ಬೆಂಗಳೂರು: ಬೆಂಗಳೂರು ನಗರದ ನಮ್ಮ ಮೆಟ್ರೋದ ವಿಸ್ತರಿತ ಮಾರ್ಗ ರೈಲು ಸಂಚಾರಕ್ಕೆ ಸಿದ್ಧವಾಗಿದೆ. 3.14-ಕಿಮೀ ಹಸಿರು ಮಾರ್ಗ ಮೆಟ್ರೋ ವಿಸ್ತರಣೆಯು ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಹೀಗಾಗಿ ನಗರದ ಹೃದಯ ಭಾಗಕ್ಕೆ ಪ್ರಯಾಣಿಸುವ ಜನರು ಕುತೂಹಲದಿಂದ ಕಾಯುತ್ತಿದ್ದಾರೆ.
ಈ ಮಾರ್ಗ ಪೂರ್ಣಗೊಳ್ಳುವುದರಿಂದ ನೆಲಮಂಗಲ, ಮಾದನಾಯಕನಹಳ್ಳಿ, ಮಾಕಳಿ ನಾಗರಿಕರು, ನಾಗಸಂದ್ರ-ಮಾದಾವರ ಮಾರ್ಗದ ಮೂರು ನಿಲ್ದಾಣಗಳ ಸಮೀಪದ ಅಪಾರ್ಟ್‌ಮೆಂಟ್‌ಗಳ ನಿವಾಸಿಗಳು ಮತ್ತು ಸುತ್ತಮುತ್ತಲಿನ ಗ್ರಾಮಗಳ ಪ್ರಯಾಣಿಕರ ದಿನಚರಿಯಲ್ಲಿ ಭಾರೀ ಬದಲಾವಣೆಯಾಗುವ ನಿರೀಕ್ಷೆಯಿದೆ. ನಮ್ಮ ಮೆಟ್ರೋ ಹಸಿರು ಮಾರ್ಗದ ವಿಸ್ತರಿತ ಯೋಜನೆ ನಾಗಸಂದ್ರ-ಮಾದಾವರ ನಡುವೆ ಮೂರು ನಿಲ್ದಾಣವಿದೆ. ಮಂಜುನಾಥ ನಗರ, ಚಿಕ್ಕಬಿದರಕಲ್ಲು (ಜಿಂದಾಲ್ ನಗರ), ಮಾದವರ (ಬಿಐಇಸಿ) ಮೂರು ನಿಲ್ದಾಣಗಳು ಹೊಸದಾಗಿ ಹಸಿರು ಮಾರ್ಗಕ್ಕೆ ಸೇರಲಿವೆ. ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಬುಧವಾರ ಈ ಹೊಸ ನಿಲ್ದಾಣಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಿತು. ಒಂದು ವಾರದೊಳಗೆ ಉದ್ಘಾಟನಾ ಸಮಾರಂಭ ನಡೆಯುವ ನಿರೀಕ್ಷೆ ಇರುವುದರಿಂದ ನಿಲ್ದಾಣಗಳನ್ನು ಸುಸಜ್ಜಿತಗೊಳಿಸಲಾಗುತ್ತಿದೆ. ಏಷ್ಯಾದ ಅತಿದೊಡ್ಡ ಪ್ರದರ್ಶನಗಳನ್ನು ಆಯೋಜಿಸುವ ಬೆಂಗಳೂರು ಇಂಟರ್ನ್ಯಾಷನಲ್ ಎಕ್ಸಿಬಿಷನ್ ಸೆಂಟರ್ (BIEC) ಬಲಭಾಗಕ್ಕೆ ಚಿಕ್ಕಬಿದರಕಲ್ಲು ನಿಲ್ದಾಣವಿದೆ.
