
ಬೆಂಗಳೂರು: ನಮ್ಮ ಮೆಟ್ರೋ ಕಾರಿಡಾರ್ ವಿಸ್ತರಿತ ತುಮಕೂರು ರಸ್ತೆಯ ನಾಗಸಂದ್ರ-ಮಾದಾವರ ನಡುವಿನ 3.17 ಕಿ.ಮೀ ಉದ್ದದ ಹಸಿರು ಮಾರ್ಗದಲ್ಲಿ ಗುರುವಾರ ಮೆಟ್ರೋ ರೈಲು ಸುರಕ್ಷತಾ ಆಯುಕ್ತರ ತಂಡ (ಸಿಎಂಆರ್‌ಎಸ್) ತಪಾಸಣೆ ಪೂರ್ಣಗೊಳಿಸಿದೆ.
ತಪಾಸಣೆ ಪೂರ್ಣಗೊಳಿಸಿರುವ ತಂಡ ಇನ್ನೆರಡು ದಿನಗಳಲ್ಲಿ ವರದಿ ನೀಡುವ ನಿರೀಕ್ಷೆಯಿದ್ದು, ಶೀಘ್ರದಲ್ಲೇ ಇಲ್ಲಿ ಪ್ರಯಾಣಿಕರ ಸಂಚಾರ ಪ್ರಾರಂಭವಾಗಲಿದೆ.
ಮೋಟಾರ್ ಟ್ರಾಲಿ ಮೂಲಕ ಮಾರ್ಗದಲ್ಲಿ ಸಂಚರಿಸಿದ ತಂಡ, ಪರಿಶೀಲನೆ ನಡೆಸಿತು. ಮಾರ್ಗದ ತಿರುವು, ಪ್ರಾಯೋಗಿಕ ಸಂಚಾರದ ವೇಳೆಯಲ್ಲಿ ರೈಲಿನ ವೇಗ, ನಿಲ್ದಾಣಗಳಲ್ಲಿ ನಿಲ್ಲಬೇಕಾದಾಗ ನಿಧಾನಗತಿ, ಬ್ರೇಕ್ ಸಿಸ್ಟಂ, ವಿದ್ಯುತ್ ಪೂರೈಕೆ ಸೇರಿ ಇತರೆ ಅಂಕಿಅಂಶಗಳ ಮಾಹಿತಿಯನ್ನು ಮೆಟ್ರೋ ರೈಲು ನಿಗಮದ ಅಧಿಕಾರಿಗಳಿಂದ ಪಡೆದುಕೊಂಡರು.
ಮಂಜುನಾಥ ನಗರ, ಚಿಕ್ಕಬಿದರಕಲ್ಲು (ಜಿಂದಾಲ್ ನಗರ) ಮತ್ತು ಮಾದಾವರ ಮೂರು ನಿಲ್ದಾಣಗಳು ಈ ಹಸಿರು ಮಾರ್ಗದಲ್ಲಿ ಬರಲಿವೆ. ಸಿಎಂಆರ್‌ಎಸ್ ವರದಿಗಾಗಿ ಕಾಯುತ್ತಿದ್ದು, ಒಪ್ಪಿಗೆ ನೀಡಿದ ಕೂಡಲೇ ಮೆಟ್ರೋ ಸೇವೆ ಪ್ರಾರಂಭಿಸಲಾಗುವುದು. ಎಂದು ಬಿಎಂಆರ್'ಸಿಎಲ್ ಎಂಡಿ ಮಹೇಶ್ವರ್ ರಾವ್ ಅವರು ಹೇಳಿದ್ದಾರೆ.
ಈ ತಿಂಗಳ ಅಂತ್ಯದೊಳಗೆ ಮೆಟ್ರೋ ಸೇವೆ ಪ್ರಾರಂಭಿಸಲು ಬಿಎಂಆರ್‌ಸಿಎಲ್ ಸಿದ್ಧತೆ ನಡೆಸುತ್ತಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜ್ಯ ಮತ್ತು ಕೇಂದ್ರ ಸಚಿವರು ಲಭ್ಯತೆಯ ಮೇರೆಗೆ ದಿನಾಂಕವನ್ನು ದೃಢಪಡಿಸಲಾಗುವುದು. ಇದು ಅತ್ಯಂತ ಚಿಕ್ಕ ಮಾರ್ಗವಾಗಿರುವುದರಿಂದ ವಿಐಪಿಗಳ ಉಪಸ್ಥಿತಿ ಇಲ್ಲದೆಯೂ ಸೇವೆಯನ್ನು ಪ್ರಾರಂಭಿಸುವ ಸಾಧ್ಯತೆಗಳಿವೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ
Advertisement