
ಚಿತ್ರದುರ್ಗ: ಹತ್ಯೆಯಾದ ಚಿತ್ರದುರ್ಗದ ರೇಣುಕಾಸ್ವಾಮಿ ಪತ್ನಿ ಸಹನಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು, ಮೊಮ್ಮಗನ ಆಗಮನದಿಂದ ರೇಣುಕಾಸ್ವಾಮಿ ಪೋಷಕರು ಸಂತಸಗೊಂಡಿದ್ದಾರೆ.
ರೇಣುಕಸ್ವಾಮಿ ಕೊಲೆಯಾದಾಗ ಸಹನಾ ಅವರು 5 ತಿಂಗಳ ಗರ್ಭಿಣಿಯಾಗಿದ್ದರು. ಬೆಳಿಗ್ಗೆ 6.55ರ ಸಮಯದಲ್ಲಿ ಅವರಿಗೆ ಸಹಜ ಹೆರಿಗೆಯಾಗಿದ್ದು ತಾಯಿ– ಮಗು ಆರೋಗ್ಯವಾಗಿದ್ದಾರೆಂದು ತಿಳಿದುಬಂದಿದೆ.
ಚಿತ್ರದುರ್ಗ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸಹನಾ ಅವರಿಗೆ ಹೆರಿಗೆ ಆಗಿದ್ದು, ಮಗನನ್ನು ಕಳೆದುಕೊಂಡಿದ್ದ ಕುಟುಂಬಕ್ಕೆ ಮಗುವಿನ ಆಗಮನದಿಂದ ಖುಷಿ ಸಿಕ್ಕಂತಾಗಿದೆ.
ನಟ ದರ್ಶನ್ ಆಪ್ತ ಗೆಳತಿ ಪವಿತ್ರಾಗೆ ರೇಣುಕಾ ಸ್ವಾಮಿ ಫೇಕ್ ಖಾತೆ ಮೂಲಕ ಮೆಸೇಜ್ ಮಾಡಿದ್ದರು. ಈ ವಿಚಾರ ದರ್ಶನ್ ಅವರ ಕೋಪಕ್ಕೆ ಕಾರಣ ಆಗಿತ್ತು. ಇದರಿಂದ ರೇಣುಕಾ ಸ್ವಾಮಿಯನ್ನು ಪತ್ತೆ ಮಾಡಿ, ಬೆಂಗಳೂರಿಗೆ ಕರೆತರುವ ಕೆಲಸ ದರ್ಶನ್ ಗ್ಯಾಂಗ್ನಿಂದ ಆಗಿತ್ತು.
ಬೆಂಗಳೂರಿನ ಪಟ್ಟಣಗೆರೆಯ ಶೆಡ್ನಲ್ಲಿ ರೇಣುಕಾಸ್ವಾಮಿ ಅವರನ್ನ ಕರೆತಂದು, ಶೆಡ್ನಲ್ಲಿ ರೇಣುಕಾಸ್ವಾಮಿ ಹತ್ಯೆ ಮಾಡಲಾಗಿತ್ತು. ರೇಣುಕಾ ಸ್ವಾಮಿ ಅವರನ್ನ ನಟ ದರ್ಶನ್ ಹಾಗೂ ಗ್ಯಾಂಗ್ ಕೊಲೆ ಮಾಡಿದ್ದಾರೆ ಎಂದು ಆರೋಪ ಇದ್ದು, ಸದ್ಯ ಈ ಪ್ರಕರಣ ನ್ಯಾಯಾಲಯದ ಅಂಗಳದಲ್ಲಿದೆ.
Advertisement