ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಪರಿಣಾಮ ಕರ್ನಾಟಕದ ಒಳನಾಡಿನಲ್ಲಿ ಮಳೆ ಆರಂಭವಾಗಿದೆ. ಬೆಂಗಳೂರು ನಗರದಾದ್ಯಂತ 2 ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ವರುಣನ ಆರ್ಭಟ ಇನ್ನೂ ಮೂರು ದಿನ ರಾಜ್ಯದಲ್ಲಿ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಶಾಲೆಗಳಿಗೆ ಬುಧವಾರ ರಜೆ ಘೋಷಿಸಲಾಗಿದೆ. ಮೆಜೆಸ್ಟಿಕ್, ಕಾರ್ಪೊರೇಷನ್ ಸರ್ಕಲ್, ಶಾಂತಿನಗರ, ಕೆ.ಆರ್.ಮಾರ್ಕೆಟ್, ವಿಧಾನಸೌಧ, ಶಿವಾಜಿನಗರ, ಬಸವನಗುಡಿ, ಜಯನಗರ, ಶ್ರೀನಗರ, ಹನುಮಂತನಗರ, ಕೋರಮಂಗಲ, ರಿಚ್ಮಂಡ್ ಸರ್ಕಲ್, ಸೇರಿದಂತೆ ಹಲವೆಡೆ ವಾಹನ ಸವಾರರು ಪರದಾಡುತ್ತಿದ್ದ ದೃಶ್ಯ ಸಮಾನ್ಯವಾಗಿತ್ತು.
ಕೇಂದ್ರ ಚುನಾವಣಾ ಆಯೋಗ ಮಹಾರಾಷ್ಟ್ರ ಹಾಗೂ ಜಾರ್ಖಂಡ್ ವಿಧಾನಸಭಾ ಚುನಾವಣೆ ದಿನಾಂಕಗಳ ಜೊತೆಗೆ ರಾಜ್ಯದ 3 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ದಿನಾಂಕವನ್ನೂ ಘೋಷಿಸಿದೆ. ನವದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್, ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 13 ರಂದು ಮತದಾನ ನಡೆಯಲಿದೆ ಎಂದು ತಿಳಿಸಿದ್ದಾರೆ. ಮಹಾರಾಷ್ಟ್ರದಲ್ಲಿ 1 ಹಂತದಲ್ಲಿ ನವೆಂಬರ್ 20 ರಂದು, ಜಾರ್ಖಂಡ್ ನಲ್ಲಿ 2 ಹಂತಗಳಲ್ಲಿ ನವೆಂಬರ್ 13 ಹಾಗೂ ನವೆಂಬರ್ 20 ರಂದು ಮತದಾನ ನಡೆಯಲಿದ್ದು ನ.23 ರಂದು ಚುನಾವಣೆಗಳ ಫಲಿತಾಂಶ ಪ್ರಕಟವಾಗಲಿದೆ.
ಬಿಜೆಪಿ ಶಾಸಕ ಮುನಿರತ್ನಗೆ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಜಾಮೀನು ಸಿಕ್ಕಿದೆ. ರಾಮನಗರದ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣ ಇದಾಗಿದ್ದು, ಮಂಗಳವಾರ ಕಾಯ್ದಿರಿಸಿದ್ದ ತೀರ್ಪನ್ನು ಬೆಂಗಳೂರು ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯ ಇಂದು ಪ್ರಕಟಿಸಿ ಮುನಿರತ್ನ ಅವರಿಗೆ ಜಾಮೀನು ಮಂಜೂರು ಮಾಡಿದೆ. ಮುನಿರತ್ನ ಅವರು ಅಧಿಕಾರ ದುರುಪಯೋಗಪಡಿಸಿಕೊಂಡು ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಮಹಿಳೆಯೊಬ್ಬರು ದೂರು ನೀಡಿದ್ದರು.
