
ಮೈಸೂರು: ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ 43 ವರ್ಷದ ವ್ಯಕ್ತಿಯೊಬ್ಬರು ಮಾಟಮಂತ್ರಕ್ಕೆ ಬಲಿಯಾಗಿದ್ದಾರೆ ಎನ್ನಲಾಗಿದೆ. ಮಲ್ಕುಂದಿ ಗ್ರಾಮದ ನಿವಾಸಿ ಸದಾಶಿವ ಮೃತ ವ್ಯಕ್ತಿ. ಈತ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ.
ಸದಾಶಿವನನ್ನು ಅಪರಿಚಿತ ದುಷ್ಕರ್ಮಿಗಳು ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದಾರಿಹೋಕನೊಬ್ಬ ತನ್ನ ಹೊಲಕ್ಕೆ ಹೋಗುತ್ತಿದ್ದಾಗ ಸದಾಶಿವ ರಕ್ತದ ಮಡುವಿನಲ್ಲಿ ಬಿದ್ಜಿರುವುದನ್ನು ಗಮನಿಸಿದ್ದಾರೆ. ಕೂಡಲೇ ಗ್ರಾಮಸ್ಥರಿಗೆ ತಿಳಿಸಿದಾಗ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ. ಘಟನಾ ಸ್ಥಳದಲ್ಲಿ ವೀಳ್ಯದೆಲೆ, ಅಡಿಕೆ, ನಿಂಬೆಹಣ್ಣು ಮತ್ತು 101 ರೂ.ಗಳ ಜೊತೆಗೆ ಮಾಟಮಂತ್ರದ ಆಚರಣೆಗೆ ಸಂಬಂಧಿಸಿದ ವಸ್ತುಗಳು ಪತ್ತೆಯಾಗಿದೆ.
ತಕ್ಷಣವೇ ನಂಜನಗೂಡು ಜನರಲ್ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಾಗಲೇ ಸದಾಶಿವ ಮೃತಪಟ್ಟಿದ್ದ. ಹುಲ್ಲಳ್ಳಿ ಠಾಣೆಯ ಪಿಎಸ್‌ಐ ಚೇತನ್‌ಕುಮಾರ್ ಹಾಗೂ ಇತರ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪ್ರಾಥಮಿಕ ತನಿಖೆ ನಡೆಸಿದರು. ಸದಾಶಿವ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನಂಜನಗೂಡು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ನಂಜನಗೂಡು ಡಿಎಸ್ಪಿ ರಘು ನೇತೃತ್ವದ ಪೊಲೀಸ್ ತಂಡ ಹೆಚ್ಚಿನ ತನಿಖೆ ನಡೆಸುತ್ತಿದೆ.
Advertisement