ಈ ಮಾರ್ಗ ಸಂಚಾರಕ್ಕೆ ಮುಕ್ತವಾದ ಮೇಲೆ ನಮಗೆಮತ್ತಷ್ಟು ಅನುಕೂಲವಾಗುತ್ತದೆ. ತುಮಕೂರು ಮುಖ್ಯರಸ್ತೆಯಲ್ಲಿನ ದಟ್ಟಣೆಯಿಂದಾಗಿ ಅನೇಕರು ಇಲ್ಲಿಯ ಎಕ್ಸ್‌ಪೋಸ್‌ಗೆ ಭೇಟಿ ನೀಡುವುದಿಲ್ಲ. ಮೆಟ್ರೋ ಸಂಚಾರದಿಂದ ನಮ್ಮ ಕೇಂದ್ರಕ್ಕೆ ಜನರ ಸುಗಮ ಭೇಟಿಗೆ ಅವಕಾಶವಾಗುತ್ತದೆ. ವಾರ್ಷಿಕವಾಗಿ ಸುಮಾರು 15-20 ಲಕ್ಷ ಜನರು ಭೇಟಿ ನೀಡುತ್ತಾರೆ. ಇದು ಈಗ ಶೇ. 15 ರಿಂದ ಶೇ. 20 ರಷ್ಟು ಹೆಚ್ಚಾಗಬಹುದು ಎಂದು BIEC ಯ ಹಿರಿಯ ನಿರ್ದೇಶಕ ಮತ್ತು ಮಾರ್ಕೆಟಿಂಗ್ ಮುಖ್ಯಸ್ಥ ಉಬೈದ್ ಅಹ್ಮದ್ ತಿಳಿಸಿದ್ದಾರೆ.
ಈ ಮಾರ್ಗದಿಂದ ರಾಜ್ಯದ ಆರ್ಥಿಕತೆಗೆ ಉತ್ತೇಜನ ದೊರಕುತ್ತದೆ ಎಂದು ಅವರು ಹೇಳಿದರು. "ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಪ್ರತಿನಿಧಿಗಳು ಸಾಮಾನ್ಯವಾಗಿ ಇನ್ನೂ ಕೆಲವು ದಿನ ಉಳಿಯಲು ಮತ್ತು ಸುತ್ತಮುತ್ತಲಿನ ಸ್ಥಳಗಳಿಗೆ ಭೇಟಿ ನೀಡುಂತೆ ಪ್ರೋತ್ಸಾಹಿಸುತ್ತದೆ. ಅವರ ಹೋಟೆಲ್ ವಾಸ್ತವ್ಯ, ಪ್ರೇಕ್ಷಣೀಯ ಸ್ಥಳಗಳು, ಪ್ರಯಾಣ ಮತ್ತು ಮುಂತಾದವುಗಳು ನೋಡಲು ಬಯಸುವುದರಿಂದ ಭಾರೀ ಪ್ರಮಾಣದಲ್ಲಿ ವ್ಯತ್ಯಾಸ ಉಂಟಾಗುತ್ತದೆ ಎಂದಿದ್ದಾರೆ.
2020ರಲ್ಲಿ ಮೆಟ್ರೊ ಮಾರ್ಗಕ್ಕೆ ಪಿಲ್ಲರ್‌ಗಳನ್ನು ಹಾಕಿದಾಗಿನಿಂದಲೇ ರಿಯಲ್ ಎಸ್ಟೇಟ್ ಬೆಲೆ ಏರಿಕೆಯಾಗಿದೆ. ಪ್ರತಿ ಚದರ ಅಡಿಗೆ 1,500 ರೂ.