ಚಾರ್ಮಾಡಿ ಘಾಟ್ ಜೊತೆಗೆ ಮುಳ್ಳಯ್ಯನಗಿರಿ ಮತ್ತು ಚಂದ್ರದ್ರೋಣ ಪರ್ವತದ ಶ್ರೇಣಿಗಳನ್ನು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಅಪಾಯಕಾರಿ ವಲಯಗಳ ಪಟ್ಟಿಗೆ ಸೇರಿಸಿದೆ. ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆಯ ಗುಡ್ಡಗಾಡು ಪ್ರದೇಶಗಳಲ್ಲಿ ಭೂಕುಸಿತದ ಕಾರಣಗಳನ್ನು ಗುರುತಿಸಲು ಜಿಎಸ್ಐ ಸಮೀಕ್ಷೆ ನಡೆಸಿತ್ತು. ಈ ಸಂಬಂಧ ಮುಂಜಾಗ್ರತಾ ಕ್ರಮಕ್ಕೆ ಶಿಫಾರಸು ಮಾಡಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗಿದೆ. ಮುಳ್ಳಯ್ಯನಗಿರಿ ಮತ್ತು ಚಂದ್ರದ್ರೋಣ ವ್ಯಾಪ್ತಿಯಲ್ಲಿ ಭಾರಿ ವಾಹನಗಳ ಸಂಚಾರವನ್ನು ಸಹ ನಿಷೇಧಿಸಬೇಕು ಎಂದು ಸೂಚಿಸಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಒಂದೂವರೆ ವರ್ಷದಲ್ಲಿ ರಾಜ್ಯ ಸರ್ಕಾರದ ಬಗ್ಗೆ ಜನತೆ ಭ್ರಮನಿರಸನಗೊಂಡಿದ್ದಾರೆ. ರಾಜ್ಯದಲ್ಲಿರುವ ಹಿಂದೂ ವಿರೋಧಿ ಸರ್ಕಾರವನ್ನು ವಜಾಗೊಳಿಸುವುದಕ್ಕಾಗಿ ಬಿಜೆಪಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಮಾಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ. ಗಲಭೆಕೋರರ ವಿರುದ್ಧ ಆರೋಪ ವಾಪಸ್ ಪಡೆದಿದ್ದು ತಪ್ಪು, ಇದನ್ನು ವಿರೋಧಿಸಿ ಅಕ್ಟೋಬರ್ 25ರಂದು ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದು ಇದೇ ವೇಳೆ ತಿಳಿಸಿದ್ದಾರೆ. ಈಮಧ್ಯೆ, ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಕೇಸ್ ಹಿಂಪಡೆಯುವ ಸಂಬಂಧ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ಟಿ ನಾರಾಯಣಸ್ವಾಮಿ ಅವರು ರಾಷ್ರ್ತಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಶಾ ಮಧ್ಯಸ್ಥಿಕೆ ವಹಿಸುವಂತೆ ಕೋರಿ ಪ್ರತ್ಯೇಕವಾಗಿ ಪತ್ರಗಳನ್ನು ಬರೆದಿದ್ದಾರೆ.
ಮುಡಾ ಹಗರಣ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತೊಂದು ಸಮಸ್ಯೆ ಎದುರಾಗಿದೆ. ಅರ್ಕಾವತಿ ಬಡಾವಣೆಯ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ನಿವೇಶನದಾರರು ಸಿಎಂ ಹಾಗೂ ಬಿಡಿಎ ಅಧಿಕಾರಿಗಳ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ನಿವೇಶನದ ಮಾಲೀಕರಾದ ಎಂ.ಎಸ್.ಶಿವಲಿಂಗಪ್ಪ, ಎಂ.ಚಂದ್ರಶೇಖರನ್, ಕೆ.ರಾಮಚಂದ್ರಯ್ಯ ಮತ್ತು ಡಾ.ವೆಂಕಟಕೃಷ್ಣಪ್ಪ ದೂರು ನೀಡಿದ್ದು, ನೋಂದಣಿ ಪತ್ರ ಹಾಗೂ ಕ್ರಯಪತ್ರ ಪಡೆದ ನಿವೇಶನದಾರರು ಕನಿಷ್ಠ ಹತ್ತು ವರ್ಷ ನಿವೇಶನ ಮಾರಾಟ ಮಾಡುವಂತಿರರಲ್ಲ. 2014ರಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರ ಅರ್ಕಾವತಿ ಲೇಔಟ್ನಲ್ಲಿ ನೀಡಲಾಗಿದ್ದ ನಿವೇಶನ ಹಿಂಪಡೆದಿತ್ತು. ಅಲ್ಲದೆ, ಮಾಲೀಕರಿಂದ ವಶಪಡಿಸಿಕೊಂಡ ಜಾಗವನ್ನು ಅವರಿಗೂ ಹಿಂದಿರುಗಿಸಿಲ್ಲ. ಹಂಚಿಕೆ ಮಾಡಿ ನೋಂದಣಿ ಮಾಡಿದ ತಮ್ಮ ನಿವೇಶನಗಳಲ್ಲಿ ಮನೆ ನಿರ್ಮಾಣಕ್ಕೆ ಅನುವು ಮಾಡುತ್ತಿಲ್ಲ ಎಂದು ದೂರುದಾರರು ಆರೋಪಿಸಿದ್ದಾರೆ.
Advertisement