
ಬೆಂಗಳೂರು: ಮದ್ಯ ಸೇವಿಸಿ ಪ್ರತಿನಿತ್ಯ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ಮಗನನ್ನು ತಂದೆಯೇ ಹತ್ಯೆಗೈದಿರುವ ಘಟನೆ ಕೆಂಗೇರಿ ಠಾಣೆ ವ್ಯಾಪ್ತಿಯ ನಾಗದೇವನಹಳ್ಳಿಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ರಾಜೇಶ್ (36) ಕೊಲೆಯಾದವರು. ಲಿಂಗಪ್ಪ ಹತ್ಯೆಗೈದ ಆರೋಪಿ.
ಕ್ಯಾಬ್ ಚಾಲಕನಾಗಿದ್ದ ರಾಜೇಶ್, ನಿತ್ಯವೂ ಪಾನಮತ್ತನಾಗಿ ಬಂದು ಪೋಷಕರೊಂದಿಗೆ ಜಗಳವಾಡುತ್ತಿದ್ದ. ತಡರಾತ್ರಿ ಪಾನಮತ್ತನಾಗಿ ಬಂದಿದ್ದ ರಾಜೇಶ್, ಮನೆಯ ಗೇಟ್‌ನ್ನ ಒದ್ದು, ತಂದೆಯ ಮೇಲೆ ಹಲ್ಲೆ ಮಾಡಲಾರಂಭಿಸಿದ್ದ. ಬೇಸತ್ತ ಲಿಂಗಪ್ಪ, ಪಾನಮತ್ತನಾಗಿದ್ದ ರಾಜೇಶ್'ನ ಕೈಕಾಲು ಕಟ್ಟಿ ಮರದ ದೊಣ್ಣೆಯಿಂದ ಹೊಡೆದಿದ್ದಾರೆ. ಇದರಿಂದಾಗಿ ರಾಜೇಶ್ ಮೃತಪಟ್ಟಿದ್ದಾನೆ. ಪತಿ ಮತ್ತು ಮಗ ಜಗಳವಾಡುತ್ತಿರುವುದನ್ನು ಕಂಡ ಲಿಂಗಪ್ಪ ಅವರ ಪತ್ನಿ ಪುಟ್ಟಮ್ಮ ತಮ್ಮ ಸೋದರಳಿಯ ಲೋಕೇಶ್ ಅವರನ್ನು ಸಹಾಯಕ್ಕೆ ಕರೆದಿದ್ದಾರೆ. ಲೋಕೇಶ್ ಮನೆಗೆ ಬಂದಾಗ ರಾಜೇಶ್ ತಲೆಯಿಂದ ತೀವ್ರ ರಕ್ತಸ್ರಾವವಾಗಿ ರಸ್ತೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ನಂತರ ಲೋಕೇಶ್ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದರು. ಶನಿವಾರ ಮಧ್ಯರಾತ್ರಿ 1.40ರ ಸುಮಾರಿಗೆ ಘಟನೆ ನಡೆದಿತ್ತು.
ಕುಡಿತದ ಚಟದಿಂದಾಗಿ ರಾಜೇಶನ ಪತ್ನಿ ಮಗುವಿನೊಂದಿಗೆ ಪೋಷಕರ ಮನೆಗೆ ಮರಳಿದ್ದರು. ಪತ್ನಿ ಬಿಟ್ಟು ಹೋದ ನಂತರ ರಾಜೇಶ್ ತನ್ನ ತಂದೆ ತಾಯಿಯ ಬಳಿಯೇ ಇದ್ದ. ಲಿಂಗಪ್ಪ, ಮಗನನ್ನು ಕತ್ತು ಹಿಸುಕಿ ಸಾಯಿಸುವ ಮೊದಲು, ಅದೇ ಹಗ್ಗದಿಂದ ಅವನ ಕೈಗಳನ್ನು ಕಟ್ಟಿದ್ದ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆರ್ ಆರ್ ನಗರದ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಕೆಂಗೇರಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement