್ಯಕ್ಷರಾಗಿದ್ದು, ಈ ಟ್ರಸ್ಟ್‌ಗೆ ಕೆಐಎಡಿಬಿಯಿಂದ 5 ಎಕರೆ ಜಮೀನನ್ನು ಕಾನೂನು ಬಾಹಿರವಾಗಿ ಮಂಜೂರು ಮಾಡಲಾಗಿದೆ ಎಂದು ವಿಧಾನ ಪರಿಷತ್‌ನ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದರು.
ರಾಮನಗರ ಪೊಲೀಸರು ಬಿಗ್ಬಾಸ್ಗೆ ನೊಟೀಸ್ ನೀಡಿದ್ದು, ಬಿಗ್ಬಾಸ್ನ ವಿಡಿಯೋ, ಸಂಭಾಷಣೆಯನ್ನು ಹಾಜರುಪಡಿಸಿರೆಂದು ಸೂಚನೆ ನೀಡಿದ್ದಾರೆ.
ಬಿಗ್ಬಾಸ್ ಕನ್ನಡ ಸೀಸನ್ 11 ನ ಆರಂಭದಲ್ಲಿ ಸ್ವರ್ಗ, ನರಕ ಎಂಬ ಕಾನ್ಸೆಪ್ಟ್ ಪರಿಚಯಿಸಲಾಗಿತ್ತು. ನರಕಕ್ಕೆ ಹೋದ ಸ್ಪರ್ಧಿಗಳು ನೆಲದ ಮೇಲೆ ಹಾಕಲಾದ ಬೆಡ್ನಲ್ಲಿ ಮಲಗಬೇಕಿತ್ತು. ಅವರಿಗೆ ಊಟದ ಬದಲಿಗೆ ಕೇವಲ ಗಂಜಿ ಕೊಡಲಾಗಿತ್ತು. ಇದು ಕೆಲವು ಸಾಮಾಜಕ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿತ್ತು. ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಅವರು, ಈ ಕುರಿತು ಮಾನವ ಹಕ್ಕು ಆಯೋಗಕ್ಕೆ ಪತ್ರ ಬರೆದು ಬಿಗ್ಬಾಸ್ ಮನೆಯಲ್ಲಿ ಮಾನವ ಹಕ್ಕಿನ ಉಲ್ಲಂಘನೆ ಆಗುತ್ತಿದೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ನೊಟೀಸ್ ಜಾರಿ ಮಾಡಲಾಗಿದೆ.
Advertisement