
ಬೆಂಗಳೂರು: ಬೆಂಗಳೂರು ನಗರದ ಭವಿಷ್ಯದ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಕಾವೇರಿ 6ನೇ ಹಂತದ ಯೋಜನೆಯನ್ನು ಶೀಘ್ರದಲ್ಲೇ ಜಾರಿಗೊಳಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಹೇಳಿದ್ದಾರೆ.
ಇಂದು ಮಳವಳ್ಳಿ ತಾಲೂಕಿನ ತೊರೆಕಡ್ನಹಳ್ಳಿ(ಟಿ.ಕೆ.ಹಳ್ಳಿ) ಯಲ್ಲಿ ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ನೀರು ಪೂರೈಸುವ ಕಾವೇರಿ 5ನೇ ಹಂತದ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಸಿಎಂ, ಒಟ್ಟು 7,200 ಕೋಟಿ ರೂಪಾಯಿ ವೆಚ್ಚದ ಕಾವೇರಿ 6ನೇ ಹಂತದ ಯೋಜನೆಯನ್ನು ಶೀಘ್ರ ಅನುಷ್ಠಾನಗೊಳಿಸುವುದಾಗಿ ಘೋಷಿಸಿದರು.
ಈಗಾಗಲೇ ಬೆಂಗಳೂರು ನಗರಕ್ಕೆ ವಿವಿಧ ಹಂತಗಳಲ್ಲಿ 2,225 ಎಂಎಲ್‌ಡಿ ನೀರು ಸರಬರಾಜು ಮಾಡಲಾಗುತ್ತಿದೆ. 6ನೇ ಹಂತದ ಯೋಜನೆಯು ಭವಿಷ್ಯದಲ್ಲಿ ಬೆಂಗಳೂರಿನ ಎಲ್ಲಾ ನಾಗರಿಕರಿಗೆ ಸಾಕಷ್ಟು ನೀರು ಒದಗಿಸಲಿದೆ. ಈ ಯೋಜನೆಯು 9 ಕೊಳಚೆನೀರು ಸಂಸ್ಕರಣಾ ಘಟಕಗಳನ್ನು(ಎಸ್‌ಟಿಪಿ) ಹೊಂದಲಿದೆ ಎಂದು ಸಿಎಂ ತಿಳಿಸಿದರು.
ಕುಡಿಯುವ ನೀರು ಪೂರೈಕೆಯ ವೆಚ್ಚ ಸುಮಾರು 5,200 ಕೋಟಿ ರೂಪಾಯಿ ಆಗಲಿದ್ದು, 9 ಎಸ್‌ಟಿಪಿಗಳ ನಿರ್ಮಾಣದ ವೆಚ್ಚ ಸುಮಾರು 2000 ಕೋಟಿ ರೂಪಾಯಿ ಆಗಲಿದೆ. ಎಲ್ಲವನ್ನೂ ಒಟ್ಟುಗೂಡಿಸಿ ಇದು 7200 ಕೋಟಿ ರೂಪಾಯಿಗಳ ಯೋಜನೆಯಾಗಿದೆ ಎಂದು ಹೇಳಿದರು.
"ನಗರದ ಮೂಲೆ ಮೂಲೆಗೂ ಸಮರ್ಪಕ ನೀರು ಪೂರೈಸುವ ಮೂಲಕ ಬೆಂಗಳೂರು ನಗರಕ್ಕೆ ನೀರಿನ ಕೊರತೆಯಾಗದಂತೆ ನೋಡಿಕೊಳ್ಳುವುದು ನಮ್ಮ ಗುರಿಯಾಗಿದೆ. ಇದಕ್ಕಾಗಿ ನಾವು 52 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದೇವೆ ಎಂದರು.
775 MLD ಸಾಮರ್ಥ್ಯದ 5ನೇ ಹಂತದ ಯೋಜನೆಯನ್ನು ಕಾರ್ಯಗತಗೊಳಿಸಿದ್ದಕ್ಕಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು BWSSBಯನ್ನು ಸಿಎಂ ಶ್ಲಾಘಿಸಿದರು ಮತ್ತು ಲಕ್ಷಾಂತರ ಜನ ಇದರ ಪ್ರಯೋಜನ ಪಡೆಯಲಿದ್ದಾರೆ ಎಂದು ಹೇಳಿದರು.
ಜೆಡಿಎಸ್-ಬಿಜೆಪಿ ವಿರುದ್ಧ ವಾಗ್ದಾಳಿ
ಬೆಂಗಳೂರಿನ ಅಭಿವೃದ್ದಿಗೆ ಬಿಜೆಪಿ ಮತ್ತು ಜೆಡಿಎಸ್ ಏನೂ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದ ಸಿಎಂ, 2007ರಲ್ಲಿ 110 ಗ್ರಾಮಗಳು ಮತ್ತು 7 ನಗರ ಪಾಲಿಕೆಗಳನ್ನು ಬಿಬಿಎಂಪಿಯೊಂದಿಗೆ ವಿಲೀನಗೊಳಿಸಿದಾಗ ಎಚ್‌ಡಿ ಕುಮಾರಸ್ವಾಮಿ ಸಿಎಂ ಆಗಿದ್ದರು. ಆದರೆ ಯಾವುದೇ ಮೂಲಭೂತ ಸೌಕರ್ಯಗಳನ್ನು ನೀಡಲಿಲ್ಲ ಎಂದರು.
ನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೂ ಏನೂ ಮಾಡಲಿಲ್ಲ. 2013ರಿಂದ 2018ರ ಅವಧಿಯಲ್ಲಿ ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಐದನೇ ಹಂತದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಈಗ ನಾನೇ ಉದ್ಘಾಟನೆ ಮಾಡಿದ್ದೇನೆ ಎಂದರು.
ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಡಿಪಿಆರ್ ಸಿದ್ಧಪಡಿಸಲಾಗಿದೆ. ಆದರೆ ಬಿಜೆಪಿ ಮತ್ತು ಜೆಡಿಎಸ್ ಸಂಸದರು ಕೇಂದ್ರ ಸರ್ಕಾರದ ಮುಂದೆ ಬಾಯಿ ಬಿಡುತ್ತಿಲ್ಲ. ಕೇಂದ್ರ ಸರಕಾರ ಭದ್ರಾ ಮೇಲ್ದಂಡೆ ಯೋಜನೆಗೆ 5000 ಕೋಟಿ ರೂ. ಘೋಷಣೆ ಮಾಡಿದ್ದರೂ ಹಣ ಬಿಡುಗಡೆ ಮಾಡುತ್ತಿಲ್ಲ ಎಂದರು.
"ಕೇಂದ್ರ ಸರ್ಕಾರ, ಕರ್ನಾಟಕದಿಂದ 4 ಲಕ್ಷ ಕೋಟಿ ತೆರಿಗೆ ಸಂಗ್ರಹಿಸುತ್ತದೆ. ಆದರೆ ಪ್ರತಿಯಾಗಿ 60,000 ಕೋಟಿ ರೂ. ಮಾತ್ರ ನೀಡುತ್ತದೆ. ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶ ರಾಜ್ಯಗಳು ಗರಿಷ್ಠ ಮೊತ್ತವನ್ನು ಪಡೆಯುತ್ತವೆ. ಕೇಂದ್ರ ಸರ್ಕಾರ ಮಲತಾಯಿ ದೋರಣೆ ಅನುಸರಿಸುತ್ತಿದೆ" ಎಂದು ವಾಗ್ದಾಳಿ ನಡೆಸಿದರು.
Advertisement