ತುಮಕೂರು: ತುಮಕೂರು ಜಿಲ್ಲೆಯ ದೇವರಾಯನದುರ್ಗ ಬೆಟ್ಟದ ಜಯಮಂಗಲಿ ನದಿಯ ಉಗಮ ಸ್ಥಾನದಲ್ಲಿ ಹೊಸ ಪ್ರಭೇದದ ಜಿಗಿಯುವ ಜೇಡವೊಂದು ಪತ್ತೆಯಾಗಿದೆ.
ದೇವರಾಯನದುರ್ಗದ ಜಯಮಂಗಲಿ ಉಗಮ ಸ್ಥಾನ ಪ್ರದೇಶದಲ್ಲಿ ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆಯ ಬಿ.ಜಿ.ನಿಶಾ, ಚಿನ್ಮಯ್ ಸಿ.ಮಲಿಯೆ, ಡಬ್ಲ್ಯೂ ಡಬ್ಲ್ಯೂ ಈ ಸಂಸ್ಥೆಯ ಲೋಹಿತ್ ವೈ.ಟಿ., ಇವರು ಗಿಡಮರಗಳಿಂದ ಬಿದ್ದ ಒಣ ತರಗೆಲೆಗಳಲ್ಲಿ ಜಂಪಿಂಗ್ ಸ್ಪೈಡರ್ ಗುಂಪಿನ ಈ ಜೇಡರ ಹುಳುಗಳ ಆವಾಸ, ವರ್ತನೆಯ ವೈಜ್ಞಾನಿಕ ಅಧ್ಯಯನವನ್ನು ಕೈಗೊಂಡಿದ್ದರು.
ಇತರೆ ಜೇಡರ ಹುಳುಗಳಿಗಿಂತ ಭಿನ್ನವಾಗಿರುವುದರಿಂದ ಈ ಜೇಡದ ಹೆಣ್ಣು ಮತ್ತು ಗಂಡು ಮಾದರಿಗಳನ್ನು ವಂಶವಾಹಿ ಡಿ.ಎನ್.ಎ ಹಾಗೂ ಅಣು ಮಟ್ಟದ ಅಧ್ಯಯನಕ್ಕಾಗಿ ಜಾನ್ ಕೆಲಬ್, ಕಿರಣ್ ಮರಾಠೆ, ಕೃಷ್ಣಮೇಘ ಕುಂಟೆ ಹಾಗೂ ಕೆನಡಾದ ವೈನೆ ಮ್ಯಾಡಿಸನ್ ವಿಜ್ಞಾನಿಗಳಿಗೆ ಕಳುಹಿಸಲಾಗಿತ್ತು.
ಬೇರೆ ಜೇಡಗಳ ಜತೆ ಈ ಜೇಡದ ಡಿ.ಎನ್.ಎ ಮ್ಯಾಪಿಂಗ್ ಮಾಡಿದಾಗ ಸಂಪೂರ್ಣ ಬಿನ್ನವಾಗಿರುವ ಅಣು ಸಂಯೋಜನೆ ಕಂಡುಬಂದಿರುವುದರಿಂದ ಇದನ್ನು ತೆಂಕಣ ಜಯಮಂಗಲಿ ಎಂದು ನಾಮಕರಣ ಮಾಡಲಾಗಿದೆ.
ಹೊಸ ಜಾತಿಗೆ ತೆಂಕಣ (ದಕ್ಷಿಣ ಏಷ್ಯಾ) ಎಂತಲೂ ಮತ್ತು ಪ್ರಭೇದ ಜಯಮಂಗಲಿ ( ಜಯಮಂಗಲಿ ಉಗಮ ಸ್ಥಾನ) ಎಂದು ಹೆಸರಿಸಲಾಗಿದೆ.
ಇಂತಹ ವಿಭಿನ್ನ ಲಕ್ಷಣದ ನಿಖರ ಮಾಹಿತಿಯ ಸಂಶೋಧನಾ ಬರಹ ಅಂತಾರಾಷ್ಟ್ರೀಯ ಜರ್ನಲ್ ಝೂಕೀಸ್ ನಿಯತಕಾಲಿಕೆಯಲ್ಲಿ ಅಕ್ಟೋಬರ್ ಸಂಚಿಕೆಯಲ್ಲಿ ಪ್ರಕಟವಾಗಿದೆ.
ಬೆಂಗಳೂರಿನ ಜೀವ ವಿಜ್ಞಾನ ಕೇಂದ್ರ (ಎನ್‌ಸಿಬಿಎಸ್) ಮತ್ತು ಯೂನಿವರ್ಸಿಟ್ ಬ್ರಿಟಿಷ್ ಕೊಲಂಬಿಯಾ ಲ್ಯಾಬ್ ಸಹಯೋಗದಲ್ಲಿ ಈ ಸಂಶೋಧನೆ ಮಾಡಿದ್ದಾರೆ.
ಜೇಡಗಳು ಪರಿಸರ ಸಮತೋಲನೆಯಲ್ಲಿ, ಆಹಾರಜಾಲ ಹಾಗೂ ಆಹಾರ ಸರಪಳಿಯಲ್ಲಿ ಪ್ರಮುಖ ಪಾತ್ರ ವಹಿಸುವತ್ತವೆ. ಬೇಸಿಗೆಯಲ್ಲಿ ಬೀಳುವ ಕಾಡಿನ ಬೆಂಕಿಯಿಂದ ನೆಲ ಮಟ್ಟ ದಲ್ಲಿರುವ ಇಂತಹ ಹಲವು ಜೀವಿಗಳು ಹೊಸ ಪ್ರಪಂಚಕ್ಕೆ ಗೊತ್ತಾಗುವ ಮುನ್ನವೆ ವಿನಾಶ ಹೊಂದುತ್ತವೆ.
Advertisement