
ಹಾವೇರಿ: ರಾಜ್ಯಾದ್ಯಂತ ಮಳೆ ಆರ್ಭಟ ಜೋರಾಗಿರುವಂತೆಯೇ ಅತ್ತ ಹಾವೇರಿ ಜಿಲ್ಲೆಯಲ್ಲಿ ಮಳೆ ನೀರಿನಲ್ಲಿ 12 ವರ್ಷದ ಬಾಲಕನೋರ್ವ ಕೊಚ್ಚಿಕೊಂಡು ಹೋಗಿ ಬಳಿಕ ಪತ್ತೆಯಾಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ದಾರುಣ ಘಟನೆ ವರದಿಯಾಗಿದೆ.
ಹಾವೇರಿ ಜಿಲ್ಲೆಯ ಹಳೇ ಪಿ.ಬಿ.ರಸ್ತೆಗೆ ಹೊಂದಿಕೊಂಡಿರುವ ಶಿವಾಜಿನಗರದ 3ನೇ ಕ್ರಾಸ್‌ನಲ್ಲಿರುವ ಕಾಲುವೆಯಲ್ಲಿ ಬಾಲಕ ನಿವೇದನ್ ಬಸವರಾಜ ಗುಡಿಗೇರಿ ಎಂಬ ಬಾಲಕ ಕೊಚ್ಚಿಕೊಂಡು ಹೋಗಿದ್ದು, ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.
ಈ ವೇಳೆ ಬಾಲಕ ಮೆಡಿಕಲ್ ಶಾಪ್ ಮುಂಭಾಗದಲ್ಲಿದ್ದ ಸ್ಲ್ಯಾಬ್ನಲ್ಲಿ ಪತ್ತೆಯಾಗಿದ್ದ. ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಹಾಗೂ ಹೆಚ್ಚುವರಿ ಎಸ್ಪಿ ಶಿರಕೋಳ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬದುಕಿದ್ದ ಬಾಲಕ, ಆಸ್ಪತ್ರೆಯಲ್ಲಿ ಸಾವು
ಪತ್ತೆಯಾದ ಬಾಲಕನನ್ನು ಅಗ್ನಿಶಾಮಕ ಸಿಬ್ಬಂದಿ ಹಾಗೂ ಸಾರ್ವಜನಿಕರು ತಕ್ಷಣವೇ ಜಿಲ್ಲಾಸ್ಪತ್ರೆಗೆ ಹೊತ್ತು ಸಾಗಿಸಿದ್ದಾರೆ. ಆ್ಯಂಬುಲೆನ್ಸ್ ನಲ್ಲಿ ಕೃತಕ ಆಕ್ಸಿಜನ್ ಹಾಕಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ವೇಳೆ ಬಾಲಕ ಬದುಕಿದ್ದಾನೆಂದು ಸಿಬ್ಬಂದಿಗಳು ಕೂಗಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ವೇದು ಸತ್ತಿಲ್ಲ ಭಯಬೇಡಬೇಡಿ ಎಂದು ಕೂಗಿದ್ದಾರೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಅಟವಾಡುತ್ತಾ ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ಬಾಲಕ
ಬಾಲಕ ನಿವೇದನ್ ಸ್ನೇಹಿತರೊಂದಿಗೆ ಮಳೆ ನೀರಿನಲ್ಲಿ ಆಟವಾಡುತ್ತಿದ್ದ. ಕಾಲುವೆಯಲ್ಲಿ ನೀರು ರಭಸವಾಗಿ ಹರಿಯುತ್ತಿತ್ತು. ಈ ವೇಳೆ ಮಳೆ ನೀರಿನ ಹರಿವು ಹೆಚ್ಚಿದ್ದರಿಂದ ಆತ ಕೊಚ್ಚಿಕೊಂಡು ಹೋಗಿದ್ದಾನೆ.
ಪರಿಹಾರ ಕ್ರಮಗಳಿಗೆ ಸಚಿವರ ನಿರ್ದೇಶನ
ಮಳೆಯಿಂದ ಸಂಭವಿಸಿರುವ ಹಾನಿಗೆ ತಕ್ಷಣ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಎಸ್ ಪಾಟೀಲ ಅವರು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ.
ಬಾಲಕ ನಿವೇದನ್ ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಸಚಿವರು ನಿವೇದನ್ ಕುಟುಂಬಕ್ಕೆ ಪರಿಹಾರ ವಿತರಣೆಗೆ ಸೂಚನೆ ನೀಡಿದ್ದಾರೆ. ಚರಂಡಿ ನೀರು ಸರಾಗವಾಗಿ ಹರಿದುಹೋಗುವಂತೆ ಎಲ್ಲೆಲ್ಲಿ ಬ್ಲಾಕ್ ಆಗಿದೆ ಎಂಬುದನ್ನು ಗುರುತಿಸಿ ತೆರವುಗೊಳಿಸಬೇಕು. ಮನೆಗಳಿಗೆ ಮಳೆ ನೀರು ನುಗ್ಗಿ ಸಂಕಷ್ಟದಲ್ಲಿರುವ ಕುಟುಂಬಗಳ ನೆರವಿಗೆ ತಕ್ಷಣ ಧಾವಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಮಳೆಗಾಲ ಆರಂಭದ ಸಮಯದಲ್ಲೇ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿದುಹೋಗುವಂತೆ ದುರಸ್ತಿ ಕ್ರಮಗಳನ್ನು ಕೈಗೊಂಡಿದ್ದರೆ ಈ ಅನಾಹುತ ಸಂಭವಿಸುತ್ತಿರಲಿಲ್ಲ. ಮನೆಗಳಿಗೆ ನೀರು ನುಗ್ಗಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ತಕ್ಷಣ ತಾತ್ಕಾಲಿಕ ಪುನರ್ವಸತಿ ಕಲ್ಪಿಸಬೇಕು. ಅಗತ್ಯವಿದ್ದರೆ ಕಾಳಜಿ ಕೇಂದ್ರಗಳನ್ನು ಆರಂಭಿಸಬೇಕು ಎಂದು ಆದೇಶ ಮಾಡಿದ್ದಾರೆ.
ಕರ್ತವ್ಯ ಲೋಪ ಎಸಗಿ ಮಳೆಯಿಂದ ಅನಾಹುತಗಳು ಸಂಭವಿಸಲು ಕಾರಣರಾದ ಸಂಬಂಧಪಟ್ಟ ನಗರಸಭೆಯ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
Advertisement