ನಿಂದ 2,000 ರೂ ಇತ್ತು. ಇಂದು ಪ್ರತಿ ಚದರ ಅಡಿಗೆ 3,500 ರಿಂದ 4,500 ರೂ ಏರಿಕೆಯಾಗಿದೆ, ಇದು ಪಾರ್ಲೆ ಟೋಲ್ ಪ್ಲಾಜಾದಿಂದ ಮಾದನಾಯಕನಹಳ್ಳಿಯವರೆಗೆ ಅನ್ವಯಿಸುತ್ತದೆ. ಬಾಡಿಗೆ ಮೌಲ್ಯವೂ ಹೆಚ್ಚಾಗುವ ನಿರೀಕ್ಷೆಯಿದೆ. ಮೆಟ್ರೋ ನೆಟ್‌ವರ್ಕ್ ಸ್ಪರ್ಶಿಸಿರುವುದರಿಂದ ಈ ಪ್ರದೇಶವನ್ನು ಈಗಾಗಲೇ ಪಂಚಾಯತ್‌ನಿಂದ ನಗರ ಮುನ್ಸಿಪಲ್ ಕಾರ್ಪೊರೇಶನ್‌ಗೆ ಮೇಲ್ದರ್ಜೆಗೇರಿಸಲಾಗಿದೆ ಎಂದು ಮಾದನಾಯಕನಹಳ್ಳಿಯ ಸಂಗಮ್ ಪ್ರಾಪರ್ಟೀಸ್ ಮಾಲೀಕ ಕೆ.ಆರ್.ಅರುಣ್ ವಿವರಿಸಿದ್ದಾರೆ. ಆನಂದ್ ರಾವ್ ಸರ್ಕಲ್‌ನಲ್ಲಿರುವ ಪಿಡಬ್ಲ್ಯುಡಿ ಕಚೇರಿಗೆ ಆಗಾಗ್ಗೆ ಪ್ರಯಾಣಿಸುವ ಗುತ್ತಿಗೆದಾರ ಸಂದೀಪ್, “ನಾನು ಮೆಟ್ರೊ ಹಿಡಿಯಲು ನಾಗಸಂದ್ರಕ್ಕೆ 4 ಕಿಮೀ ಓಡಬೇಕು ಆದರೆ ಈಗ ನಾನು ರೈಲು ಹಿಡಿಯಲು ಮಾದಾವರಕ್ಕೆ ಸುಲಭವಾಗಿ ಹೋಗುತ್ತೇನೆ. ಇದು ನನಗಷ್ಟೇ ಅಲ್ಲ, ಪ್ರತಿನಿತ್ಯ ಕೆ.ಆರ್.ಮಾರುಕಟ್ಟೆಗೆ ಹೋಗುವ ವಿದ್ಯಾರ್ಥಿಗಳು ಮತ್ತು ಮಾರಾಟಗಾರರಿಗೂ ಹೆಚ್ಚಿನ ಪ್ರಯೋಜನವಾಗಲಿದೆ ಎಂದಿದ್ದಾರೆ.
ಪ್ರೆಸ್ಟೀಜ್ ಜಿಂದಾಲ್ ಸಿಟಿಯಲ್ಲಿ ವಾಸವಾಗಿರುವ ಉದ್ಯಮಿ ಜಗದೀಶ್ ಎಲ್.ಆರ್.ಗೌಡ ಮಾತನಾಡಿ, ಈಗ ತುಮಕೂರು ರಸ್ತೆ ಸಂಚಾರ ದಟ್ಟಣೆ ಕಡಿಮೆಯಾಗುವ ಸಾಧ್ಯತೆಯಿದೆ. ಮೆಟ್ರೋ ನಿಲ್ದಾಣದ ಹಿಂಭಾಗದಲ್ಲಿರುವ ನಮ್ಮ ಅಪಾರ್ಟ್ ಮೆಂಟ್ ನಲ್ಲಿ 3,600 ಫ್ಲಾಟ್‌ಗಳಿವೆ. ಈಗ ಜಯನಗರಕ್ಕೆ ತಲುಪಲು 1.5 ಗಂಟೆ ತೆಗೆದುಕೊಳ್ಳುತ್ತೇನೆ, ಅದರೆ ಮೆಟ್ರೋ ಸಂಚಾರ ಆರಂಭಾದ ಮೇಲೆ ಕೇವಲ 30 ರಿಂದ 40 ನಿಮಿಷಗಳುಲ್ಲಿ ನಾನು ಜಯನಗರಕ್ಕೆ ತಲುಪಬಹುದು, ಇದರಿಂದ ನಮಗೆ ಸಾಕಷ್ಟು ಸಮಯವನ್ನು ಉಳಿಸಲು ಸಾಧ್ಯವಾಗುತ್ತದೆ ಎಂದಿದ್ದಾರೆ.
Advertisement