
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೋಮವಾರ ಮುಂಜಾನೆ ಸುರಿದ ಭಾರಿ ಮಳೆಗೆ ನಗರ ನಿವಾಸಿಗಳು ತತ್ತರಿಸಿ ಹೋಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.
ಸೋಮವಾರ ಮುಂಜಾನೆಯೇ ಗುಡುಗು, ಸಿಡಿಲು ಸಹಿತ ಭಾರಿ ವರ್ಷಧಾರೆಯಾಗಿದ್ದು, ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ಭಾರಿ ಮಳೆ ಸುರಿದು ರಸ್ತೆಗಳು ಜಲಾವೃತಗೊಂಡಿವೆ.
ಪ್ರಮುಖವಾಗಿ ಮೆಜೆಸ್ಟಿಕ್, ಮೈಸೂರು ಬ್ಯಾಂಕ್ ಸರ್ಕಲ್, ವಿಧಾನಸೌಧ, ಶಾಂತಿನಗರ, ಜಯನಗರ, ತ್ಯಾಗರಾಜನಗರ, ಶ್ರೀನಗರ, ಕೆ.ಆರ್.ಮಾರ್ಕೆಟ್, ಟೌನ್ಹಾಲ್, ಕಾರ್ಪೊರೇಷನ್ ಸರ್ಕಲ್, ಮೈಸೂರು ರಸ್ತೆ, ವಿಜಯನಗರ, ಮಾಗಡಿ ರಸ್ತೆ, ರಾಜಾಜಿನಗರ, ಮಲ್ಲೇಶ್ವರಂ, ಯಶವಂತಪುರ, ಜಾಲಹಳ್ಳಿ, ಪೀಣ್ಯ, ಹೆಬ್ಬಾಳ, ಯಲಹಂಕ, ಬನ್ನೇರುಘಟ್ಟ ರಸ್ತೆ, ಕೆ.ಆರ್.ಪುರಂ, ಟಿನ್ ಫ್ಯಾಕ್ಟರಿ, ಮಹದೇವಪುರ, ಬೆಳ್ಳಂದೂರು, ಮಾರತ್ತಹಳ್ಳಿ, ಕಾಡುಬೀಸನಹಳ್ಳಿ, ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್, ಜೆ.ಪಿ.ನಗರ, ಬನಶಂಕರಿ, ಕತ್ರಿಗುಪ್ಪೆ, ಪದ್ಮನಾಭನಗರ, ನಾಯಂಡಹಳ್ಳಿ, ಕೆಂಗೇರಿ, ನಾಗರಬಾವಿ, ಆರ್ಆರ್ ನಗರ, ಕೋಣನಕುಂಟೆ, ತಲಘಟ್ಟಪುರ ಸೇರಿದಂತೆ ಹಲವೆಡೆ ಭಾರಿ ಮಳೆಯಾಗಿದೆ.
ಹಲವೆಡೆ ಟ್ರಾಫಿಕ್ ಜಾಮ್
ಇಂದು ಸೋಮವಾರವಾದ್ದರಿಂದ ಊರುಗಳಿಗೆ ಹೋಗಿದ್ದ ಮಂದಿ ನಗರಕ್ಕೆ ಆಗಮಿಸುತ್ತಿದ್ದು, ಇದೇ ಕಾರಣಕ್ಕೆ ಮುಂಜಾನೆ ಮೆಜೆಸ್ಟಿಕ್ ನಿಲ್ದಾಣದ ಸುತ್ತಮುತ್ತ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮೆಜೆಸ್ಟಿಕ್ ಬಳಿಯ ಓಕಳಿಪುರಂ ಅಂಡರ್ಪಾಸ್ ಜಲಾವೃತಗೊಂಡಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಅಂಡರ್ಪಾಸ್ನ ನೀರಿನಲ್ಲಿ ಆಟೋ, ಕಾರು ಸಿಲುಕಿದ ಪರಿಣಾಮ ಓಕಳಿಪುರಂ ಅಂಡರ್ಪಾಸ್ ಬಳಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.
ಸಿಲ್ಕ್‌ಬೋರ್ಡ್ ಜಂಕ್ಷನ್‌ನಲ್ಲೂ ಸಾಲು ಸಾಲು ತಾಪತ್ರಯ ತಲೆದೋರಿದೆ. ಪ್ರಮುಖ ರಸ್ತೆಗಳು ನದಿಯಂತಾಗಿದ್ದು, ವಾಹನಗಳು ತೇಲಿಕೊಂಡು ಹೋಗುವಷ್ಟು ರಭಸವಾಗಿ ನೀರು ಹರಿದಿದೆ. ಕೆಂಗೇರಿ ರೈಲ್ವೆ ನಿಲ್ದಾಣ ವರುಣಾರ್ಭಟಕ್ಕೆ ಹೊಳೆಯಂತೆ ಬದಲಾಗಿದ್ದು, ಇದರ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
ದಾಖಲೆಯ 78.2ಎಂಎಂ ಮಳೆ
ಇನ್ನು ಬೆಂಗಳೂರಿನಲ್ಲಿ ಇಂದು ಮುಂಜಾನೆ ದಾಖಲೆಯ 78.2ಎಂಎಂ ಮಳೆಯಾಗಿದ್ದು, ಸರ್ಜಾಪುರ, ಬೆಳ್ಳಂದೂರು ಭಾಗದಲ್ಲಿ 40ಎಂಎಂಗೂ ಅಧಿಕ ಮಳೆಯಾಗಿದ್ದು, ಮಡಿವಾಳದಲ್ಲಿ ಗರಿಷ್ಟ ಅಂದರೆ 50ಎಂಎಂಗೂ ಅಧಿಕ ಮಳೆಯಾಗಿದೆ. ಎಚ್ಎಎಲ್ ಏರ್ಪೋರ್ಟ್ ವ್ಯಾಪ್ತಿಯಲ್ಲಿ 10.8 ಮಿಮೀ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 25 ಮಿಮೀ, ಬಾಗಲಗುಂಟೆ 5.4 ಮಿಮೀ, ಶೆಟ್ಟಿಹಳ್ಳಿ 4.2 ಮಿಮೀ, ನಂದಿನಿ ಲೇಔಟ್ 3.3 ಮಿಮೀ, ಹೇರೋಹಳ್ಳಿ 2.9 ಮಿಮೀ, ಕೆಂಗೇರಿ ವ್ಯಾಪ್ತಿಯಲ್ಲಿ 2.1 ಮಿಲಿ ಮೀಟರ್ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
Advertisement